ಶ್ರೀನಗರ: ಪ್ರಧಾನಮಂತ್ರಿ ಪುನರ್ವಸತಿ ಪ್ಯಾಕೇಜ್ನಡಿ ನೇಮಕವಾಗಿ ಕಾಶ್ಮೀರದಲ್ಲಿ ಉದ್ಯೋಗಕ್ಕೆ ಸೇರಿದ 57 ಶಿಕ್ಷಕರಿಗೆ ಲಷ್ಕರ್ ಎ ತೊಯ್ಬಾ (ಎಲ್‌ಇಟಿ) ಉಗ್ರ ಸಂಘಟನೆಯ ಜೊತೆ ಗುರುತಿಸಿಕೊಂಡಿರುವ ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ಜೀವ ಬೆದರಿಕೆ ಹಾಕಿದೆ. ಉದ್ಯೋಗ ತೊರೆದು ಕಾಶ್ಮೀರ ಬಿಡುವಂತೆ ಪಂಡಿತರಿಗೆ ಧಮ್ಕಿ ಹಾಕಲಾಗಿದೆ.
ಟಿಆರ್‌ಎಫ್ ಬೆದರಿಕೆಯಿಂದ ಕಾಶ್ಮೀರ ಕಣಿವೆಯಲ್ಲಿ ಕೆಲಸ ಮಾಡುತ್ತಿರುವ 6 ಸಾವಿರಕ್ಕೂ ಅಧಿಕ ಪಂಡಿತರಲ್ಲಿ ಭೀತಿ ಉಂಟಾಗಿದೆ. ಕಳೆದೊಂದು ವರ್ಷದಲ್ಲಿ ಭಯೋತ್ಪಾದಕರು 24 ಕಾಶ್ಮೀರಿ ಮತ್ತು ಕಾಶ್ಮೀರಿಗಳಲ್ಲದ ಹಿಂದೂಗಳನ್ನು ಕೊಂದಿರುವ ಹಿನ್ನೆಲೆಯಲ್ಲಿ ಈ ಬೆದರಿಕೆ ಆತಂಕ ಮೂಡಿಸಿದ್ದು, ಕಾಶ್ಮೀರಿ ಪಂಡಿತರ ವಿವಿಧ ಸಂಘಟನೆಗಳು ತೀವ್ರ ಕಳವಳ ವ್ಯಕ್ತಪಡಿಸಿವೆ.
ಟಿಆರ್‌ಎಫ್ ಭಯೋತ್ಪಾದಕ ಸಂಘಟನೆಗೆ ಉದ್ಯೋಗಿಗಳ ಹೆಸರುಗಳು ಹೇಗೆ ಗೊತ್ತಾಯಿತು ಎಂಬುದನ್ನು ಕಂಡುಹಿಡಿಯಲು ಕಾಶ್ಮೀರಿ ಪಂಡಿತರ ಸಂಘಟನೆಗಳು ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿವೆ. ಭಯೋತ್ಪಾದಕ ಸಂಘಟನೆ ಉದ್ಯೋಗಿಗಳ ಹೆಸರನ್ನು ತನ್ನ ಬ್ಲಾಗ್ನಲ್ಲಿ ಪ್ರಕಟಿಸಿದ್ದು, ತಕ್ಷಣವೇ ಕೆಲಸ ಬಿಡಲು ಸೂಚಿಸಿದೆ. ಈ ಪಟ್ಟಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಕೂಡ ಆಗಿದೆ.
ಪಂಡಿತರ ಹೆಸರುಗಳನ್ನು ಸಾರ್ವಜನಿಕವಾಗಿ ಹರಿಬಿಟ್ಟು ಜೀವ ಬೆದರಿಕೆ ಹಾಕಿದ ಘಟನೆಯ ಬಗ್ಗೆ ತಕ್ಷಣವೇ ಪೊಲೀಸರು ತನಿಖೆ ನಡೆಸಬೇಕು. ಕಣಿವೆಯಲ್ಲಿ ಕಾಶ್ಮೀರಿ ಪಂಡಿತರ ಸುರಕ್ಷತೆ ಮತ್ತು ಭದ್ರತೆಗೆ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಒತ್ತಾಯಿಸಿದೆ.
ಕಣಿವೆಯಲ್ಲಿ ಭಯೋತ್ಪಾದಕ ಸಂಘಟನೆಗಳು ಕಾಶ್ಮೀರಿ ಪಂಡಿತರು ಮತ್ತು ಸ್ಥಳೀಯರಲ್ಲದ ಹಿಂದುಗಳನ್ನು ಗುರಿಯಾಗಿಸಿ ಹತ್ಯೆ ಮಾಡುತ್ತಿರುವ ಕಾರಣ ತಮ್ಮನ್ನು ಜಮ್ಮು ವಿಭಾಗದಲ್ಲಿ ನಿಯೋಜಿಸಬೇಕೆಂದು ಪಂಡಿತರು ಒತ್ತಾಯಿಸುತ್ತಿದ್ದಾರೆ.
ಓದಿ: ಪಾಕ್ ಆಕ್ರಮಿತ ಕಾಶ್ಮೀರ ಮರು ವಶಕ್ಕೆ ಇದು ಸಕಾಲ: ಕಾಂಗ್ರೆಸ್ ನಾಯಕ ರಾವತ್