ಅಹಮದ್ ನಗರ( ಮಹಾರಾಷ್ಟ್ರ) : ಒಂದೇ ಕುಟುಂಬದ ಇಬ್ಬರು ಬಾಲಕಿಯರು ಮತ್ತು ಒಂದು ಗಂಡು ಮಗುವಿನ ಶವ ತಾಯಿಯೊಂದಿಗೆ ಬಾವಿಯಲ್ಲಿ ಪತ್ತೆಯಾದ ಘಟನೆ ಸಂಗಮ್ನೇರ್ ತಾಲೂಕಿನ ಕೊಥೆ ಖುರ್ದ್ ಗ್ರಾಮದ ಖಂಡ್ಗೆದ್ರಾ ಎಂಬಲ್ಲಿ ನಡೆದಿದೆ. ಮೃತರನ್ನು ಬಾಳಾಸಾಹೇಬ್ ಗಣಪತಿ ಧೋಕರೆ ಅವರ ಪತ್ನಿ ಸ್ವಾತಿ ಬಾಳಾಸಾಹೇಬ್ ಧೋಕರೆ(28), ಪುತ್ರಿ ಭಾಗ್ಯಶ್ರೀ ಬಾಳಾಸಾಹೇಬ್ ಧೋಕರೆ(5), ತನ್ವಿ ಬಾಳಾಸಾಹೇಬ್ ಧೋಕರೆ(3) ಮತ್ತು ಪುತ್ರ ಶಿವಂ ಬಾಳಾಸಾಹೇಬ್ ಧೋಕರೆ (6 ತಿಂಗಳು) ಎಂದು ಗುರುತಿಸಲಾಗಿದೆ. ಮೃತರೆಲ್ಲರೂ ಖುರ್ದ್ ಗ್ರಾಮದ ಖಂಡ್ ಗೆದ್ರಾದಲ್ಲಿ ವಾಸವಾಗಿದ್ದರು ಎಂದು ತಿಳಿದುಬಂದಿದೆ.
ಎಲ್ಲ ಮೃತ ದೇಹಗಳನ್ನು ಬಾವಿಯಿಂದ ಹೊರತೆಗೆಯಲಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಕೇಳಿ ಬಂದಿದೆ. ಪ್ರಕರಣದ ತನಿಖೆಯ ಬಳಿಕವಷ್ಟೇ ನಿಖರ ಕಾರಣ ತಿಳಿದು ಬರಲಿದೆ. ಈ ಬಗ್ಗೆ ಘರ್ಗಾಂವ್ ಪೊಲೀಸರಿಗೆ ದೂರು ನೀಡಲಾಗಿದ್ದು, ಇನ್‌ಸ್ಪೆಕ್ಟರ್ ಸುನೀಲ್ ಪಾಟೀಲ್, ಪೊಲೀಸ್ ನಾಯಕ್ ರಾಜೇಂದ್ರ ಲಾಂಘೆ ಮತ್ತು ಸಂತೋಷ್ ಖೈರೆ ಅವರು ಸ್ಥಳಕ್ಕೆ ಧಾವಿಸಿ ಪರೀಶಿಲನೆ ನಡೆಸಿದ್ದಾರೆ. ಸದ್ಯ ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸಂಗಮ್ನೇರ್ ಕಾಟೇಜ್ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ. ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.
ಓದಿ :ಉಕ್ರೇನಿಯನ್ ರಾಷ್ಟ್ರೀಯವಾದಿಗಳು 3,700 ಭಾರತೀಯರನ್ನು ಬಲವಂತವಾಗಿ ಹಿಡಿದಿಟ್ಟುಕೊಂಡಿದ್ದಾರೆ: ರಷ್ಯಾ ಆರೋಪ