ಶ್ರೀನಗರ(ಜಮ್ಮು ಮತ್ತು ಕಾಶ್ಮೀರ): ಪುಲ್ವಾಮಾ ಜಿಲ್ಲೆಯ ನ್ಯೂ ಕಾಲೋನಿ ಅರಿಹಾಲ್ ಪ್ರದೇಶದಲ್ಲಿ ನಿನ್ನೆ ರಾತ್ರಿ ಉಗ್ರರು ಮತ್ತು ಸೇನೆಯ ನಡುವೆ ಘರ್ಷಣೆ ನಡೆದಿದ್ದು, ಓರ್ವ ಉಗ್ರನನ್ನು ಹತ್ಯೆ ಮಾಡಲಾಗಿದೆ. ಹತ್ಯೆಗೀಡಾದ ಭಯೋತ್ಪಾದಕ ನಿಷೇಧಿತ ಸಂಘಟನೆ ಲಷ್ಕರ್-ಎ-ತೊಯ್ಬಾಗೆ ಸೇರಿದವನು ಎಂದು ತಿಳಿದುಬಂದಿದೆ.
ಮಾಹಿತಿ ಪ್ರಕಾರ, ನ್ಯೂ ಕಾಲೋನಿಯ ಅರಿಹಾಲ್ ಪ್ರದೇಶದಲ್ಲಿ ಉಗ್ರಗಾಮಿಗಳು ಇರುವ ಬಗ್ಗೆ ಖಚಿತ ಮಾಹಿತಿ ದೊರೆತ ನಂತರ ಸೇನೆ, ಪೊಲೀಸ್ ಮತ್ತು CRPFನ ಜಂಟಿ ತಂಡಗಳು ಈ ಪ್ರದೇಶವನ್ನು ಸುತ್ತುವರೆದವು. ಈ ಸಮಯದಲ್ಲಿ ಉಗ್ರರು ಸೇನೆಯ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಭದ್ರತಾ ಪಡೆಗಳು ಪ್ರತಿದಾಳಿ ನಡೆಸಿದ್ದು, ಆರಂಭಿಕ ಹಂತದಲ್ಲಿ ಒಬ್ಬ ಉಗ್ರನನ್ನು ಹತ್ಯೆ ಮಾಡಲಾಗಿದೆ. ಹತ್ಯೆಗೀಡಾದ ಉಗ್ರನನ್ನು ಪಂಜುರಾ ಶೋಪಿಯಾನ್ ನಿವಾಸಿ ಕಿಫಾಯತ್ ಅಯೂಬ್ ಎಂದು ಗುರುತಿಸಲಾಗಿದೆ.
ಕಿಫಾಯತ್ ಅಯೂಬ್ ಈ ವರ್ಷದ ಅಕ್ಟೋಬರ್ 4ರಂದು ಲಷ್ಕರ್-ಎ-ತೊಯ್ಬಾ ಸಂಘಟನೆ ಸೇರಿಕೊಂಡಿದ್ದು, ಕಳೆದ ಒಂದು ತಿಂಗಳಿನಿಂದ ಸಾಕಷ್ಟು ಸಕ್ರಿಯನಾಗಿದ್ದ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಶೋಪಿಯಾನ್ ಎನ್‌ಕೌಂಟರ್‌ನಲ್ಲಿ ಟಿಆರ್‌ಎಫ್ ಉಗ್ರನ ಹತ್ಯೆ; ಪಾಕ್ ದಾಳಿಯಿಂದ ಗಾಯಗೊಂಡ ಬಿಎಸ್‌ಎಫ್ ಯೋಧ ಹುತಾತ್ಮ
ಕಳೆದ ನವೆಂಬರ್ 9ರಂದು ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ನ ಕಥೋಹಾಲನ್ ಪ್ರದೇಶದಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ನಿಷೇಧಿತ ಭಯೋತ್ಪಾದಕ ಸಂಘಟನೆ ದಿ ರೆಸಿಸ್ಟೆನ್ಸ್ ಫ್ರಂಟ್ನೊಂದಿಗೆ (ಟಿಆರ್‌ಎಫ್) ಸಂಬಂಧ ಹೊಂದಿದ್ದ ಓರ್ವ ಭಯೋತ್ಪಾದಕ ಸಾವನ್ನಪ್ಪಿದ್ದ. ಈ ಕುರಿತು ಕಾಶ್ಮೀರ ವಲಯ ಪೊಲೀಸರು ಮಾಹಿತಿ ಹಂಚಿಕೊಂಡಿದ್ದರು. ಜೊತೆಗೆ, ಹತ್ಯೆಯಾದ ಭಯೋತ್ಪಾದಕನಿಂದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳು ಸೇರಿದಂತೆ ಇನ್ನಿತರೆ ಭಯೋತ್ಪಾದನೆ ನಡೆಸಲು ಸಂಚು ರೂಪಿಸಿದ್ದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ಇದನ್ನೂ ಓದಿ: ಕಾಶ್ಮೀರ: ಪುಲ್ವಾಮ ಜಿಲ್ಲೆಯಲ್ಲಿ ಭದ್ರತಾ ಸಿಬ್ಬಂದಿ, ಉಗ್ರರ ಮಧ್ಯೆ ಗುಂಡಿನ ಚಕಮಕಿ