ಅನ್ನಮಯ್ಯ, ಆಂಧ್ರಪ್ರದೇಶ: ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಐವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜಿಲ್ಲೆಯ ಕೆವಿಪಲ್ಲಿ ತಾಲೂಕಿನ ಮಠಂಪಲ್ಲಿಯಲ್ಲಿ ಸಂಭವಿಸಿದೆ. ಅಪಘಾತದಲ್ಲಿ 11 ಜನ ಗಾಯಗೊಂಡಿದ್ದು, ನಿವಾಸಿಗಳೆಲ್ಲರೂ ಬೆಳಗಾವಿ ಜಿಲ್ಲೆಯವರು ಎಂಬ ಮಾಹಿತಿ ಲಭ್ಯವಾಗಿದೆ.
ಬೆಳಗಾವಿ ಜಿಲ್ಲೆಯ ನಿವಾಸಿಗಳು ಕ್ರೂಸರ್ ವಾಹನದ ಮೂಲಕ ತಿರುಪತಿ ಪ್ರವಾಸ ಕೈಗೊಂಡಿದ್ದರು. ತಿಮ್ಮಪ್ಪನ ದರ್ಶನ ಪಡೆದ ಭಕ್ತಾದಿಗಳು ಮತ್ತೆ ತಮ್ಮ ಸ್ವಗ್ರಾಮಕ್ಕೆ ಹಿಂದಿರುಗುತ್ತಿದ್ದರು. ಇಂದು ನಸುಕಿನ ಜಾವ ಸರಿ ಸುಮಾರು 3.30ಕ್ಕೆ ಮಠಂಪಲ್ಲಿ ಗ್ರಾಮದ ಬಳಿ ರಸ್ತೆ ಅಪಘಾತ ಸಂಭವಿಸಿದೆ. ಕ್ರೂಸರ್ ವಾಹನದಲ್ಲಿ ಮಕ್ಕಳು ಮತ್ತು ಮಹಿಳೆಯರು ಸೇರಿ 16 ಜನರು ಪ್ರಯಾಣಿಸುತ್ತಿದ್ದು, ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅಪಘಾತ ಸಂಭವಿಸಿದ ಕೂಡಲೇ ಸ್ಥಳೀಯರು ರಕ್ಷಣಾ ಕಾರ್ಯ ಕೈಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದಾಕ್ಷಣ ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ವಾಹನದಲ್ಲಿ ಸಿಲುಕಿಕೊಂಡಿದ್ದ ಮೃತದೇಹಗಳನ್ನು ಹೊರಕ್ಕೆ ತೆಗೆದರು. ಬಳಿಕ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದರು. ಮೃತರನ್ನು ಹನುಮಂತು (38), ಹನುಮಂತು (ಚಾಲಕ, 42), ಅಂಬಿಕಾ (14), ಶೋಭಾ (36) ಮತ್ತು ಮನಂದ (32) ಎಂದು ಗುರುತಿಸಲಾಗಿದೆ. ಮೃತರಲ್ಲಿ ಶೋಭಾ ಮತ್ತು ಅಂಬಿಕಾ ತಾಯಿ-ಮಗಳಾಗಿದ್ದಾರೆ. ಕಸ್ತೂರಿ, ಮೇಘಾ, ಶಿವಾನಂದ್, ಬಸಪ್ಪ, ಮಲ್ಲಪ್ಪ, ಅಕ್ಷಿತ, ಉದಯ, ಸುನಂದಾ, ಮಹೇಶ್, ಸಾಕ್ಷಿ ಮತ್ತು ಬಸವರಾಜ ಸೇರಿದಂತೆ ಒಟ್ಟು 11 ಜನರು ಗಾಯಗೊಂಡಿದ್ದಾರೆ.
ಸ್ಥಳೀಯರ ನೆರವಿನಿಂದ ಪೊಲೀಸರು ಗಾಯಾಳುಗಳನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ರುಯಾ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಇದರಲ್ಲಿ ಕೆಲವರ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.
ಓದಿ: ನಿಯಂತ್ರಣ ತಪ್ಪಿ ಬೈಕ್ಗೆ ಗುದ್ದಿದ ಕಾರು; ಸ್ಥಳದಲ್ಲೇ ಮೃತಪಟ್ಟ ಸವಾರ - ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಕರ್ನಾಟಕದ ಮೂವರು ಸ್ಥಳದಲ್ಲೇ ಸಾವು: ಪುಣೆ - ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ರಾತ್ರಿ ಐಸರ್ ಟೆಂಪೋ ಲಾರಿಯೊಂದಕ್ಕೆ ಡಿಕ್ಕಿ ಹೊಡೆದಿತ್ತು. ಪರಿಣಾಮ ಅಪಘಾತದಲ್ಲಿ ಟೆಂಪೋ ಮಾಲೀಕ, ಚಾಲಕ ಮತ್ತು ಕ್ಲೀನರ್ ಸ್ಥಳದಲ್ಲೇ ಸಾವನ್ನಪ್ಪಿದ್ದರು ಎಂಬುದಾಗಿ ತಿಳಿದು ಬಂದಿದೆ. ಈ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದ್ದು, ಮೂವರೂ ಬೆಳಗಾವಿ ನಿವಾಸಿಗಳು ಎಂದು ಗುರುತಿಸಲಾಗಿದೆ.
ಬುಧವಾರ ರಾತ್ರಿ ಸತಾರಾ - ಖಂಡಾಲಾ ತಾಲೂಕಿನ ಧನಗರವಾಡಿ (ಈಗ ಖಂಡಾಲಾ) ಗ್ರಾಮದ ವ್ಯಾಪ್ತಿಯ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಐಸರ್ ಟೆಂಪೋ ಹಿಂದಿನಿಂದ ಲಾರಿಗೆ ಡಿಕ್ಕಿ ಹೊಡೆದಿತ್ತು. ಮೃತರ ಹೆಸರು ಮಂಜುನಾಥ ಯಲ್ಲಪ್ಪ ಕವಲಿ, ಆನಂದ ಗುರುಸಿದ್ಧ ಗಂಗೈ ( ಇಬ್ಬರೂ ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನ ಪಾಮಲ್ ದಿನಿಯ ನಿವಾಸಿಗಳು ) ನಾಯಿಕಪ್ಪ ಸತ್ಯಪ್ಪ ನಾಯ್ಕರ್ ( ರಾಮದುರ್ಗದ ಉಜ್ಜನಕೋಪ್ಪ ನಿವಾಸಿ) ಎಂಬುದು ತಿಳಿದು ಬಂದಿದೆ. ಈ ಅಪಘಾತ ಪ್ರಕರಣ ಕುರಿತು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.