ಹೈದರಾಬಾದ್: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಘೋಷಣೆಯಾಗಿದ್ದು, 294 ಕ್ಷೇತ್ರಗಳಿಗೆ ಒಟ್ಟು 8 ಹಂತಗಳಲ್ಲಿ ಮತದಾನವಾಗಲಿದೆ. ಮೊದಲ ಹಂತದ ವೋಟಿಂಗ್ ಮಾರ್ಚ್ 27ರಂದು ನಡೆಯಲಿದ್ದು, ಅದಕ್ಕೂ ಒಂದು ದಿನ ಮುಂಚಿತವಾಗಿ ಪ್ರಧಾನಿ ನರೇಂದ್ರ ಮೋದಿ ನೆರೆಯ ಬಾಂಗ್ಲಾದೇಶಕ್ಕೆ ಪ್ರವಾಸ ಕೈಗೊಳ್ಳುತ್ತಿದ್ದಾರೆ.
ಮಾರ್ಚ್ 26ರಂದು ಪ್ರವಾಸ ಕೈಗೊಳ್ಳಲಿರುವ ನಮೋ ಢಾಕಾದ ಹಜರತ್ ಶಹಜಲಾಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದು ಇಳಿಯಲಿದ್ದು, ಅವರನ್ನ ಅಲ್ಲಿನ ಪ್ರಧಾನಿ ಶೇಕ್ ಹಸಿನಾ ಅದ್ಧೂರಿಯಾಗಿ ಸ್ವಾಗತಿಸಲಿದ್ದಾರೆ. 1971ರಲ್ಲಿ ಸ್ವಾತಂತ್ರ್ಯ ಪಡೆದುಕೊಂಡಿರುವ ಬಾಂಗ್ಲಾದೇಶ ಮಾರ್ಚ್ 26ಕ್ಕೆ 50ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಆಚರಿಸುತ್ತಿರುವ ಕಾರಣ, ಗೋಲ್ಡನ್ ಜುಬಲಿ ಆಚರಣೆಯಲ್ಲಿ ನಮೋ ಭಾಗಿಯಾಗಲಿದ್ದಾರೆ.
ಮಹಾಮಾರಿ ಸಾಂಕ್ರಾಮಿಕ ರೋಗದ ನಂತರ ನಮೋ ಕೈಗೊಳ್ಳುತ್ತಿರುವ ಮೊದಲ ವಿದೇಶಿ ಪ್ರವಾಸ ಇದಾಗಿದ್ದು, ಭಾರತ-ಬಾಂಗ್ಲಾ ನಡುವೆ ಅನೇಕ ಬಗೆಹರಿಯದ ಸಮಸ್ಯೆಗಳಿರುವ ಕಾರಣ ಈ ಪ್ರವಾಸ ಮಹತ್ವ ಪಡೆದುಕೊಂಡಿದೆ. ಬಾಂಗ್ಲಾ ಒಳನುಸುಳುವಿಕೆ, ವ್ಯಾಪಾರ ಅಸಮಾನತೆ, ಟೀಸ್ಟಾ ನದಿ ವಿವಾದ ಪ್ರಮುಖ ಸಮಸ್ಯೆಯಾಗಿದ್ದು, ಚೀನಾದ ಬೆಲ್ಟ್ ಮತ್ತು ರೋಡ್ ಇನಿಶಿಯೇಟಿವ್(ಬಿಆರ್ಐ)ಯಲ್ಲಿ ಬಾಂಗ್ಲಾ ಭಾಗವಹಿಸುವಿಕೆ ಕೂಡ ಒಂದು ಸಂಗತಿಯಾಗಿದೆ.
ಆದರೆ ಈ ಎಲ್ಲದರ ಹೊರತಾಗಿ, ಬಂಗಾಳದ ಮೊದಲ ಹಂತದ ಚುನಾವಣೆ(ಮಾರ್ಚ್ 27) ನಡೆಯುವ ಒಂದು ದಿನ ಮುಂಚಿತವಾಗಿ ನಮೋ ಈ ಪ್ರವಾಸ ಕೈಗೊಳ್ಳುತ್ತಿರುವುದು ಹೆಚ್ಚು ಕುತೂಹಲ ಮೂಡಿಸಿದೆ. ಜತೆಗೆ ಪ್ರಧಾನಿ ಮೋದಿ ಗೋಪಾಲಗಂಜ್ ಜಿಲ್ಲೆಯ ಪ್ರವಾಸ ಕೈಗೊಳ್ಳಲು ಯೋಜಿಸಿದ್ದು, ಇಲ್ಲಿನ ಈಶ್ವರಿಪುರದ ಜಿಸ್ಸೊರೆಶ್ವರಿ ದೇವಸ್ಥಾನದಲ್ಲಿ ಪ್ರಧಾನಿ ವಿಶೇಷ ಪೂಜೆ ಸಲ್ಲಿಕೆ ಮಾಡಲಿದ್ದಾರೆ. ತದನಂತರ ಬಾಂಗ್ಲಾದೇಶದ ಪ್ರಸಿದ್ಧ ಹಿಂದೂ ದೇವಾಲಯಕ್ಕೂ ನಮೋ ಭೇಟಿ ನೀಡಲಿದ್ದಾರೆ.
ಇದನ್ನೂ ಓದಿ: ನೇಪಾಳದಿಂದ ಪೆಟ್ರೋಲ್, ಡೀಸೆಲ್ ಕಳ್ಳಸಾಗಾಣಿಕೆ: ಆರು ತಿಂಗಳಲ್ಲಿ 84 ಜನರ ಬಂಧನ
ಒರಾಕಂಡಿ ಮಾಟುವಾ ಸಮುದಾಯದ ಪಿತಾಮಹ ಹರಿಚಂದ್ ಠಾಕೂರ್ ಅವರ ಜನ್ಮಸ್ಥಳವಾಗಿದ್ದು, ಬಾಂಗ್ಲಾ ವಿಭಜನೆ ಸಂದರ್ಭದಲ್ಲಿ ಭಾರತಕ್ಕೆ ವಲಸೆ ಬಂದ ಹರಿಚಂದ್ ಠಾಕೂರ್ ಮತ್ತು ಬಂಗಾಳದಲ್ಲಿನ ಅಸ್ಪೃಶ್ಯರ ಉನ್ನತಿಗಾಗಿ ಕೆಲಸ ಮಾಡಿದ್ದಾರೆ. ಇವರ ನಿಧನದ ನಂತರ ಪುತ್ರ ಗುರುಚಂದ್ ಠಾಕೂರ್ ಈ ಸ್ಥಳದಿಂದ ಅಧಿಕಾರ ವಹಿಸಿಕೊಂಡು ಜನರನ್ನ ಸಂಘಟಿಸಿದ್ದರು ಎಂದು ತಿಳಿದು ಬರುತ್ತದೆ. ಮೋದಿ ಬಾಂಗ್ಲಾ ಪ್ರವಾಸದ ವೇಳೆ ಒರಕಂಡಿ ದೇವಸ್ಥಾನಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ. ಇದಕ್ಕೆ ಮುಖ್ಯ ಕಾರಣ ಬಾಂಗ್ಲಾದೇಶದಿಂದ ವಲಸೆ ಬಂದ ಪಶ್ಚಿಮ ಬಂಗಾಳದ 2.5 ಕೋಟಿಗೂ ಹೆಚ್ಚು ಮತದಾರರು ಪ್ರಾಮುಖ್ಯತೆ ಪಡೆದುಕೊಳ್ಳಲಿದ್ದು, ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ವೋಟ್ ಬ್ಯಾಂಕಿಂಗ್ ಆಗುವ ಸಾಧ್ಯತೆ ಇದೆ.
ಇಂಡೋ-ಬಾಂಗ್ಲಾ ಗಡಿಯಲ್ಲಿರುವ ಜಿಲ್ಲೆಗಳಲ್ಲಿ ಗಣನೀಯ ಸಂಖ್ಯೆಯ ಹಿಂದೂ-ನಿರಾಶ್ರಿತರಿದ್ದಾರೆ. 1971ರಿಂದ ಹೆಚ್ಚಾಗಿ ಭಾರತಕ್ಕೆ ಬಂದ ವಲಸೆಗರು ಪಶ್ಚಿಮ ಬಂಗಾಳದ 30 ವಿಧಾನಸಭೆ ಕ್ಷೇತ್ರಗಳಲ್ಲಿ ನಿರ್ಣಾಯಕ ಪಾತ್ರ ನಿರ್ವಹಿಸಲಿದ್ದಾರೆ. ಇವರನ್ನ ಬಿಜೆಪಿ, ತೃಣಮೂಲ ಕಾಂಗ್ರೆಸ್ ಅಥವಾ ಎಡರಂಗದ ಮೈತ್ರಿಕೂಟ ನಿರ್ಲಕ್ಷ್ಯ ಮಾಡುವಂತಿಲ್ಲ. 2019ರ ಲೋಕಸಭೆ ಚುನಾವಣೆಯಲ್ಲಿ ಬೊಂಗಾಂವ್ ಮತ್ತು ರಣಘಾಟ್ ಸ್ಥಾನಗಳಲ್ಲಿ ತೃಣಮೂಲ ಕಾಂಗ್ರೆಸ್ಗೆ ಸೋಲಿನ ರುಚಿ ತೋರಿಸಿ ಬಿಜೆಪಿ ಯಶಸ್ವಿಯಾಗಿದೆ. ಆದರೆ ಲೋಕಸಭೆಯಲ್ಲಿ ಪೌರತ್ವ ತಿದ್ದುಪಡಿ ಮಸೂದೆ ಜಾರಿಗೆ ಬಂದು 15 ತಿಂಗಳಾಗಿದ್ದು, ಕಾನೂನು ಜಾರಿಗೆ ತರಲು ಸರ್ಕಾರ ನಿಯಮ ರೂಪಿಸಿಲ್ಲ.
ಮುಂದಿನ ಶುಕ್ರವಾರ(ಮಾರ್ಚ್ 26) ಪ್ರಧಾನಿ ಬಾಂಗ್ಲಾ ಭೇಟಿ ಉಭಯ ದೇಶಗಳ ನಡುವಿನ ಆರ್ಥಿಕ ಸಂಬಂಧ ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಬಲ್ಲದು ಎನ್ನಲಾಗಿದ್ದು, ಆದರೆ ಪಶ್ಚಿಮ ಬಂಗಾಳದಲ್ಲಿನ ಚುನಾವಣೆಯ ಮೇಲೆ ವ್ಯತಿರಿಕ್ತ ಪರಿಣಾಮ ಬಿರುವುದರಲ್ಲಿ ಯಾವುದೇ ರೀತಿಯ ಸಂದೇಹವಿಲ್ಲ.
ದೀಪಂಕರ್ ಬೋಸ್, ಸುದ್ದಿ ಸಂಯೋಜಕ, ಈಟಿವಿ ಭಾರತ್