ಲಕ್ನೋ(ಉತ್ತರ ಪ್ರದೇಶ): ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಜನವರಿ 2ರಂದು ಪರಶುರಾಮನ ಪ್ರತಿಮೆ ಅನಾವರಣಗೊಳಿಸಿದ್ದರು. ಆದರೆ, ಪ್ರತಿಮೆ ಅನಾವರಣಗೊಂಡ ಕೇವಲ 8 ದಿನಗಳಲ್ಲೇ ದೇವರ ಕೈಯಲ್ಲಿದ್ದ ಕೊಡಲಿ ನೆಲಕ್ಕೆ ಉರುಳಿ ಬಿದ್ದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಚರ್ಚೆಗೆ ಗ್ರಾಸವಾಗಿದೆ.
ಲಕ್ನೋದ ಗೋಸೈಗಂಜ್ನಲ್ಲಿ 68 ಅಡಿ ಎತ್ತರದ ಪರಶುರಾಮನ ಪ್ರತಿಮೆ ಅನಾವರಣಗೊಳಿಸಲಾಗಿತ್ತು. ಆದರೆ, ಇಂದು ದೇವರ ಕೈಯಲ್ಲಿ ಇದ್ದ ಕೊಡಲಿ ಕೆಳಗೆ ಬಿದ್ದಿದೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಹಾಗೂ ವಿವಿಧ ಪಕ್ಷಗಳ ನಡುವಿನ ಆರೋಪ-ಪ್ರತ್ಯರೋಪಕ್ಕೆ ಕಾರಣವಾಗಿದೆ.
ಘಟನೆಗೆ ಸಂಬಂಧಿಸಿದಂತೆ ಮಾತನಾಡಿರುವ ಸಮಾಜವಾದಿ ಪಕ್ಷದ ಮಾಜಿ ಶಾಸಕ ಸಂತೋಷ್ ಪಾಂಡೆ, ದೇವರ ಕೈಯಲ್ಲಿದ್ದ ಕೊಡಲಿ ತಾನೇ ಕೆಳಗೆ ಬಿದ್ದಿಲ್ಲ. ಪ್ರತಿಮೆಯಲ್ಲಿನ ದೀಪ ಸರಿಪಡಿಸಲು ಅದನ್ನು ಕೆಳಗಿಳಿಸಲಾಗುತ್ತಿತ್ತು. ತುಂಬಾ ಭಾರವಾಗಿದ್ದ ಕಾರಣ ಜನರ ಕೈಯಿಂದ ಜಾರಿ ಕೆಳಗೆ ಬಿದ್ದಿದೆ. ಇದರಲ್ಲಿ ಯಾವುದೇ ಊಹಾಪೋಹಗಳಿಲ್ಲ, ಆದಷ್ಟು ಬೇಗ ಪುನರ್ ಸ್ಥಾಪನೆ ಮಾಡಲಾಗುವುದು ಎಂದರು.
ದೇವರ ಕೈಯಿಂದ ಕೊಡಲಿ ತಾನೇ ಬಿದ್ದಿದೆ ಎಂದು ಅನೇಕರು ಮಾತನಾಡಿಕೊಳ್ಳಲು ಶುರು ಮಾಡಿದ್ದಾರೆ. ಆದರೆ, ಇದು ಆಧಾರರಹಿತ. ಉತ್ತರ ಪ್ರದೇಶದಲ್ಲಿ ಕೆಲ ಬ್ರಾಹ್ಮಣರು ಸಮಾಜವಾದಿ ಪಕ್ಷ ಸೇರಿಕೊಳ್ಳುತ್ತಿದ್ದು, ಇದರ ಬೆನ್ನಲ್ಲೇ ಈ ರೀತಿಯ ಪಿತೂರಿ ಮಾಡಲಾಗಿದೆ. ಜೊತೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಇಂತಹ ವದಂತಿ ಹರಡಲಾಗುತ್ತಿದೆ ಎಂದಿದ್ದಾರೆ.
ಇದನ್ನೂ ಓದಿ: ಅಭಿನಂದನ್ ವರ್ಧಮಾನ್ ರೀತಿ ಮೀಸೆ ಬಿಟ್ಟ ಕಾನ್ಸ್‌ಟೇಬಲ್ ಅಮಾನತು, ಮರು ಸೇರ್ಪಡೆ