ಹೈದರಾಬಾದ್ ನಿವಾಸಿ...
ಅಪಘಾತದಲ್ಲಿ ನಾಲ್ಕು ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. 22 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತರು ಮತ್ತು ಗಾಯಗೊಂಡವರೆಲ್ಲರೂ ಹೈದರಾಬಾದ್‌ನ ಶೇಖ್ಪೇಟ್ ನಿವಾಸಿಗಳಾಗಿದ್ದಾರೆ. ಗಾಯಾಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.
ತೀರ್ಥಯಾತ್ರೆ...
ಹೈದರಾಬಾದ್‌ನ ಶೇಖ್ಪೇಟ್ ನಿವಾಸಿ ಕೆ. ಸತ್ಯನಾರಾಯಣ ರಿಸರ್ವ್ ಬ್ಯಾಂಕ್ನಲ್ಲಿ ಸೇವೆ ಸಲ್ಲಿಸುತ್ತಿದ್ದು, ಇತ್ತೀಚೆಗೆ ಅವರು ನಿವೃತ್ತಿಯಾಗಿದ್ದರು. ಈ ಹಿನ್ನೆಲೆ ಕುಟುಂಬಸ್ಥರೊಡನೆ ತೀರ್ಥಯಾತ್ರೆ ಕೈಗೊಂಡಿದ್ದು, ದಿನೇಶ್ ಟ್ರಾವೆಲ್ಸ್ನ ಮಿನಿ ಬಸ್ವೊಂದನ್ನು ಬುಕ್ ಮಾಡಿ ಈ ತಿಂಗಳ 10 ರಂದು ಹೈದರಾಬಾದ್‌ನಿಂದ ತೆರಳಿದ್ದರು.
ದೇವರ ದರ್ಶನ ಪಡೆದ ಕುಟುಂಬಸ್ಥರು
ವಿಜಯವಾಡ ಇಂದ್ರಕೀಲದ್ರಿ, ಅನ್ನವರಂ ಸತ್ಯನಾರಾಯಣಸ್ವಾಮಿ ದೇವಾಲಯಗಳಿಗೆ ಭೇಟಿ ದರ್ಶನ ಪಡೆದರು. ಗುರುವಾರ ರಾತ್ರಿ ಸಿಂಹಾಚಲಂ ವಸತಿ ಗೃಹದಲ್ಲಿ ತಂಗಿದ್ದರು. ಶುಕ್ರವಾರ ಬೆಳಗ್ಗೆ ಸತ್ಯನಾರಾಯಣ ಕುಟುಂಬ ಅರಕುಗೆ ಹೋಗಿ ಪ್ರವಾಸಿ ಪ್ರದೇಶಗಳಲ್ಲಿ ಮೋಜು - ಮಸ್ತಿ ಮಾಡಿದೆ.
80 ಅಡಿಗಳ ಆಳಕ್ಕೆ ಉರುಳಿ ಬಿದ್ದ ಮಿನಿ ಬಸ್
ಬೊರ್ರಾ ಗುಹೆಗಳಿಗೆ ಭೇಟಿ ನೀಡಿ ಹಿಂದಿರುಗುತ್ತಿರುವ ಸಮಯದಲ್ಲಿ ಸಂಜೆ 7 ಗಂಟೆ ಸುಮಾರಿಗೆ ಬೊರ್ರಾ ಮತ್ತು ತೈಡಾ ನಡುವಿನ ತಿರುವಿನಲ್ಲಿ ಬಸ್ 80 ಅಡಿ ಕಣಿವೆಗೆ ಉರುಳಿ ಬಿದ್ದಿದೆ.
ಮಗು ಸೇರಿ ನಾಲ್ವರು ಸಾವು
ಕಣಿವೆಗೆ ಉರುಳಿ ಬಿದ್ದ ರಭಸಕ್ಕೆ ಮಗು ಸೇರಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರು ಮಗು ಶ್ರೀನಿತ್ಯ (8 ತಿಂಗಳು), ಕೊಟ್ಟಂ ಸತ್ಯನಾರಾಯಣ (62), ಕೆ. ಸರೀತಾ (40), ಎನ್. ಲತಾ (40) ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಪ್ರಥಮ ಚಿಕಿತ್ಸೆಗಾಗಿ ಎಸ್.ಕೋಟಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಎಲ್ಲರನ್ನು ವಿಶಾಖಪಟ್ಟಣಂ ಕೆಜಿಎಚ್‌ಗೆ ವರ್ಗಾಯಿಸಲಾಯಿತು.
ಕಣಿವೆ ನಾಡಲ್ಲಿ ಫೇಲಾದ ಮಿನಿ ಬಸ್ ಬ್ರೇಕ್
ಅರಕು ಕಣಿವೆಯಿಂದ ಹಿಂದಿರುಗುವಾಗ ಬಸ್ ಬ್ರೇಕ್ ಫೇಲ್ ಆಗಿದೆ. ಈ ಬಗ್ಗೆ ಚಾಲಕ ಶ್ರೀಶೈಲಂ ಗಮನಿಸಿ ಎಲ್ಲರಿಗೂ ಮಾಹಿತಿ ಮುಟ್ಟಿಸಿದ್ದರು. ಒಂದೆಡೆ ಬಸ್ನಲ್ಲಿದ್ದವರು ಗಾಬರಿಗೊಂಡು ಜಾಗೃತರಾಗುತ್ತಿದ್ದರು. ಇನ್ನೊಂದೆಡೆ ಘಾಟ್ ರಸ್ತೆಯಲ್ಲಿ ಬಸ್ ನಿಯಂತ್ರಿಸಲು ಚಾಲಕನಿಗೆ ಕಷ್ಟವಾಗುತ್ತಿತ್ತು. ತಿರುವು ಬಂದಾಗ ಬಸ್ ನಿಯಂತ್ರಣ ತಪ್ಪಿ ಕಣಿವೆಗೆ ಉರುಳಿ ಬಿದ್ದು ಅಪಘಾತ ಸಂಭವಿಸಿತು.
ಗಾಯಾಳು ಹೇಳಿದ್ದೇನು?
ಅಪಘಾತ ಸಂಭವಿಸಿ ಅರ್ಧ ಗಂಟೆಯ ನಂತರ ನಾನು ಮರದ ಕೊಂಬೆಗೆ ನೇತಾಡುತ್ತಿದ್ದೆ. ನಮ್ಮವರೆಲ್ಲರೂ ಗಾಯಗೊಂಡು ನರಳಾಡುತ್ತಿದ್ದರು. ಶುಕ್ರವಾರದಂದು ಸಿಂಹಾಚಲಂಗೆ ತೆರಳಿದ ನಾವು ವಸ್ತುಗಳೆಲ್ಲವೂ ಅಲ್ಲೇ ಬಿಟ್ಟು ಅರಕುಗೆ ಬಂದಿದ್ದೆವು. ಮತ್ತೆ ಸಿಂಹಾಚಲಂಗೆ ತೆರಳಿ ಶನಿವಾರ ಬೆಳಗ್ಗೆ ಸ್ವಾಮಿ ದರ್ಶನ ಮುಗಿಸಿಕೊಂಡು ಸ್ವಗ್ರಾಮಕ್ಕೆ ವಾಪಸ್ ಆಗುವ ಆಲೋಚನೆಯಿತ್ತು. ಆದ್ರೆ ಅಷ್ಟೊತ್ತಿಗಾಗಲೇ ಈ ದುರಂತ ಸಂಭವಿಸಿದೆ ಎಂದು ಗಾಯಾಳು ನರೇಶ್ ಕುಮಾರ್ ಹೇಳಿದ್ದಾರೆ.
ಮುಗಿಲು ಮುಟ್ಟಿದ ತಾಯಿ ಆಕ್ರಂದನ
ತೀವ್ರವಾಗಿ ಗಾಯಗೊಂಡಿದ್ದ ಮೌನಿಕಾಗೆ ತನ್ನ 8 ತಿಂಗಳ ಮಗಳು ಶ್ರೀನಿತ್ಯಾ ಮೃತಪಟ್ಟಿರುವುದು ತಿಳಿದಿರಲಿಲ್ಲ. ಎಸ್. ಕೋಟಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ಮತ್ತು ಪ್ರಜ್ಞೆ ಬಂದ ನಂತರ ಎಲ್ಲರೂ ಕಂಡಿದ್ದಾರೆ. ಆದ್ರೆ ಮೌನಿಕಾ ಮಗಳು ಕಂಡಿಲ್ಲ. ನನ್ನ ಮಗಳು ಎಲ್ಲಿದ್ದಾಳೆಂದು ಕೇಳಿದಾಗ ಇಡೀ ಕುಟುಂಬವೇ ಮೌನಕ್ಕೆ ಜಾರಿತು. ಮಗು ಕಳೆದುಕೊಂಡಿರುವ ವಿಷಯ ತಿಳಿದ ಆ ತಾಯಿಯ ಆಕ್ರಂದನ ಮುಗಿಲು ಮುಟ್ಟಿತು.
300 ಜನರ ಆಸ್ತಿ ಗಳಿಸಿದೆ ಸತ್ಯನಾರಾಯಣ ಕುಟುಂಬ
ರಿಸರ್ವ್ ಬ್ಯಾಂಕಿನ ಅಧಿಕಾರಿಯಾಗಿ ನಿವೃತ್ತರಾದ ಕೊಟ್ಟಂ ಸತ್ಯನಾರಾಯಣ ಶೇಖ್ಪೇಟದಲ್ಲಿ ವಾಸಿಸುತ್ತಿದ್ದಾರೆ. ಅವರ ರಕ್ತಸಂಬಂಧಿ ನರಸಿಂಹ ರಾವ್ ಮತ್ತು ಪಾಂಡು ಕೂಡ ಅದೇ ನಗರದಲ್ಲಿ ವಾಸಿಸುತ್ತಿದ್ದಾರೆ. ಉಳಿದ ಇಬ್ಬರು ಸಹೋದರರು ಮಣಿಕೊಂಡದ ಪಂಚಾವತಿ ಕಾಲೋನಿಯಲ್ಲಿ ವಾಸಿಸುತ್ತಿದ್ದಾರೆ. ನರಸಿಂಹ ರಾವ್, ಪಾಂಡು ಮತ್ತು ಸತ್ಯನಾರಾಯಣ ಕುಟುಂಬಗಳಲ್ಲಿ ಒಟ್ಟು 300 ಜನರಿದ್ದಾರೆ. ಸಣ್ಣ ಸಮಾರಂಭ ನಡೆದರೂ ಸಹ 300 ಜನರು ಭಾಗವಹಿಸುತ್ತಾರೆ. ಐದು ಸಹೋದರರ ಮಕ್ಕಳಲ್ಲಿ ಕೆಲವರು ಖಾಸಗಿ ಉದ್ಯೋಗಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇತರರು ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ.
ಪ್ರವಾಸ ಈ ರೀತಿ ಕೈಗೊಂಡ್ರು
ಕೋವಿಡ್ ಸೋಂಕು ಪರಿಣಾಮ ಇವರು ಇಲ್ಲಿಯವರೆಗೆ ಎಲ್ಲಿಯೂ ಪ್ರವಾಸ ಕೈಗೊಂಡಿರಲಿಲ್ಲ. ವಿಜಯವಾಡ ಮತ್ತು ವಿಶಾಖಪಟ್ಟಣಂಗೆ ಪ್ರವಾಸಕ್ಕೆ ಹೋಗೊಣಾ ಎಂದು ನರಸಿಂಹ ರಾವ್ ಪ್ರಸ್ತಾಪಿಸಿದಾಗ ಪಾಂಡು ಮತ್ತು ಸತ್ಯನಾರಾಯಣ ಕುಟುಂಬಗಳು ಸಮ್ಮತಿಸಿದ್ದವು.
ಸರ್ಕಾರಕ್ಕೆ ಮನವಿ
ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳ ಸಹಾಯಕ್ಕೆ ಬರುವಂತೆ ತೆಲಂಗಾಣ ಮತ್ತು ಆಂಧ್ರಪ್ರದೇಶ ಸರ್ಕಾರಗಳಿಗೆ ಮೃತ ವ್ಯಕ್ತಿಯ ಸಂಬಂಧಿ ಕೊಟ್ಟಂ ಕೃಷ್ಣ ನವಿ ಮಾಡಿದರು. ಪರಿಹಾರ ಕಾರ್ಯಗಳನ್ನು ತ್ವರಿತಗೊಳಿಸಲು ವಿನಂತಿಸಿದ್ದಾರೆ.
ಗಣ್ಯರಿಂದ ಸಂತಾಪ
ಪ್ರಧಾನಿ ನರೇಂದ್ರ ಮೋದಿ, ತೆಲಂಗಾಣ ಗವರ್ನರ್ ತಮಿಳುಸೈ, ತೆಲಂಗಾಣ ಸಿಎಂ ಕೆಸಿಆರ್, ಆಂಧ್ರಪ್ರದೇಶದ ಸಿಎಂ ಜಗನ್ ಮೋಹನ್ ರೆಡ್ಡಿ ಮತ್ತು ಕೇಂದ್ರ ಗೃಹ ಸಚಿವ ಕಿಶನ್ ರೆಡ್ಡಿ ಮೃತ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ.