ವರ್ಧನ್ನಪೇಟೆ (ತೆಲಂಗಾಣ): ತೆಲಂಗಾಣ ರಾಜ್ಯದಲ್ಲಿ ದಿನದಿಂದ ದಿನಕ್ಕೆ ರಸ್ತೆ ಅಪಘಾತಗಳು ಹೆಚ್ಚಾಗುತ್ತಿವೆ. ಕೆಲವರು ಅತಿಯಾದ ವೇಗದಲ್ಲಿ ಬೈಕ್, ಕಾರು, ಲಾರಿಗಳನ್ನು ಚಲಾಯಿಸಿ ಇತರರ ಪ್ರಾಣಕ್ಕೆ ಅಪಾಯ ತಂದೊಡ್ಡುತ್ತಾರೆ. ಇನ್ನು ಕೆಲವರು ಮದ್ಯಪಾನ ಮಾಡಿ ಅಜಾಗರೂಕತೆಯಿಂದ ವಾಹನ ಚಾಲನೆ ಮಾಡಿ ಅಮಾಯಕರ ಪ್ರಾಣ ತೆಗೆಯುತ್ತಿದ್ದಾರೆ. ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆ ಮತ್ತು ಅಪಘಾತಗಳ ಹಿನ್ನೆಲೆಯಲ್ಲಿ ಪೊಲೀಸರು ಮತ್ತು ಜಿಎಚ್‌ಎಂಸಿ ಅಧಿಕಾರಿಗಳು ಸಂಚಾರ ನಿಯಮಗಳಲ್ಲಿ ಬದಲಾವಣೆ ತಂದರೂ ಅಪಘಾತಗಳನ್ನು ತಡೆಯಲು ಸಾಧ್ಯವಾಗುತ್ತಿಲ್ಲ.
ವರಂಗಲ್ ಜಿಲ್ಲೆಯಲ್ಲಿ ರಸ್ತೆ ಅಪಘಾತ: ವರಂಗಲ್ ಜಿಲ್ಲೆಯಲ್ಲಿ ಬುಧವಾರ ರಸ್ತೆ ಅಪಘಾತ ಸಂಭವಿಸಿದೆ. ವರಂಗಲ್ ಕಡೆಯಿಂದ ತೋರೂರು ಕಡೆಗೆ ಹೋಗುತ್ತಿದ್ದ ಆಟೋಗೆ ಎದುರಿನಿಂದ ಬರುತ್ತಿದ್ದ ಲಾರಿಯೊಂದು ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಆಟೋದಲ್ಲಿ ಪ್ರಯಾಣಿಸುತ್ತಿದ್ದ ಆರು ಜನರು ಮೃತಪಟ್ಟಿದ್ದಾರೆ. ಘಟನೆ ಸಂದರ್ಭದಲ್ಲಿ ಆಟೋದಲ್ಲಿ ಏಳು ಮಂದಿ ಪ್ರಯಾಣಿಸುತ್ತಿದ್ದರು. ವರ್ಧನ್ನಪೇಟೆ ಮಂಡಲದ ಇಲ್ಲಂದ ಎಂಬಲ್ಲಿ ಈ ದುರ್ಘಟನೆ ನಡೆದಿದೆ. ಆಟೋ ಚಾಲಕ ಶ್ರೀನಿವಾಸ್ ಸೇರಿದಂತೆ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಮೃತಪಟ್ಟಿದ್ದಾರೆ. ಓರ್ವನ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಗಾಯಾಳುಗಳನ್ನು ವರಂಗಲ್ ಎಂಜಿಎಂ ಆಸ್ಪತ್ರೆಗೆ ದಾಖಲು: ಸ್ಥಳೀಯರ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಗಾಯಾಳುಗಳನ್ನು ವರಂಗಲ್ ಎಂಜಿಎಂ ಆಸ್ಪತ್ರೆಗೆ ದಾಖಲಿಸಲಾಗಿದೆ. ಗ್ರಾಮಸ್ಥರು ಹಾಗೂ ಪೊಲೀಸರು ಎರಡು ಗಂಟೆಗೂ ಹೆಚ್ಚು ಕಾಲ ಶ್ರಮಿಸಿ ಆಟೋದಲ್ಲಿ ಸಿಲುಕಿದ್ದ ಮೃತ ದೇಹಗಳನ್ನು ಹೊರತೆಗೆದರು. ಮೃತ ದೇಹಗಳನ್ನು ವರ್ಧನ್ನಪೇಟೆ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭಿಸಲಾಗಿದೆ. ಮೃತಪಟ್ಟವರು ಜೇನು ಮಾರಾಟ ಮಾಡುವ ಕಾರ್ಮಿಕರು ಎಂದು ಗುರುತಿಸಲಾಗಿದೆ. ರಾಜಸ್ಥಾನ ಮೂಲದ ಚಾಲಕ ಕುಡಿದ ಮತ್ತಿನಲ್ಲಿ ಲಾರಿ ಚಲಾಯಿಸುತ್ತಿದ್ದ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಅಪಘಾತಗಳನ್ನು ತಪ್ಪಿಸಲು ಕ್ರಮವಹಿಸಲು ಒತ್ತಾಯ: ''ರಾಷ್ಟ್ರೀಯ ಹೆದ್ದಾರಿಯಾಗಿರುವುದರಿಂದ ನಿತ್ಯ ಅಪಘಾತಗಳು ನಡೆಯುತ್ತಿದ್ದು, ಅಧಿಕಾರಿಗಳು ಹಾಗೂ ಪೊಲೀಸರು ಸೂಕ್ತ ಕ್ರಮ ಕೈಗೊಂಡು ಅಪಘಾತಗಳನ್ನು ತಪ್ಪಿಸಿ ಜನರ ಪ್ರಾಣ ಉಳಿಸಬೇಕು'' ಎಂದು ಗ್ರಾಮಸ್ಥರು ಒತ್ತಾಯಿಸಿದರು. ''ಲಾರಿಗಳನ್ನು ಚಾಲಕರು ತಮಗೆ ಇಷ್ಟ ಬಂದಂತೆ ಓಡಿಸುತ್ತಿವೆ. ಬೆಳಿಗ್ಗೆ ಕೆಲಸಕ್ಕೆ ಹೋಗುವವರಿಗೆ ಹಾಗೂ ಶಾಲೆಗೆ ಹೋಗುವ ಮಕ್ಕಳಿಗೆ ಡಿಕ್ಕಿ ಹೊಡೆಯುತ್ತಿವೆ. ಹಲವು ಕುಟುಂಬಗಳು ಅಪಾಯದಲ್ಲಿವೆ. ಇನ್ನಾದರೂ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕು'' ಎಂದು ಗ್ರಾಮಸ್ಥರು ಮನವಿ ಮಾಡಿದರು.
ಇದನ್ನೂ ಓದಿ: ಯುವಕರ ಬೈಕ್ನತ್ತ ನುಗ್ಗಿದ ಕಾಡಾನೆ.. ಗಜರಾಜನ ದಾಳಿಯಿಂದ ಕೂದಲೆಳೆ ಅಂತರದಲ್ಲಿ ತಪ್ಪಿಸಿಕೊಂಡ ಕರ್ನಾಟಕದ ನಿವಾಸಿಗಳು!!