ನವದೆಹಲಿ : ಭಯೋತ್ಪಾದನೆಗೆ ಹಣಕಾಸು ಪೂರೈಕೆ ವಿಚಾರಕ್ಕೆ ಸಂಬಂಧಿಸಿದಂತೆ ಜಮ್ಮು ಮತ್ತು ಕಾಶ್ಮೀರದ ರಾಜ್ಯ ತನಿಖಾ ಸಂಸ್ಥೆ (ಎಸ್‌ಐಎ) ಭಾನುವಾರ ದೆಹಲಿಯ ಹಲವು ಸ್ಥಳಗಳಲ್ಲಿ ಶೋಧ ನಡೆಸಿದೆ ಎಂದು ಮೂಲಗಳು ತಿಳಿಸಿವೆ. ಭಯೋತ್ಪಾದನೆ ಮತ್ತು ಪ್ರತ್ಯೇಕತಾವಾದಿಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ತನಿಖೆ ಮಾಡಲು ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆ ಮತ್ತು ಇತರ ಏಜೆನ್ಸಿಗಳಿಗೆ ಸಹಕಾರ ನೀಡುವ ಸಲುವಾಗಿ ಕಳೆದ ವರ್ಷ ನವೆಂಬರ್‌ನಲ್ಲಿ ಜಮ್ಮು ಮತ್ತು ಕಾಶ್ಮೀರದ ರಾಜ್ಯ ತನಿಖಾ ಸಂಸ್ಥೆ ರಚಿಸಲಾಗಿತ್ತು.
ಮೂಲಗಳ ಪ್ರಕಾರ, ಭಯೋತ್ಪಾದನೆಗೆ ಹಣಕಾಸು ಪೂರೈಕೆ ವಿಚಾರಕ್ಕೆ ಸಂಬಂಧಿಸಿದಂತೆ ಕೆಲವರು ಭಯೋತ್ಪಾದನೆ ಸಂಘಟನೆಗಳ ಪರವಾಗಿ ಕೆಲಸ ಮಾಡುತ್ತಿದ್ದು, ಅವರನ್ನು ಪತ್ತೆ ಹಚ್ಚಿ, ಮತ್ತಷ್ಟು ಮಾಹಿತಿಯನ್ನು ಹೊರ ತೆಗೆಯುವ ಸಲುವಾಗಿ ದೆಹಲಿಯ ಕನಿಷ್ಠ ಐದು ಸ್ಥಳಗಳಲ್ಲಿ ಜಮ್ಮು ಮತ್ತು ಕಾಶ್ಮೀರದ ರಾಜ್ಯ ತನಿಖಾ ಸಂಸ್ಥೆ ಅಧಿಕಾರಿಗಳು ಹುಡುಕಾಟ ನಡೆಸಿದ್ದಾರೆ. ದೆಹಲಿ ಮಾತ್ರವಲ್ಲದೇ ಫರಿದಾಬಾದ್ ಮತ್ತು ಜಮ್ಮು ಮತ್ತು ಕಾಶ್ಮೀರದ ಅನಂತನಾಗ್‌ನಲ್ಲಿಯೂ ಶೋಧ ಕಾರ್ಯ ನಡೆಸಲಾಗುತ್ತಿದೆ.
ದೆಹಲಿ ಪೊಲೀಸ್‌ನ ಭಯೋತ್ಪಾದನಾ ನಿಗ್ರಹ ಘಟಕವಾದ ವಿಶೇಷ ಕೋಶಕ್ಕೆ ಜಮ್ಮು ಮತ್ತು ಕಾಶ್ಮೀರದ ರಾಜ್ಯ ತನಿಖಾ ಸಂಸ್ಥೆ ಅಧಿಕೃತವಾಗಿ ಮಾಹಿತಿ ನೀಡಿಲ್ಲ ಎಂದು ದೆಹಲಿ ಪೊಲೀಸ್ ಮೂಲಗಳು ತಿಳಿಸಿವೆ. ಇದಕ್ಕೂ ಮೊದಲು, ಫೆಬ್ರವರಿಯಲ್ಲಿ ಕಾಶ್ಮೀರದಲ್ಲಿ ಉಗ್ರಗಾಮಿಗಳ ಬೆಂಬಲಿಗರಾಗಿದ್ದ ಮತ್ತು ಜೈಶ್-ಎ-ಮೊಹಮ್ಮದ್ ಎಂಬ ಹೊಸ ಸಂಘಟನೆಯೊಂದಿಗೆ ಸಂಬಂಧ ಹೊಂದಿದ್ದ 10 ಮಂದಿಯನ್ನು ಬಂಧಿಸಲಾಗಿತ್ತು.
ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ಗುಂಡಿನ ಕಾಳಗ: ಎನ್ಕೌಂಟರ್ನಲ್ಲಿ ಇಬ್ಬರು ಉಗ್ರ ಹತ