ನವದೆಹಲಿ: ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ವಿವಿಧ ರಾಜ್ಯಗಳ 152 ಪೊಲೀಸರಿಗೆ ಕೇಂದ್ರ ಗೃಹ ಇಲಾಖೆಯು ಪ್ರಕರಣಗಳ ತನಿಖೆಯ ಶ್ರೇಷ್ಠತೆಗಾಗಿ 'ಕೇಂದ್ರ ಗೃಹ ಸಚಿವರ ಪದಕ' (Union Home Ministers Medal for Excellence in Investigation) ಪ್ರಶಸ್ತಿ ನೀಡಿ ಗೌರವಿಸಿದೆ. ಕರ್ನಾಟಕದ ಆರು ಪೊಲೀಸ್ ಅಧಿಕಾರಿಗಳು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ರಾಜ್ಯವನ್ನು ಹೊರತುಪಡಿಸಿ ಕೇಂದ್ರೀಯ ತನಿಖಾ ದಳದ (ಸಿಬಿಐ) 15 ಮಂದಿ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದಿಂದ ತಲಾ 11 ಮಂದಿ, ಉತ್ತರ ಪ್ರದೇಶದ 10, ಕೇರಳ ಮತ್ತು ರಾಜಸ್ಥಾನದ 9, ತಮಿಳುನಾಡಿನ 8, ಬಿಹಾರದ 7, ಗುಜರಾತ್ ಮತ್ತು ದೆಹಲಿಯ 6 ಮಂದಿ ಪೊಲೀಸರು ಹಾಗೂ ಉಳಿದಂತೆ ಕೇಂದ್ರಾಡಳಿತ ಪ್ರದೇಶದ ಪೊಲೀಸ್ ಸಿಬ್ಬಂದಿಗೆ ಕೇಂದ್ರ ಗೃಹ ಸಚಿವರ ಪದಕ ನೀಡುತ್ತಿರುವುದಾಗಿ ಗೃಹ ಸಚಿವಾಲಯ ಘೋಷಿಸಿದೆ.
ಪ್ರಶಸ್ತಿ ಪಡೆದ ಕರ್ನಾಟಕದ ಪೊಲೀಸ್ ಅಧಿಕಾರಿಗಳಿವರು:
- ಪರಮೇಶ್ವರ್ ಎ. ಹೆಗ್ಡೆ - ಡಿವೈಎಸ್ಪಿ
- ಹೆಚ್.ಎನ್ ಧರ್ಮೇಂದ್ರ - ಎಸಿಪಿ
- ಸಿ.ಬಾಲಕೃಷ್ಣ - ಡಿವೈಎಸ್ಪಿ
- ಮನೋಜ್ ಹೋವಲೆ - ಪೊಲೀಸ್ ಇನ್ಸ್ಪೆಕ್ಟರ್
- ದೇವರಾಜ್ ಟಿ.ವಿ - ಸಿಪಿಐ
- ಶಿವಪ್ಪ ಸತ್ಯಪ್ಪ - ಪೊಲೀಸ್ ಇನ್ಸ್ಪೆಕ್ಟರ್
ಕೇಂದ್ರ ಗೃಹ ಸಚಿವರ ಪದಕ
ಅಪರಾಧ ಪ್ರಕರಣಗಳ ತನಿಖೆಯ ಉನ್ನತ ಗುಣಮಟ್ಟವನ್ನು ಉತ್ತೇಜಿಸುವ ಉದ್ದೇಶದಿಂದ ಮತ್ತು ತನಿಖಾ ಅಧಿಕಾರಿಗಳ ತನಿಖೆಯಲ್ಲಿ ಅಂತಹ ಶ್ರೇಷ್ಠತೆಯನ್ನು ಗುರುತಿಸುವ ಉದ್ದೇಶದಿಂದ 2018ರಿಂದ ಕೇಂದ್ರ ಗೃಹ ಸಚಿವಾಲಯವು 'ಕೇಂದ್ರ ಗೃಹ ಸಚಿವರ ಪದಕ' ನೀಡಿ ಗೌರವಿಸುತ್ತಿದೆ.