ಅಮರಾವತಿ(ಆಂಧ್ರಪ್ರದೇಶ): ಭಾರಿ ವಿವಾದಕ್ಕೆ ಕಾರಣವಾಗಿದ್ದ ಮೂರು ರಾಜಧಾನಿಗಳ ಸ್ಥಾಪನೆ ನಿರ್ಧಾರವನ್ನ ಆಂಧ್ರಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ ನೇತೃತ್ವದ ಸರ್ಕಾರ ಈಗಾಗಲೇ ಕೈಬಿಟ್ಟಿದೆ. ಇದರ ಹೊರತಾಗಿ ಕೂಡ ಅಮರಾವತಿ ಏಕೈಕ ರಾಜಧಾನಿಯನ್ನಾಗಿ ಅಭಿವೃದ್ಧಿಪಡಿಸಬೇಕೆಂದು ಒತ್ತಾಯಿಸಿ ರೈತರು ಮತ್ತು ಮಹಿಳೆಯರು ಮಹಾಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಪಾದಯಾತ್ರೆ ಈಗಾಗಲೇ 31ನೇ ದಿನಕ್ಕೆ ಕಾಲಿಟ್ಟಿದ್ದು, ತೆಲುಗು ದೇಶಂ ಪಕ್ಷದ ಮುಖಂಡ ಚಂದ್ರಮೋಹನ್ ರೆಡ್ಡಿ ಇದರಲ್ಲಿ ಭಾಗಿಯಾಗಿದ್ದಾರೆ.
ಮಸೂದೆ ಹಿಂಪಡೆದುಕೊಳ್ಳುವುದಕ್ಕೂ ಮೊದಲೇ ರೈತರು ಅಮರಾವತಿಯನ್ನ ರಾಜ್ಯದ ರಾಜಧಾನಿಯನ್ನಾಗಿ ಅಭಿವೃದ್ಧಿಪಡಿಸುವಂತೆ ಪಾದಯಾತ್ರೆ ಹಮ್ಮಿಕೊಂಡಿದ್ದು, ಅದು ನೆಲ್ಲೂರಿಗೆ ಬಂದು ತಲುಪಿದೆ. ಪಾದಯಾತ್ರೆ ವೇಳೆ ಪೊಲೀಸರು ಅಡ್ಡಿಪಡಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಕಳೆದ ವರ್ಷ ಮಹತ್ವದ ನಿರ್ಧಾರ ಕೈಗೊಂಡಿದ್ದ ಜಗನ್ ಮೋಹನ್ ರೆಡ್ಡಿ ಕಾರ್ಯಾಂಗದ ರಾಜಧಾನಿಯಾಗಿ ವಿಶಾಖಪಟ್ಟಣ, ಶಾಸಕಾಂಗದ ರಾಜಧಾನಿಯಾಗಿ ಅಮರಾವತಿ, ನ್ಯಾಯಾಂಗದ ರಾಜಧಾನಿಯಾಗಿ ಕರ್ನೂಲ ಅಭಿವೃದ್ಧಿ ಪಡಿಸುವ ಮಸೂದೆ ಮಂಡನೆ ಮಾಡಿದ್ದರು. ಆದರೆ, ಇದಕ್ಕೆ ಹೆಚ್ಚಿನ ಆಕ್ರೋಶ ವ್ಯಕ್ತವಾಗಿತ್ತು. ಹೀಗಾಗಿ ರಾಜ್ಯ ವಿಧಾನಸಭೆಯಲ್ಲಿ ಕಳೇದ ಸೋಮವಾರ ಜಗನ್‌ಮೋಹನ್ ಬಿಲ್ ವಾಪಸ್ ಪಡೆದುಕೊಳ್ಳುತ್ತಿರುವುದಾಗಿ ಘೋಷಣೆ ಮಾಡಿದ್ದರು.
ರೈತರ ಮಹಾಪಾದಯಾತ್ರೆಗೆ ಪೊಲೀಸರ ಅಡ್ಡಿ
ಅಮರಾವತಿಯಿಂದ ಆರಂಭಗೊಂಡಿರುವ ರೈತರು, ಮಹಿಳೆಯರ ಪಾದಯಾತ್ರೆಗೆ ಪೊಲೀಸರು ಅಡ್ಡಿಪಡಿಸುತ್ತಿದ್ದಾರೆ ಎಂದು ಆರೋಪ ಮಾಡಲಾಗಿದೆ. ನೆಲ್ಲೂರು ತಲುಪುತ್ತಿದ್ದಂತೆ ಇದೇ ವಿಚಾರವಾಗಿ ಅವರು ರಸ್ತೆಗಿಳಿದು ಧರಣಿ ನಡೆಸಿದರು. ರಾಜ್ಯ ಸರ್ಕಾರದ ಕೈಗೊಂಬೆಗಳಾಗಿರುವ ಪೊಲೀಸರು ತಮಗೆ ತೊಂದರೆ ನೀಡುತ್ತಿದ್ದಾರೆ ಎಂದು ಹೇಳಿದರು.
ಮರುಪುರವಿನಲ್ಲಿ ರಾತ್ರಿ ಉಳಿದುಕೊಳ್ಳಲು ನಮಗೆ ಯಾವುದೇ ರೀತಿಯ ಸ್ಥಳ ನೀಡಿಲ್ಲ ಎಂದು ಆರೋಪಿಸಿದ್ದಾರೆ. ರಾಜ್ಯ ಸರ್ಕಾರದ ತ್ರಿ ರಾಜ್ಯ ನಿರ್ಧಾರದ ವಿರುದ್ಧ ರೈತರು ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದು ಡಿಸೆಂಬರ್ 15ರಂದು ತಿರುಪತಿ ತಲುಪಲಿದೆ.