ಲಖನೌ(ಉತ್ತರ ಪ್ರದೇಶ): ಹೈಕೋರ್ಟ್ ನ್ಯಾಯಾಧೀಶರ ಮುಂದೆ ಅನುಚಿತವಾಗಿ ವರ್ತಿಸಿ, ಅವರ ವಿರುದ್ಧ ಆಕ್ಷೇಪಾರ್ಹ ಪದ ಬಳಕೆ ಮಾಡಿದ ವಕೀಲನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಅಲಹಾಬಾದ್ ಹೈಕೋರ್ಟ್ ಮುಂದಾಗಿದೆ.
ಅಶೋಕ್ ಪಾಂಡೆ ಎಂಬ ವಕೀಲನ ಮೇಲೆ ನ್ಯಾಯಾಧೀಶರನ್ನು ನಿಂದಿಸಿದ ಗಂಭೀರ ಆರೋಪವಿದೆ. 'ಗೂಂಡಾ' ಎಂದು ನ್ಯಾಯಮೂರ್ತಿಗಳನ್ನು ನಿಂದಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ವಕೀಲನನ್ನು ವಿಚಾರಣೆಗೆ ಒಳಪಡಿಸುವಂತೆ ಉತ್ತರಪ್ರದೇಶ ಬಾರ್ ಕೌನ್ಸಿಲ್ಗೆ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ದಿನೇಶ್ ಕುಮಾರ್ ಸಿಂಗ್ ಅವರ ನ್ಯಾಯಪೀಠವು ಸೂಚನೆ ನೀಡಿದೆ.
ಇದರೊಂದಿಗೆ ವಕೀಲನ ವಿರುದ್ಧ ನ್ಯಾಯಾಂಗ ನಿಂದನೆ ಆರೋಪವೂ ಕೇಳಿಬಂದಿದ್ದು, ಅಶೋಕ್ ಪಾಂಡೆ ವಕೀಲಿ ವೃತ್ತಿಯಲ್ಲಿ ಮುಂದುವರೆಯಬೇಕೇ?, ಬೇಡವೇ? ಎಂಬುದನ್ನು ಅಲಹಾಬಾದ್ ಹೈಕೋರ್ಟ್ ನಿರ್ಧಾರ ಮಾಡಲಿದೆ.
ನಡೆದಿದ್ದೇನು?
ಆಗಸ್ಟ್ 21ರಂದು ಕೋರ್ಟ್ನಲ್ಲಿ ಅರ್ಜಿ ವಿಚಾರಣೆ ನಡೆಯುತ್ತಿದ್ದ ವೇಳೆ, ಸಿವಿಲ್ ಡ್ರೆಸ್ನಲ್ಲಿ ಕೋರ್ಟ್ ಒಳಗೆ ಆಗಮಿಸಿದ್ದ ವಕೀಲ ಅಶೋಕ್ ಪಾಂಡೆ, ಅಂಗಿಯ ಗುಂಡಿಯನ್ನು ಬಿಚ್ಚಿ ಅನುಚಿತವಾಗಿ ವರ್ತಿಸಿದ್ದನು. ನ್ಯಾಯಮೂರ್ತಿಗಳ ಇದಷ್ಟೇ ಅಲ್ಲದ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದಲ್ಲದೇ ಗೂಂಡಾ ಎಂದು ನಿಂದಿಸಿದ್ದನು.
ಈ ವೇಳೆ ಕೋರ್ಟ್ ಅಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿಯ ನೆರವಿನಿಂದ ಆತನನ್ನು ಕೋರ್ಟ್ನಿಂದ ಹೊರಗೆ ಹಾಕಲಾಯಿತು. ಈಗ ಅಶೋಕ್ ಪಾಂಡೆ ವಿರುದ್ಧ ಕೋರ್ಟ್ ಸುಮೊಟೋ ದೂರು ದಾಖಲಿಸಿಕೊಂಡಿದ್ದು, ಆಗಸ್ಟ್ 31ಕ್ಕೆ ವಿಚಾರಣೆ ನಡೆಯಲಿದೆ.
ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಮತ್ತೋರ್ವ ಉಗ್ರನ ಹತ್ಯೆ: ಎನ್ಕೌಂಟರ್ ಮುಂದುವರಿಕೆ