ಗುಂಟೂರು (ಆಂಧ್ರಪ್ರದೇಶ) : ಗುಂಟೂರಿನ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ನೆಲ್ಲೂರು ಜಿಲ್ಲೆಯ ವೈಸಿಪಿ ಮುಖಂಡ, ಮೀನುಗಾರರ ಸಹಕಾರ ಒಕ್ಕೂಟದ (ಎಪಿಎಫ್‌ಸಿಒಎಫ್) ಅಧ್ಯಕ್ಷ ಕೊಂಡೂರು ಅನಿಲ್ ಬಾಬು ಸಹ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಾಲಕಿಯ ತಂದೆ ರಾಜ್ಯ ಎಸ್‌ಸಿ ಆಯೋಗಕ್ಕೆ ದೂರು ನೀಡಿದ್ದಾರೆ. ಅನಿಲ್ ನನ್ನ ಮಗಳನ್ನು ತನ್ನ ಗೆಸ್ಟ್ ಹೌಸ್ಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆಯ ತಂದೆ ಆರೋಪಿಸಿದ್ದಾರೆ.
ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ಕೊಂದುಬಿಡಬಹುದೆಂಬ ಭಯದಿಂದ ವಿಚಾರಣೆಯ ವೇಳೆ ಆತನ ಹೆಸರನ್ನು ಹೇಳಲಿಲ್ಲ ಎಂದು ಆತನ ಮಗಳು ಇತ್ತೀಚೆಗೆ ಎಸ್‌ಸಿ ಆಯೋಗಕ್ಕೆ ಮಾಹಿತಿ ನೀಡಿದ್ದಾಳೆ. ಈ ಬಗ್ಗೆ ಆಯೋಗ ತನಿಖೆಗೆ ಆದೇಶಿಸಿದೆ. ಈ ಹಿಂದೆ ಗುಂಟೂರು ಜಿಲ್ಲೆಯ ಸಂಸದರೊಬ್ಬರ ಪ್ರಮುಖ ಬೆಂಬಲಿಗರಾಗಿರುವ ಭೂಶಂಕರ್ ಅವರನ್ನು ನ್ಯಾಯಾಲಯದ ಆದೇಶದ ಮೇರೆಗೆ ಪೊಲೀಸರು ಬಂಧಿಸಿದ್ದರು. ಈ ಅತ್ಯಾಚಾರ ಪ್ರಕರಣದಲ್ಲಿ ಇತರರೂ ಇದ್ದಾರೆ ಎಂದು ಬಾಲಕಿಯ ತಂದೆ ತನಗೆ ಮನವಿ ಸಲ್ಲಿಸಿದ್ದಾರೆ ಎಂದು ಎಸ್‌ಸಿ ಆಯೋಗದ ಅಧ್ಯಕ್ಷ ವಿಕ್ಟರ್ ಪ್ರಸಾದ್ ಖಚಿತಪಡಿಸಿದ್ದಾರೆ ಮತ್ತು ಈ ಬಗ್ಗೆ ತನಿಖೆ ನಡೆಸುವಂತೆ ಗುಂಟೂರು ಪೊಲೀಸರಿಗೆ ಸೂಚಿಸಿದ್ದಾರೆ.
ಇದನ್ನೂ ಓದಿ: 'ನಾನು ಕುಡಿದಿದ್ದೇನೆ, ನಿಮಗೆ ಧಮ್ ಇದ್ರೆ ಬಂಧಿಸಿ ನೋಡೋಣ..' ಪೊಲೀಸರಿಗೆ ಅವಾಜ್ ಹಾಕಿದ್ದವ ಅಂದರ್
ಈ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಕೊಂಡೂರು ಅನಿಲ್ ಬಾಬು ಸ್ಪಷ್ಟನೆ ನೀಡಿದ್ದಾರೆ. ನನಗೆ ಯಾವುದೇ ಅತಿಥಿ ಗೃಹಗಳಿಲ್ಲ. ನನ್ನ ರಾಜಕೀಯ ಬೆಳವಣಿಗೆಯನ್ನು ಸಹಿಸದ ಕೆಲವರು ಹುಡುಗಿಯ ತಂದೆಯ ಮನವೊಲಿಸಿ ನನ್ನ ವಿರುದ್ಧ ದೂರು ಕೊಡಿಸಿದ್ದಾರೆ. ಆತನ ಹಿಂದೆ ಯಾರೋ ಇದ್ದಾರೆ, ಇದು ಪಿತೂರಿ. ಇಲ್ಲದಿದ್ದರೆ 4 ತಿಂಗಳ ಹಿಂದೆ ನಡೆದ ಈ ಪ್ರಕರಣದಲ್ಲಿ ಈಗ ನನ್ನ ಹೆಸರೇಕೆ? ನಾನು ಈ ಸಂಬಂಧ ವಿಚಾರಣೆ ಎದುರಿಸಲು ಸಿದ್ಧ ಎಂದಿದ್ದಾರೆ.
ಕೊರೊನಾದಿಂದ ಬಚಾವಾಗಿ ಮಾಂಸ ದಂಧೆಗೆ: ಸಂತ್ರಸ್ತ ಬಾಲಕಿ ಹಾಗೂ ಆಕೆಯ ತಾಯಿ ಕೊರೊನಾದಿಂದ ಕಳೆದ ವರ್ಷ ಗುಂಟೂರು ಜಿಜಿಎಚ್‌ಗೆ ಸೇರಿದ್ದರು. ಬಾಲಕಿ ಚೇತರಿಸಿಕೊಂಡಿದ್ದಳು. ಆದರೆ ಆಕೆಯ ತಾಯಿ ಕೋವಿಡ್ -19 ನಿಂದ ಸಾವನ್ನಪ್ಪಿದ್ದರು. ಈ ಸಂದರ್ಭದಲ್ಲಿ ಅಲ್ಲಿದ್ದ ಮಹಿಳೆಯೊಬ್ಬರು ತಾನು ಇಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದೇನೆ ಎಂದು ಬಾಲಕಿಯ ತಂದೆಗೆ ಪರಿಚಯಿಸಿಕೊಂಡಿದ್ದಾಳೆ. ಮುಂದೆ ಕೊರೊನಾ ಬರಬಾರದು ಎಂದು ಚಿಕಿತ್ಸೆ ಕೊಡಲು ತಂದೆಯನ್ನು ಮನವೊಲಿಸಿ ಬಾಲಕಿಯನ್ನು ಆಕೆ ಕರೆದೊಯ್ದಿದ್ದಾಳೆ. ಆದರೆ, ಕೆಲವು ದಿನಗಳ ನಂತರ ಬಾಲಕಿಯನ್ನು ಅ ಕಿರಾತಕಿ ವೇಶ್ಯಾವಾಟಿಕೆಗೆ ದೂಡಿದ್ದಾಳೆ.
ಗುಂಟೂರು, ವಿಜಯವಾಡ, ಒಂಗೋಲ್, ನೆಲ್ಲೂರು ಮತ್ತಿತರ ಕಡೆ ಕರೆದುಕೊಂಡು ಹೋಗಿ ವೇಶ್ಯಾವಾಟಿಕೆ ನಡೆಸುತ್ತಿದ್ದಳಂತೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಮಗಳು ಕಾಣೆಯಾಗಿದ್ದಾಳೆ ಎಂದು ಆಕೆಯ ತಂದೆ ಮೆಡಿಕೊಂಡೂರು ಪೊಲೀಸರಿಗೆ ದೂರು ನೀಡಿದ್ದರು. ಕೊನೆಗೆ ಮೂರು ತಿಂಗಳ ಹಿಂದೆ ಅವರಿಂದ ತಪ್ಪಿಸಿಕೊಂಡು ಗುಂಟೂರಿನ ಉಪನಗರವಾದ ಪೆರಾಚೆರ್ಲಾದಲ್ಲಿ ನೆಲೆಸಿರುವ ತನ್ನ ತಂದೆಯ ಬಳಿ ಆಕೆ ಬಂದಿದ್ದಳು. ಆಗ ಆಕೆ ಮೇಲೆ ನಡೆದ ಪೈಶಾಚಿಕ ಕೃತ್ಯದ ಬಗ್ಗೆ ಅಪ್ಪನಿಗೆ ತಿಳಿಸಿ ಮೆಡಿಕೊಂಡೂರು ಠಾಣೆಗೆ ದೂರು ನೀಡಿದ್ದಳು.
ಬಾಲಕಿಗೆ ಚಿಕಿತ್ಸೆ ನೀಡುತ್ತಿದ್ದ ಸ್ಥಳ ಬೇರೆ ಪ್ರದೇಶದಲ್ಲಿದ್ದರಿಂದ ಪ್ರಕರಣವನ್ನು ಅರಂದಲ್‌ಪೇಟೆ ಠಾಣೆಗೆ ವರ್ಗಾಯಿಸಲಾಗಿತ್ತು. ಇದೆಲ್ಲದರ ನಡುವೆ ಎಲ್ಲೆಲ್ಲಿ ವೇಶ್ಯಾವಾಟಿಕೆಗೆ ಒಳಗಾಗಿದ್ದಳೋ ಅಲ್ಲೆಲ್ಲಾ ಪ್ರಕರಣಗಳು ದಾಖಲಾಗಿದ್ದವು. ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣದ ತನಿಖೆ ಮುಂದುವರಿದಿದ್ದು, ಈವರೆಗೆ 66 ಜನರನ್ನು ಬಂಧಿಸಲಾಗಿದೆ ಎಂದು ಗುಂಟೂರು ನಗರ ಎಸ್ಪಿ ಆರಿಫ್ ಹಫೀಜ್ ಮಾಹಿತಿ ನೀಡಿದ್ದಾರೆ.