ನವದೆಹಲಿ: ಇಂದಿನಿಂದ ಸಂಸತ್ ಚಳಿಗಾಲದ ಅಧಿವೇಶನ ಇಂದಿನಿಂದ ಆರಂಭವಾಗಿದ್ದು, ಪ್ರತಿಪಕ್ಷಗಳ ಸದಸ್ಯರ ಗದ್ದಲದ ನಡುವೆ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ 'ಕೃಷಿ ಕಾನೂನುಗಳ ರದ್ದತಿ ಮಸೂದೆ 2021'ಯನ್ನು ಅಂಗೀಕರಿಸಲಾಗಿದೆ.
ಮಸೂದೆ ಮಂಡನೆಗೂ ಮುನ್ನ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರು ಮಸೂದೆ ಬಗ್ಗೆ ಮೊದಲು ಚರ್ಚಿಸಬೇಕೆಂದು ಸ್ಪೀಕರ್ ಓಂ ಬಿರ್ಲಾ ಬಳಿ ಮನವಿ ಮಾಡಿದರು. ವಿರೋಧ ಪಕ್ಷಗಳ ಸಂಸದರು ಚರ್ಚೆಗೆ ಅವಕಾಶ ಕೇಳಿ ಪಟ್ಟು ಹಿಡಿದರು. ಈ ಗಲಾಟೆಯ ನಡುವೆಯೂ ಕೂಡ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು 'ಕೃಷಿ ಕಾನೂನುಗಳ ರದ್ದತಿ ಮಸೂದೆ 'ಯನ್ನು ಮಂಡಿಸಿದ್ದು, ಲೋಕಸಭೆ ಈ ಮಸೂದೆಯನ್ನು ಅಂಗೀಕರಿಸಿದೆ.
ಇದನ್ನೂ ಓದಿ: ಅಧಿವೇಶನದಲ್ಲಿ ರೈತನೆಂಬ ಸೂರ್ಯ ಉದಯಿಸಲಿದ್ದಾನೆ: ರಾಹುಲ್ ಗಾಂಧಿ
12 ಸಂಸದರ ಅಮಾನತು
ಬಳಿಕ ರಾಜ್ಯಸಭೆಯಲ್ಲಿಯೂ ಮಸೂದೆ ಅಂಗೀಕಾರ ಮಾಡಲಾಗಿದ್ದು, ಈ ವೇಳೆ ಅಶಿಸ್ತಿನಿಂದ ವರ್ತಿಸಿದಕ್ಕಾಗಿ 12 ಸದಸ್ಯರನ್ನು ಅಮಾನತು ಮಾಡಲಾಗಿದೆ. ಯಾವುದೇ ಚರ್ಚೆ ಮಾಡದೇ ಮಸೂದೆ ಅಂಗೀಕರಿಸಿದ್ದಕ್ಕೆ ಪ್ರತಿಪಕ್ಷಗಳು ಗದ್ದಲ ಎಬ್ಬಿಸಿದ ಕಾರಣ ಉಭಯ ಸದನಗಳ ಕಲಾಪವನ್ನು ನಾಳೆಗೆ ಮುಂದೂಡಲಾಗಿದೆ.