ಪಂಜಾಬ್ ವಿಧಾನಸಭೆಗೆ ಫೆ.20 ರಿಂದ ಮತದಾನ ನಡೆಯಲಿದೆ. ಕೊನೆಯ ಹಂತದ ಪ್ರಚಾರವೂ ಮುಗಿದಿದ್ದು, ರಾಜಕೀಯ ಪಕ್ಷಗಳು ಮತದಾರರನ್ನು ಸೆಳೆಯಲು ಇನ್ನಿಲ್ಲದ ಕಸರತ್ತು ಮಾಡುತ್ತಿವೆ. ಈ ಮಧ್ಯೆಯೇ ಬಿಜೆಪಿ ಪಂಜಾಬ್ನಲ್ಲಿ ಶತಾಯಗತಾಯ ಈ ಬಾರಿ ಅಧಿಕಾರ ಹಿಡಿಯಲೇಬೇಕೆಂದು ಸಿಖ್ ಗುರುಗಳ ಮೊರೆ ಹೋಗಿದೆ.
ನಿನ್ನೆಯಷ್ಟೇ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಸಿಖ್ ಧರ್ಮಗುರುಗಳ ಜೊತೆ ಸಂವಾದ ನಡೆಸಿದ್ದಾರೆ. ಇದಲ್ಲದೇ ಕಳೆದ ವಾರ ರಾಧಾ ಸೋಮಿ ಸತ್ಸಂಗದ ಅಧ್ಯಕ್ಷ ಬಾಬಾ ಗುರೀಂದರ್ ಸಿಂಗ್ ದಿಲ್ಲಿಯಾನ್ ಅವರ ಜೊತೆ ವಿಶೇಷ ಸಂವಾದ ನಡೆಸಿದ್ದಾರೆ. ಇದೇ ಬಾಬಾರನ್ನು ಗೃಹ ಸಚಿವ ಅಮಿತ್ ಶಾ ಕೂಡ ಭೇಟಿಯಾಗಿದ್ದಾರೆ.
ಇದಲ್ಲದೇ, ಗೃಹ ಸಚಿವರು ಅಮೃತಸರದಲ್ಲಿ ಜ್ಞಾನಿ ಹರ್‌ಪ್ರೀತ್ ಸಿಂಗ್ ಮತ್ತು ಅಕಾಲ್ ತಖ್ತ್‌ನ ಮುಖ್ಯಸ್ಥ ಜತೇದಾರ್ ಅವರೊಂದಿಗೆ ಸಭೆ ನಡೆಸಿದ್ದಾರೆ. ಬಿಜೆಪಿ ನಾಯಕರು ಪಂಜಾಬ್‌ನ 'ಬಾಬಾಗಳ' ಜೊತೆ ಚರ್ಚೆ ನಡೆಸುತ್ತಿರುವುದು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಮುಂಚೂಣಿಯಲ್ಲಿ ಆಮ್ ಆದ್ಮಿ ಪಕ್ಷ.. ಚುನಾವಣೆ ಪೂರ್ವ ನಡೆದ ಸಮೀಕ್ಷೆಗಳಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷ ಮುಂಚೂಣಿಯಲ್ಲಿದೆ ಎಂದು ತಿಳಿದುಬಂದಿದೆ. ಅಧಿಕಾರದ ಸನಿಹಕ್ಕೆ ಬರುವಷ್ಟು ಸ್ಥಾನಗಳನ್ನು ಪಕ್ಷ ಸಂಪಾದಿಸಲಿದೆ ಎಂದು ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಎರಡನೇ ಸ್ಥಾನದಲ್ಲಿ ಕಾಂಗ್ರೆಸ್ ಪೈಪೋಟಿ ನೀಡಲಿದೆ.
ಬಿಜೆಪಿ ಚುನಾವಣೆಗೂ ಮುನ್ನವೇ ಮಾಜಿ ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರ ಪಂಜಾಬ್ ಲೋಕ ಕಾಂಗ್ರೆಸ್ ಮತ್ತು ಶಿರೋಮಣಿ ಅಕಾಲಿಕ ದಳದ (ಯುನೈಟೆಡ್) ಜೊತೆ ಒಪ್ಪಂದ ಮಾಡಿಕೊಂಡಿದೆ. ಒಪ್ಪಂದದಂತೆ ಅಮರೀಂದರ್ ಸಿಂಗ್ ಪಕ್ಷ 30 ಸ್ಥಾನ, ಶಿರೋಮಣಿ ಅಕಾಲಿಕ ದಳ 17 ಸ್ಥಾನಗಳಲ್ಲಿ ಸ್ಪರ್ಧಿಸಿದರೆ, ಬಿಜೆಪಿ 64 ಸ್ಥಾನಗಳಲ್ಲಿ ಚುನಾವಣೆ ಎದುರಿಸಲಿದೆ.
ಇದರಿಂದ ಬಿಜೆಪಿ ಏಕಾಂಗಿಯಾಗಿ ಪ್ರಮುಖ ರಾಜಕೀಯ ಪಕ್ಷವಾಗಿ ಕಂಡುಬಂದಿಲ್ಲ. ಅಲ್ಲದೇ ಸುಖ್ಬೀರ್ ಸಿಂಗ್ ಬಾದಲ್ ಅವರ ಶಿರೋಮಣಿ ಅಕಾಲಿಕ ದಳ ಪಕ್ಷ ಸಿಖ್ಖರ ವಿರೋಧ ಎದುರಿಸುತ್ತಿದೆ. 2015 ರಲ್ಲಿ ಗುರುಗ್ರಂಥ ಸಾಹಿಬ್ ಅಪವಿತ್ರ, ರಾಜಧಾನಿಯಲ್ಲಿ ವರ್ಷವಿಡೀ ಜನರು ಪ್ರತಿಭಟನೆ ನಡೆಸಿದ್ದರೂ ಬೆಂಬಲ ನೀಡದೇ ಇರುವುದು ಪಕ್ಷಕ್ಕೆ ಮುಳುವಾಗಿ ಪರಿಣಮಿಸುವ ಸಾಧ್ಯತೆ ಹೆಚ್ಚಿದೆ. ಈ ಎಲ್ಲಾ ತಿಕ್ಕಾಟಗಳ ಮಧ್ಯೆ ಎಎಪಿ ಚುನಾವಣೆಯ ಲಾಭ ಪಡೆದುಕೊಳ್ಳಲು ಹವಣಿಸುತ್ತಿದೆ.
ಆಪ್ನ ಸಂದಿಗ್ಧತೆಗಳೇನು.. 10 ವರ್ಷಗಳ ಶಿರೋಮಣಿ ಅಕಾಲಿಕ ದಳ ಮತ್ತು ಕಳೆದ 5 ವರ್ಷದಿಂದ ಅಧಿಕಾರದಲ್ಲಿರುವ ಕಾಂಗ್ರೆಸ್ ಆಡಳಿತವನ್ನು ಕಂಡಿರುವ ಪಂಜಾಬ್ ಜನರು ಈ ಬಾರಿ ಆಪ್ ಸರ್ಕಾರಕ್ಕೆ ಮಣೆ ಹಾಕಲು ಮುಂದಾಗಿರುವ ಸೂಚನೆ ಗೋಚರಿಸುತ್ತಿದೆ. ಆದರೆ, ಪಂಜಾಬ್ನಲ್ಲಿ ಅಧಿಕಾರದ ಗದ್ದುಗೆ ಹಿಡಿಯಲು ಬಯಸಿರುವ ಆಪ್ಗೆ ಕೆಲವು ಅಪಸವ್ಯಗಳು ತೊಡರುಗಾಲಾಗಿವೆ.
2017ರ ಚುನಾವಣೆಯ ವೇಳೆ ಆಮ್ ಆದ್ಮಿ ಪಕ್ಷ ಪಂಜಾಬ್ನಲ್ಲಿ 80 ಸೀಟುಗಳನ್ನು ಗೆದ್ದು ಅಧಿಕಾರ ಹಿಡಿಯಲಿದೆ ಎಂದೇ ಭಾವಿಸಲಾಗಿತ್ತು. ಆದರೆ, ಖಲಿಸ್ತಾನ್ ಹೋರಾಟಗಾರರ ಮನೆಗೆ ಅರವಿಂದ್ ಕೇಜ್ರಿವಾಲ್ ಭೇಟಿ ನೀಡಿರುವುದು ಅಲ್ಲಿನ ಜನರಲ್ಲಿ ಅಸಮಾಧಾನ ಉಂಟು ಮಾಡಿತ್ತು. ಇದು ಚುನಾವಣೆಯ ವೇಳೆ ಪ್ರಭಾವ ಬೀರಿ ಪಕ್ಷ ಕೇವಲ 20 ಸ್ಥಾನಗಳನ್ನು ಮಾತ್ರ ಗಳಿಸಲು ಸಾಧ್ಯವಾಗಿತ್ತು.
ಬಳಿಕ ನಡೆದ ರಾಜಕೀಯ ಪಲ್ಲಟಗಳಲ್ಲಿ 11 ಆಪ್ ಶಾಸಕರು ಪಕ್ಷ ಬದಲಿಸಿದ್ದರು. 2019 ರ ಸಂಸತ್ ಚುನಾವಣೆಯ ವೇಳೆಯೂ ಆಪ್ ಜನ ಬೆಂಬಲ ಪಡೆಯುವಲ್ಲಿ ವಿಫಲವಾಗಿತ್ತು. ಈ ಬಾರಿಯಾದರೂ ಪಕ್ಷ ಅಧಿಕಾರ ಹಿಡಿಯಲಿದೆಯಾ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
ಡೇರಾ ಬಾಬಾಗಳ ಹಿಂದೆ ಬಿದ್ದ ಬಿಜೆಪಿ.. ಬಿಜೆಪಿ ರಾಜಕೀಯವಾಗಿ ಹಠಮಾರಿ ಹೋರಾಟದ ಪಕ್ಷ. ಅದು ಪಕ್ಷದ ಪ್ರತಿಕೂಲ ಪರಿಸ್ಥಿತಿಗಳ ಹೊರತಾಗಿಯೂ ಚುನಾವಣೆಯಲ್ಲಿ ಅಂತ್ಯದವರೆಗೂ ಹೋರಾಡಲು ಬಯಸುತ್ತದೆ. ಎಎಪಿ ಹೆಚ್ಚು ಸ್ಥಾನಗಳನ್ನು ಗೆಲ್ಲದಿದ್ದರೆ, ಕಾಂಗ್ರೆಸ್ ಕೂಡ ಇದೇ ಹಾದಿ ತುಳಿದಲ್ಲಿ ಆಗ ಬಿಜೆಪಿ ಹೊಸ ಪ್ರಯೋಗಕ್ಕೆ ಮುಂದಾಗಲು ಸಿದ್ಧತೆ ನಡೆಸುವ ಸಾಧ್ಯತೆ ಇದೆ.
ಹೀಗಾಗಿ ಪಕ್ಷ ಪಂಜಾಬ್‌ನ 6 ಡೇರಾ ಬಾಬಾಗಳ ಜೊತೆ ಸಂವಾದ ನಡೆಸಿ, ಡೇರಾ ಬಾಬಾಗಳ ಮೂಲಕ ಪಕ್ಷಕ್ಕೆ ಮತ ಪ್ರಮಾಣ ಹೆಚ್ಚಿಸಲು ಮಾಸ್ಟರ್ ಪ್ಲಾನ್ ಹಾಕಿಕೊಂಡಿದೆ. 6 ಡೇರಾಗಳು ಕನಿಷ್ಠ 68 ವಿಧಾನಸಭೆ ಸ್ಥಾನಗಳ ಮೇಲೆ ಪ್ರಭಾವ ಬೀರುತ್ತವೆ ಎಂದು ಹೇಳಲಾಗ್ತಿದೆ. ಅದರಲ್ಲೂ ಪ್ರಮುಖವಾಗಿ ಡೇರಾ ಸಚ್ಚಾ ಸೌದಾ ಮತ್ತು ರಾಧಾ ಸೋಮಿ ಸತ್ಸಂಗವು ಕ್ರಮವಾಗಿ 27 ಮತ್ತು 19 ಸ್ಥಾನಗಳ ಮೇಲೆ ಪ್ರಭುತ್ವ ಸಾಧಿಸಲಿದೆ. ಹೀಗಾಗಿ ಬಿಜೆಪಿ ಬಾಬಾಗಳ ಮೊರೆ ಹೋಗಿದೆ ಎಂದು ವಿಶ್ಲೇಷಿಸಲಾಗ್ತಿದೆ.
ಇದಲ್ಲದೇ ಉಳಿದ ಡೇರಾಗಳ ಬಾಬಾಗಳ ಜೊತೆ ಅಂದರೆ, ನೂರ್ಮಹಲ್ ಡೇರಾ (ದಿವ್ಯ ಜ್ಯೋತಿ ಜಾಗರಣ ಸಂಸ್ಥಾನ), ಡೇರಾ ಸಚ್ಖಂಡ್ ಬಲ್ಲನ್ ಮತ್ತು ಸಂತ ನಿರಂಕಾರಿ ಮಿಷನ್ ಸೇರಿದಂತೆ ಇತರ ಡೇರಾಗಳ ಮುಖ್ಯಸ್ಥರೊಂದಿಗೆ ಸಂಪರ್ಕವನ್ನು ಸಾಧಿಸಿದ್ದಾರೆ. ಡೇರಾಗಳ ಬೆಂಬಲದೊಂದಿಗೆ ಪಕ್ಷವು ಸುಮಾರು 25 ಸ್ಥಾನಗಳನ್ನು ಗೆಲ್ಲಬಹುದು ಎಂಬುದು ಬಿಜೆಪಿಯ ಲೆಕ್ಕಾಚಾರ. ಇದರ ಜೊತೆಗೆ ಸುಖಬೀರ್ ಬಾದಲ್ ಅವರ ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ಕೂಡ 2017 ಕ್ಕಿಂತಲೂ ಅಧಿಕ ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಲ್ಲಿದೆ.
ಡೇರಾ ಬಾಬಾಗಳು ಚುನಾವಣೆಯ ಬಳಿಕ ಯಾರಿಗೂ ಸ್ಪಷ್ಟ ಬಹುಮತ ದೊರೆಯದೇ ಅತಂತ್ರ ಪರಿಸ್ಥಿತಿ ಉಂಟಾದಲ್ಲಿ ಮೈತ್ರಿ ಸರ್ಕಾರ ರಚನೆಯ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇದನ್ನು ಬಿಜೆಪಿ ಚುನಾವಣೆಗೂ ಮೊದಲೇ ಅರಿತು ಡೇರಾ ಬಾಬಾಗಳ ಮೊರೆ ಹೋಗಿದೆ ಎಂಬುದು ರಾಜಕೀಯ ವಿಶ್ಲೇಷಕ, ಹಿರಿಯ ಪತ್ರಕರ್ತ ಶ್ರೀನಂದ್ ಝಾ ಅವರ ಅಂದಾಜು.