ಪೂರ್ವ ಗೋದಾವರಿ(ಆಂಧ್ರಪ್ರದೇಶ): ದೇಶದಲ್ಲಿ ಸಂಕ್ರಮಣ ಹಬ್ಬ ಬರಲು ಸನ್ನಿಹಿತ ಆಗುತ್ತಿದ್ದಂತೆ ವಿವಿಧ ರಾಜ್ಯಗಳಲ್ಲಿ ದೇಶಿ ಕ್ರೀಡೆಗಳು ಮೆರಗು ಪಡೆದುಕೊಳ್ಳಲು ಶುರುವಾಗುತ್ತವೆ. ಪ್ರಮುಖವಾಗಿ ಆಂಧ್ರಪ್ರದೇಶದ ಪೂರ್ವ ಮತ್ತು ಪಶ್ಚಿಮ ಗೋದಾವರಿಯಲ್ಲಿ ಕೋಳಿ ಪಂದ್ಯಾಟ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ.
ಅದಕ್ಕಾಗಿ ಕೆಲವರು ವರ್ಷದಿಂದಲೇ ಕೋಳಿ(ಹುಂಜ)ವನ್ನು ಸಜ್ಜುಗೊಳಿಸುತ್ತಾರೆ. ಪ್ರಮುಖವಾಗಿ ಪೂರ್ವ ಗೋದಾವರಿಯ ವಿಕೆ ರಾಯಪುರಂನ ರೈಸಿಂಗ್ ಬೆಟ್(Raising Bet) ಹುಂಜಗಳು ಎಲ್ಲರಿಗೂ ಆಕರ್ಷಿತವಾಗುತ್ತವೆ. ಸುಮಾರು 20 ತಿಂಗಳು ವಯಸ್ಸಿನ ರೈಸಿಂಗ್ ಬೆಟ್ ಹುಂಜದ ಬೆಲೆ ಬರೋಬ್ಬರಿ 2.6 ಲಕ್ಷ ರೂಪಾಯಿ ಆಗಿದ್ದು, ವರ್ಷಗಟ್ಟಲೇ ಚೆನ್ನಾಗಿ ಮೇಯಿಸಿ, ಪಳಗಿಸಲಾಗುತ್ತದೆ.
ಈ ಹುಂಜಗಳ ಬಗ್ಗೆ ಮಾತನಾಡಿರುವ ಮಾಲೀಕ ಮಧು, ಕಳೆದ 20 ವರ್ಷಗಳಿಂದ ತಾವು ಹುಂಜಗಳ ಸಾಕಾಣಿಕೆಯಲ್ಲಿ ತೊಡಗಿಸಿಕೊಂಡಿದ್ದು, ಅವುಗಳಿಗೆ ಬಾದಾಮಿ, ಪಿಸ್ತಾ ಹಾಗೂ ಮಟನ್ ತಿನ್ನಿಸುತ್ತಾರಂತೆ. ಪ್ರತಿ ವರ್ಷದ ಸಂಕ್ರಮಣ ವೇಳೆಗೆ ನಡೆಯುವ ಪಂದ್ಯಕ್ಕಾಗಿ ಅವುಗಳನ್ನ ಸಿದ್ಧಪಡಿಸಲು 10-15 ತಿಂಗಳು ತೆಗೆದುಕೊಳ್ಳುತ್ತಾರಂತೆ. ಈ ಅವಧಿಯಲ್ಲಿ ಅವುಗಳ ಆಹಾರಕ್ಕಾಗಿ 10ರಿಂದ 30 ಸಾವಿರ ರೂ. ಖರ್ಚು ಮಾಡುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿರಿ: ಭಾರಿ ಹಿಮಪಾತದಲ್ಲೇ ಗರ್ಭಿಣಿ ಹೊತ್ತು ಸಾಗಿದ ಸೈನಿಕರು.. ಯೋಧರ ಮಾನವೀಯತೆಗೆ ಸಲಾಂ
ಹುಂಜಗಳ ತಳಿ ಆಧರಿಸಿ ಅವುಗಳನ್ನ 10 ರಿಂದ 50 ಸಾವಿರ ರೂ.ವರೆಗೆ ಮಾರಾಟ ಮಾಡುವುದಾಗಿ ತಿಳಿಸಿರುವ ಮಧು, ರೈಸಿಂಗ್ ಬೆಟ್ ಹುಂಜಗಳನ್ನ 1 ಲಕ್ಷದಿಂದ 2.6 ಲಕ್ಷದವರೆಗೆ ಮಾರಾಟ ಮಾಡುವುದಾಗಿ ಹೇಳಿಕೊಂಡಿದ್ದಾರೆ.
ಸಂಕ್ರಮಣದ ಸಂದರ್ಭದಲ್ಲಿ ಎರಡು ಹುಂಜಗಳ ಕಾಲಿಗೆ ಬ್ಲೇಡ್, ಕತ್ತಿ ಕಟ್ಟಿ ಪರಸ್ಪರ ಪಂದ್ಯಾಟಕ್ಕೆ ಬಿಡಲಾಗುತ್ತದೆ. ಈ ವೇಳೆ ಹುಂಜಗಳ ಮೇಲೆ ಸಾವಿರದಿಂದ ಲಕ್ಷದವರೆಗೆ ಬೆಟ್ಟಿಂಗ್ ನಡೆಯುತ್ತದೆ.