ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ಭಯೋತ್ಪಾದಕ ಚಟುವಟಿಕೆಗಳಿಗೆ ಧನಸಹಾಯ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತಂಡ ಭಾನುವಾರ ಕಾಶ್ಮೀರದ ಹಲವು ಸ್ಥಳಗಳಲ್ಲಿ ದಾಳಿ ನಡೆಸಿ ಇಸ್ಲಾಮಿಕ್ ಸೆಮಿನರಿಯ ಅಧ್ಯಕ್ಷರು ಸೇರಿದಂತೆ ಹಲವರನ್ನು ಬಂಧಿಸಿದೆ.
ಕೆಲವು ದಿನಗಳ ಹಿಂದೆ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ತಂಡ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮತ್ತು ಸಿಆರ್‌ಪಿಎಫ್ ಜೊತೆಗೆ ಅನಂತ್‌ನಾಗ್ ಮತ್ತು ಶ್ರೀನಗರ ಜಿಲ್ಲೆಗಳಲ್ಲಿ ದಾಳಿ ನಡೆಸಿತು.
ಶ್ರೀನಗರದ ಹಳೆಯ ನಗರ ನವಾಬಜಾರ್ ಪ್ರದೇಶದ ದಲಾಲ್ ಮೊಹಲ್ಲಾದಲ್ಲಿ 'ಸಿರಾಜುಲ್ ಉಲೂಮ್' ಎಂಬ ಇಸ್ಲಾಮಿಕ್ ಸೆಮಿನರಿಯ ಮೇಲೆ ತಂಡವು ದಾಳಿ ನಡೆಸಿದ್ದು, ಕಚೇರಿ ದಾಖಲೆಗಳು ಮತ್ತು ಲ್ಯಾಪ್‌ಟಾಪ್ ವಶಪಡಿಸಿಕೊಂಡಿದೆ. ಇದೇ ವೇಳೆ ಸೆಮಿನರಿಯ ಅಧ್ಯಕ್ಷ ಅದ್ನಾನ್ ಅಹ್ಮದ್ ನದ್ವಿಯನ್ನು ಬಂಧಿಸಿದೆ. ಈ ಸಂಸ್ಥೆಯು ಉತ್ತರ ಪ್ರದೇಶದ ಇಸ್ಲಾಮಿಕ್ ಸೆಮಿನರಿಯೊಂದಿಗೆ ಸಂಯೋಜಿತವಾಗಿದೆ.
ಶ್ರೀನಗರದಲ್ಲಿ ದಾಳಿ ನಡೆಸಿದ ನಂತರ ಅನಂತ್‌ನಾಗ್ ಜಿಲ್ಲೆಯ ಪುಶ್ರೂ, ಸನ್‌ಸೂಮಾ ಮತ್ತು ಅಚಬಲ್ ಗ್ರಾಮಗಳಲ್ಲಿ ಇದೇ ರೀತಿಯ ದಾಳಿ ನಡೆಸಲಾಗಿದೆ.
ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಇಬ್ಬರು ಶಂಕಿತ ಅಲ್ ಖೈದಾ ಉಗ್ರರ ಸೆರೆ
ಭಯೋತ್ಪಾದನೆಗೆ ಧನಸಹಾಯ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಕ್ಕಾಗಿ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಸೈಯದ್ ಸಲಾಹುದ್ದೀನ್ ಎಂಬವರ ಇಬ್ಬರು ಪುತ್ರರು ಸೇರಿದಂತೆ 11 ಮಂದಿಯನ್ನು ಜಮ್ಮು ಮತ್ತು ಕಾಶ್ಮೀರ ಸರ್ಕಾರಿ ನೌಕರಿ ಕೆಲಸದಿಂದ ತೆಗೆದುಹಾಕಿದ ಬಳಿಕ ಈ ದಾಳಿ ನಡೆದಿದೆ.