ನವದೆಹಲಿ: ಮಕ್ಕಳ ಮೇಲಿನ ಹೊರೆಯನ್ನು ಕಡಿಮೆ ಮಾಡಲು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನಾ ತರಬೇತಿ ಸಂಸ್ಥೆ (ಎನ್‌ಸಿಇಆರ್‌ಟಿ) ಪಠ್ಯಕ್ರಮದಿಂದ ಮೊಘಲರು, ಆರ್ಎಸ್ಎಸ್, ಗಾಂಧೀಜಿ ಮತ್ತು ಹಿಂದು- ಮುಸ್ಲಿಂ ಐಕ್ಯತೆಯ ಪಾಠಗಳನ್ನು ಕೈಬಿಡಲಾಗಿದೆ. ಇವೆಲ್ಲವನ್ನೂ ತಜ್ಞರ ಶಿಫಾರಸಿನ ಮೇರೆಗೆ ಮಾಡಲಾಗಿದೆ ಎಂದು ಎನ್‌ಸಿಇಆರ್‌ಟಿ ನಿರ್ದೇಶಕರು ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಸಂಸ್ಥೆಯ ನಿರ್ದೇಶಕ ದಿನೇಶ್ ಪ್ರಸಾದ್ ಸಕ್ಲಾನಿ, ಎನ್‌ಸಿಇಆರ್‌ಟಿ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಸಂಸ್ಥೆಯಾಗಿದೆ. ಆದರೆ, ಪಠ್ಯಪುಸ್ತಕಗಳಲ್ಲಿ ಇತ್ತೀಚಿಗೆ ಮಾಡಲಾದ ಬದಲಾವಣೆಗಳನ್ನು ಯಾರನ್ನೂ ಮೆಚ್ಚಿಸಲು ಅಥವಾ ಯಾರದ್ದೋ ಮನವಿಯ ಮೇರೆಗೆ ಮಾಡಲಾಗಿಲ್ಲ. ಬದಲಿಗೆ ಇವು ಸಂಪೂರ್ಣವಾಗಿ ಶಿಕ್ಷಣ ತಜ್ಞರು ಮಾಡಿದ ಶಿಫಾರಸುಗಳನ್ನು ಆಧರಿಸಿ ಕತ್ತರಿ ಹಾಕಲಾಗಿದೆ ಎಂದು ಹೇಳಿದ್ದಾರೆ.
ಹೊಸ ರಾಷ್ಟ್ರೀಯ ಶಿಕ್ಷಣ ನೀತಿ(ಎನ್ಇಪಿ) ಆಧಾರದ ಮೇಲೆ ಎನ್‌ಸಿಇಆರ್‌ಟಿ ಎಲ್ಲಾ ವರ್ಗದ ಮಕ್ಕಳಿಗೆ ಹೊಸ ಪಠ್ಯಕ್ರಮವನ್ನು ಪರಿಚಯಿಸಲು ಹೊರಟಿದೆ ಎಂದು ಹೇಳಿದರು. ವಿದ್ಯಾರ್ಥಿಗಳ ಮೇಲೆ ಇರುವ ಹೊರೆಯನ್ನು ಕಡಿಮೆ ಮಾಡಲು ಇತಿಹಾಸ, ರಾಜಕೀಯ ವಿಜ್ಞಾನಗಳಲ್ಲಿ ಮಾತ್ರವಲ್ಲದೆ ಇತರ ವಿಷಯಗಳಲ್ಲಿಯೂ ಬದಲಾವಣೆಗಳನ್ನು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಎನ್‌ಸಿಇಆರ್‌ಟಿ ಹೊಸ ಪಠ್ಯಕ್ರಮವನ್ನು ತರುತ್ತಿದೆಯೇ?.. ಎನ್‌ಸಿಇಆರ್‌ಟಿಯು ಎಲ್ಲಾ ತರಗತಿಗಳಿಗೂ ಹೊಸ ಪಠ್ಯಪುಸ್ತಕಗಳನ್ನು ಸಿದ್ಧಪಡಿಸುತ್ತಿರುವುದು ನಿಜ. ಹೊಸ ಪಠ್ಯಕ್ರಮವು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಆಧರಿಸಿರುತ್ತದೆ. ಪಠ್ಯಕ್ರಮವು ಮೂಲ ಸ್ವರೂಪದಲ್ಲಿ ವಿನ್ಯಾಸಗೊಳಿಸಲಾಗಿದೆ. ಮುಂದಿನ ಎರಡು ತಿಂಗಳೊಳಗೆ ಹೊಸ ಪಠ್ಯಪುಸ್ತಕಗಳು ಲಭ್ಯವಾಗಲಿವೆ. ಉನ್ನತ ತರಗತಿಗಳ ಪಠ್ಯಕ್ರಮದ ಪರಿಷ್ಕರಣೆ ಇನ್ನೂ ನಡೆಯುತ್ತಿದೆ ಮತ್ತು ಹೊಸ ಪಠ್ಯಪುಸ್ತಕಗಳನ್ನು ಒಂದು ವರ್ಷದಲ್ಲಿ ಅಂತಿಮಗೊಳಿಸಲಾಗುವುದು ಎಂದರು.
NCERT ಪಠ್ಯಪುಸ್ತಕಗಳಲ್ಲಿ ಪರಿಷ್ಕರಣೆಗಳನ್ನು ಏಕೆ ಮಾಡಲಾಗುತ್ತಿದೆ?.. ಪಠ್ಯಕ್ರಮದಲ್ಲಿ ಯಾವುದೇ ದೊಡ್ಡ ಬದಲಾವಣೆ ಮಾಡಲಾಗಿಲ್ಲ. ಇವೆಲ್ಲವೂ ಕಳೆದ ವರ್ಷ ಮಾಡಿದ ಪರಿಷ್ಕರಣೆಯಾಗಿದೆ. ಈ ಹಿಂದೆ ಕೊರೊನಾ ವೈರಸ್ ಬಳಿಕ ಶೈಕ್ಷಣಿಕ ರಂಗದಲ್ಲಿ ಯಾವ ಪರಿಸ್ಥಿತಿ ಉಂಟಾಗಿತ್ತು ಎಂಬುದು ಎಲ್ಲರಿಗೂ ಗೊತ್ತಿದೆ. ವಿದ್ಯಾರ್ಥಿಗಳು ಕಲಿಕೆಯಲ್ಲಿ ಅಪಾರ ನಷ್ಟ ಅನುಭವಿಸಿದರು. ಶಾಲೆಗಳು, ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳನ್ನು ಬಂದ್ ಮಾಡಿದ್ದರಿಂದ ವಿದ್ಯಾರ್ಥಿಗಳು ಸಂಕಷ್ಟಕ್ಕೀಡಾದರು. ಉನ್ನತ ಶಿಕ್ಷಣ ಓದುತ್ತಿರುವ ವಿದ್ಯಾರ್ಥಿಗಳು ಸಹ ಕಲಿಕೆಯ ನಷ್ಟವನ್ನು ಅನುಭವಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ಎನ್‌ಸಿಇಆರ್‌ಟಿ ತಜ್ಞರು ನೀಡಿದ ಸಲಹೆಗಳ ಆಧಾರದ ಮೇಲೆ ಪಠ್ಯಕ್ರಮದಲ್ಲಿ ಕೆಲವು ಪರಿಷ್ಕರಣೆಗಳನ್ನು ಮಾಡಲು ನಿರ್ಧರಿಸಲಾಯಿತು. ಇದರಿಂದ ವಿದ್ಯಾರ್ಥಿಗಳಿಗೆ ಅಧ್ಯಯನದ ಹೊರೆ ಕಡಿಮೆಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಅಧ್ಯಾಯಗಳು ಮತ್ತು ಸಂಗತಿಗಳನ್ನು ಕಡಿಮೆ ಮಾಡಿದ್ದು ವಿದ್ಯಾರ್ಥಿಗಳಿಗೆ ಏನು ಪ್ರಯೋಜನ?.. ಪಠ್ಯಕ್ರಮ ಪರಿಷ್ಕರಣೆ ವಿದ್ಯಾರ್ಥಿಗಳಿಗೆ ನೇರವಾಗಿ ಅನುಕೂಲವಾಗಿದೆ. ಕೊರೊನಾ ಬಳಿಕ ವಿದ್ಯಾರ್ಥಿಗಳ ಮೇಲೆ ಉಂಟಾಗಿರುವ ಒತ್ತಡವನ್ನು ಇದು ಕಡಿಮೆ ಮಾಡಲಿದೆ. ಕಳೆದ ವರ್ಷವೇ ಈ ತಿದ್ದುಪಡಿ ಮಾಡಲಾಗಿದೆ. ಬಹಳ ಸಮಯದ ನಂತರ ಶಾಲೆಗೆ ಬಂದ ವಿದ್ಯಾರ್ಥಿಗಳ ಮೇಲೆ ಅಧ್ಯಯನದ ಹೊರೆಯನ್ನು ಕಡಿಮೆ ಮಾಡಿದೆ. ಪರೀಕ್ಷೆಗಳಿಗೆ ಕಡಿಮೆ ಹೊರೆಯಲ್ಲಿ ಅಧ್ಯಯನ ಮಾಡಬಹುದು ಎಂದು ತಿಳಿಸಿದರು.
ಪಠ್ಯಕ್ರಮದಲ್ಲಿ ಮೊಘಲ್ ಪಠ್ಯಕ್ಕೆ ಕತ್ತರಿ ತಂತ್ರದ ಭಾಗವೇ?.. ಎನ್‌ಸಿಇಆರ್‌ಟಿ ಯಾರದ್ದೋ ಒತ್ತಾಯದಿಂದ ಈ ಕ್ರಮ ಕೈಗೊಂಡಿಲ್ಲ. ಯಾರನ್ನೂ ಮೆಚ್ಚಿಸಲು ಅಥವಾ ಮನವಿಯ ಮೇರೆಗೆ ಪಠ್ಯಕ್ರಮವನ್ನು ಕಡಿಮೆ ಮಾಡುವ ನಿರ್ಧಾರವನ್ನು ತೆಗೆದುಕೊಂಡಿಲ್ಲ. ವಿದ್ಯಾರ್ಥಿಗಳಿಗೆ ತಕ್ಷಣದ ಪರಿಹಾರ ನೀಡಲು ಈ ಕ್ರಮ ಕೈಗೊಂಡಿದ್ದೇವೆ. ದೇಶಾದ್ಯಂತ ಶಿಕ್ಷಣ ತಜ್ಞರು ಮತ್ತು ಪರಿಣಿತರ ಅಭಿಪ್ರಾಯವನ್ನು ಆಧರಿಸಿ ಬದಲಾವಣೆಗಳನ್ನು ಮಾಡಲಾಗಿದೆ. ಪಠ್ಯಪುಸ್ತಕಗಳಿಂದ ಮೊಘಲರ ಎಲ್ಲಾ ಅಧ್ಯಾಯಗಳನ್ನು ತೆಗೆದುಹಾಕಲಾಗಿದೆ ಎಂಬ ಆರೋಪಗಳು ಸಂಪೂರ್ಣವಾಗಿ ಆಧಾರರಹಿತವಾಗಿವೆ ಎಂದಿದ್ದಾರೆ.
ಯಾವ ಆಧಾರದ ಮೇಲೆ ಪಠ್ಯಕ್ರಮಕ್ಕೆ ಕತ್ತರಿ ಹಾಕಲಾಗಿದೆ?.. ದೇಶಾದ್ಯಂತ ಶಿಕ್ಷಣ ತಜ್ಞರ ಸಮಿತಿ ರಚಿಸಿದೆವು. ತಜ್ಞರು, ವಿದ್ಯಾರ್ಥಿಗಳ ಹೊರೆಯನ್ನು ಕಡಿಮೆ ಮಾಡಲು ಶಿಫಾರಸು ಮಾಡಿದರು. 6 ರಿಂದ 12 ನೇ ತರಗತಿವರೆಗಿನ ಪ್ರತಿಯೊಂದು ವಿಷಯ ಮತ್ತು ಪುಸ್ತಕದ ಆಳವಾದ ಅಧ್ಯಯನವನ್ನು ಮಾಡಿದರು. ನಂತರ ಪಠ್ಯಕ್ರಮದಲ್ಲಿ ಪುನರಾವರ್ತಿತವಾದ ಅಧ್ಯಾಯಗಳು ಮತ್ತು ಸಂಗತಿಗಳನ್ನು ತೆಗೆದುಹಾಕಲು ಶಿಫಾರಸು ಮಾಡಿದರು. ವಿಶ್ವವಿದ್ಯಾನಿಲಯ ಮಟ್ಟದ ಶಿಕ್ಷಣ ತಜ್ಞರು, ಶೈಕ್ಷಣಿಕ ಪರಿಣಿತರು ಮತ್ತು ಎನ್‌ಸಿಇಆರ್‌ಟಿಯಿಂದಲೇ ತಜ್ಞರು ಸಲಹೆಯನ್ನು ಪಡೆದಿದ್ದಾರೆ ಎಂದು ತಿಳಿಸಿದರು.