ಚೆನ್ನೈ: ತಮಿಳುನಾಡಿನಲ್ಲಿ ನಿಗೂಢವಾಗಿ ಮೃತಪಟ್ಟಿದ್ದ 12ನೇ ತರಗತಿ ಬಾಲಕಿಯ ಮೃತದೇಹವನ್ನು ಶನಿವಾರ ಪಡೆದು, ಅಂತ್ಯಸಂಸ್ಕಾರ ನಡೆಸಲು ಪೋಷಕರು ಒಪ್ಪಿದ್ದಾರೆ ಎಂದು ವಕೀಲ ಆರ್. ಶಂಕರಸುಬ್ಬು ಶುಕ್ರವಾರ ಮದ್ರಾಸ್ ಹೈಕೋರ್ಟ್‌ಗೆ ತಿಳಿಸಿದ್ದಾರೆ. ಶನಿವಾರ ಬೆಳಗ್ಗೆ 11 ಗಂಟೆಯೊಳಗೆ ಶವವನ್ನು ಪಡೆಯುವಂತೆ ಪೋಷಕರಿಗೆ ಕೋರ್ಟ್ ಸೂಚಿಸಿದೆ.
ಶುಕ್ರವಾರ ಮದ್ರಾಸ್ ಹೈಕೋರ್ಟ್, ಬಾಲಕಿಯ ತಂದೆ ಮತ್ತೊಮ್ಮೆ ಮರಣೋತ್ತರ ಪರೀಕ್ಷೆ ನಡೆಸಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನಡೆಸಿತು. ಬಳಿಕ ಪುದುಚೇರಿಯ ಜವಾಹರಲಾಲ್ ಇನ್‌ಸ್ಟಿಟ್ಯೂಟ್ ಆಫ್ ಪೋಸ್ಟ್ ಗ್ರಾಜುಯೇಟ್ ಮೆಡಿಕಲ್ ಎಜುಕೇಶನ್ ಅಂಡ್ ರಿಸರ್ಚ್‌ನ ಮೂವರು ವೈದ್ಯರ ಸಮಿತಿಯು ಶವಪರೀಕ್ಷೆ ವರದಿಯನ್ನು ಮೌಲ್ಯಮಾಪನ ಮಾಡಬೇಕು ಎಂದು ಆದೇಶಿಸಿದೆ.
ನಂತರ ನ್ಯಾಯಾಲಯವು ಶವವನ್ನು ಪಡೆಯಲು ತಡಮಾಡಿದ್ದಕ್ಕೆ ಪೋಷಕರಿಗೆ ಕಾರಣವನ್ನು ಕೇಳಿತು. ಬಳಿಕ ಶನಿವಾರ ಬೆಳಗ್ಗೆ 11 ಗಂಟೆಯೊಳಗೆ ಬಾಲಕಿಯ ಶವವನ್ನು ಸ್ವೀಕರಿಸುವಂತೆ ಪೋಷಕರಿಗೆ ಸೂಚಿಸಿತು. ಈ ಹಿನ್ನೆಲೆ ವಕೀಲ ಆರ್. ಶಂಕರಸುಬ್ಬು ಮದ್ರಾಸ್ ಹೈಕೋರ್ಟ್‌ಗೆ ಮಾಹಿತಿ ನೀಡಿ, ಮೃತ ಬಾಲಕಿಯ ಪೋಷಕರು ಜುಲೈ 23 ರಂದು ಆಕೆಯ ಶವ ಸ್ವೀಕರಿಸಲು ಮತ್ತು ಶನಿವಾರ ಸಂಜೆಯೊಳಗೆ ಅಂತ್ಯಕ್ರಿಯೆ ನಡೆಸಲು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ: ತಮಿಳುನಾಡು ವಿದ್ಯಾರ್ಥಿನಿ ಸಾವು: ಶಾಲೆಗೆ ಬಿಗಿ ಬಂದೋಬಸ್ತ್, ಶಿಕ್ಷಕ ಸೇರಿ ಮೂವರ ಬಂಧನ
ಕಲ್ಲಕುರಿಚಿಯ ಖಾಸಗಿ ಶಾಲೆಯ ಹಾಸ್ಟೆಲ್ ಮೇಲಿಂದ ಬಿದ್ದು ವಿದ್ಯಾರ್ಥಿನಿಯೊಬ್ಬಳು ಸಾವನ್ನಪ್ಪಿದ್ದಳು ಎನ್ನಲಾಗಿತ್ತು. ಮೊದಲು ಇದನ್ನು ಆತ್ಮಹತ್ಯೆ ಎಂದು ಪರಿಗಣಿಸಲಾಗಿದೆ. ಮರಣೋತ್ತರ ಪರೀಕ್ಷೆಯಲ್ಲಿ ಬಾಲಕಿಯ ದೇಹದ ಮೇಲೆ ಗಾಯದ ಗುರುತುಗಳಿರುವುದು ಪತ್ತೆಯಾಗಿದೆ. ಇದರಿಂದ ರೊಚ್ಚಿಗೆದ್ದ ವಿದ್ಯಾರ್ಥಿನಿ ಕುಟುಂಬಸ್ಥರು ಮತ್ತು ಬೆಂಬಲಿಗರು ಶಾಲೆಯ ಆವರಣಕ್ಕೆ ನುಗ್ಗಿ ದಾಂಧಲೆ ನಡೆಸಿದ್ದರು.