ಹೈದರಾಬಾದ್ (ತೆಲಂಗಾಣ): ಗಣೇಶ ಮೂರ್ತಿಗಳ ತಯಾರಿಕೆ ಮತ್ತು ನಿಮಜ್ಜನದ ಬಗ್ಗೆ ತೆಲಂಗಾಣ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ವಿಗ್ರಹಗಳ ತಯಾರಿಕೆ ಮತ್ತು ಮಾರಾಟಕ್ಕೆ ಯಾವುದೇ ನಿಷೇಧವಿಲ್ಲ ಎಂದು ಉಚ್ಛ ನ್ಯಾಯಾಲಯ ಮಧ್ಯಂತರ ತೀರ್ಪು ನೀಡಿದೆ. ಆದರೆ, ಹೈದರಾಬಾದ್ನ ಹುಸೇನ್ ಸಾಗರದಲ್ಲಿ ಪಿಒಪಿ ಮೂರ್ತಿಗಳನ್ನು ವಿಸರ್ಜಿಸಬಾರದು ಎಂದು ನ್ಯಾಯ ಪೀಠ ಸ್ಪಷ್ಟಪಡಿಸಿದೆ.
ಕಳೆದ ವರ್ಷದ ಪಿಒಪಿ ವಿಗ್ರಹಗಳ ಮೇಲೆ ನಿಷೇಧ ಹೇರಿ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಮಾರ್ಗಸೂಚಿಗಳನ್ನು ಹೊರಡಿಸಿತ್ತು. ಈ ಮಾರ್ಗಸೂಚಿಗಳನ್ನು ಪ್ರಶ್ನಿಸಿ ತೆಲಂಗಾಣ ಗಣೇಶ್ ಮೂರ್ತಿ ಕಲಾಕಾರ್ ಸಂಘ ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಮತ್ತು ನ್ಯಾಯಮೂರ್ತಿ ಎಸ್.ನಂದಾ ಪೀಠ ವಿಚಾರಣೆ ನಡೆಸಿತು.
ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ದುರ್ಗಾಪ್ರಸಾದ್ ವಾದ ಮಂಡಿಸಿ, ವೈಜ್ಞಾನಿಕ ಅಧ್ಯಯನ ನಡೆಸದೇ ಮಾರ್ಗಸೂಚಿ ಹೊರಡಿಸಲಾಗಿದೆ ಎಂದರು. ಜೊತೆಗೆ ಪಿಒಪಿ ಮೇಲೆ ಯಾವುದೇ ನಿಷೇಧವಿಲ್ಲ. ಹೀಗಾಗಿ ಮೂರ್ತಿ ತಯಾರಿಕೆಗೆ ಬಳಸಬಾರದು ಎಂದೂ ಹೇಳುವುದು ಸಮಂಜಸವಲ್ಲ. ಪಿಒಪಿ ಮೂರ್ತಿಗಳ ತಯಾರಿಕೆ ಹಾಗೂ ಮಾರಾಟದಲ್ಲಿ ತೊಡಗಿರುವ ಕಲಾವಿದರ ಮೇಲೆ ಹಲ್ಲೆ ನಡೆಸಲಾಗುತ್ತಿದೆ. ಕೋವಿಡ್‌ಗಿಂತ ಮೊದಲು ತಯಾರಿಸಿದ ವಿಗ್ರಹಗಳ ಮಾರಾಟಕ್ಕೂ ಅನುಮತಿ ನೀಡಬೇಕೆಂದು ಮನವಿ ಮಾಡಿದರು.
ಅಲ್ಲದೇ, ಸುಪ್ರೀಂಕೋರ್ಟ್ ಆದೇಶ ಒಂದು ವರ್ಷಕ್ಕೆ ಮಾತ್ರ ಸೀಮಿತವಾಗಿದೆ ಎಂದು ವಕೀಲ ದುರ್ಗಾಪ್ರಸಾದ್ ನ್ಯಾಯ ಪೀಠದ ಗಮನ ಸೆಳೆದರು. ಈಗ ಪೀಠ, ಈ ಹಿಂದಿನ ಯಾವುದೇ ನ್ಯಾಯಾಲಯದ ಆದೇಶಗಳನ್ನು ಮಾರ್ಪಾಡು ಮಾಡುತ್ತಿಲ್ಲ, ಮುಂದುವರಿಯಲಿದೆ ಎಂದು ಹೇಳಿತು.
ಈ ಹಂತದಲ್ಲಿ ಸರ್ಕಾರಿ ವಕೀಲ ಪಿ.ರಾಧೀವ್ ರೆಡ್ಡಿ ಮಧ್ಯಪ್ರವೇಶಿಸಿ, ಕನಿಷ್ಠ ವಿಗ್ರಹಗಳ ಗಾತ್ರವನ್ನಾದರೂ ಕಡಿಮೆ ಮಾಡಲು ಆದೇಶ ನೀಡುವಂತೆ ಕೋರಿದರು. ಆದರೆ, ನ್ಯಾಯ ಪೀಠ ತನ್ನ ಆದೇಶದದಲ್ಲಿ ಈ ಹೊಸ ವಿಷಯಗಳನ್ನು ಸೇರಿಸದೇ ವಿಚಾರಣೆಯನ್ನು ಮುಂದೂಡಿತು.
ಪಿಒಪಿ ಗಣೇಶ ಮೂರ್ತಿಗಳ ತಯಾರಿಕೆಗೆ ಅನುಮತಿ ನೀಡಿದ ಹೈಕೋರ್ಟ್ನ ಮಧ್ಯಂತರ ಆದೇಶವು ಮೂರ್ತಿ ತಯಾರಕರಲ್ಲಿ ಸಂತಸ ಮೂಡಿಸಿದೆ. ಆದರೆ, ಹೈದರಾಬಾದ್ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಹಿನ್ನಡೆ ಉಂಟಾಗಿದೆ. ಈಗಾಗಲೇ ಗಣೇಶ ನಿಮಜ್ಜನಕ್ಕಾಗಿ ಅಗತ್ಯ ಸಿದ್ಧತೆಗಳನ್ನು ಪಾಲಿಕೆ ಮಾಡಿಕೊಂಡಿದ್ದು, ಮಣ್ಣಿನ ಮೂರ್ತಿಗಳ ತಯಾರಿಕೆಗೆ ಪ್ರೋತ್ಸಾಹಿಸಲು ಮೂರು ತಿಂಗಳ ಕಾಲ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗಿತ್ತು.
ಅಲ್ಲದೇ, ಬೆಂಗಳೂರಿನಲ್ಲಿ ನಿರ್ಮಿಸಿರುವ ಕೃತಕ ಕೊಳಗಳ ಮಾದರಿಯಲ್ಲಿ ಹೈದರಾಬಾದ್ನಲ್ಲೂ ಪ್ರತಿ ವಲಯಕ್ಕೆ 8ರಂತೆ 50 ಇಂತಹ ಕೊಳಗಳನ್ನು ನಿರ್ಮಾಣಕ್ಕೆ ಮಹಾನಗರ ಪಾಲಿಕೆ ಟೆಂಡರ್ ಆಹ್ವಾನಿಸಿದೆ.
ಇದನ್ನೂ ಓದಿ: ಆಗರ್ಭ ಶ್ರೀಮಂತ ಈ 'ತಿರುಪತಿ ತಿಮ್ಮಪ್ಪ'... ಎರಡು ವರ್ಷಗಳಲ್ಲಿ ₹1,500 ಕೋಟಿ ದೇಣಿಗೆ ಸಂಗ್ರಹ