ಹೈದರಾಬಾದ್: ತೆಲಂಗಾಣ ಸರ್ಕಾರವು ಈ ಶೈಕ್ಷಣಿಕ ವರ್ಷದಿಂದ 1 ರಿಂದ 10 ನೇ ತರಗತಿ CBSE, ICSE, IB ಮತ್ತು ಇತರ ಬೋರ್ಡ್-ಸಂಯೋಜಿತ ಶಾಲೆಗಳ ವಿದ್ಯಾರ್ಥಿಗಳಿಗೆ ಎರಡನೇ ಭಾಷೆಯಾಗಿ ತೆಲುಗು ಭಾಷೆಯನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ.
ತೆಲಂಗಾಣ (ಶಾಲೆಗಳಲ್ಲಿ ತೆಲುಗು ಕಡ್ಡಾಯ ಬೋಧನೆ ಮತ್ತು ಕಲಿಕೆ) ಕಾಯಿದೆ 2018 ರ ರಾಜ್ಯ ಸರ್ಕಾರವು 2018-19 ರಿಂದ ಹಂತ ಹಂತವಾಗಿ ಅನುಷ್ಠಾನಗೊಳಿಸುವ ಭಾಗವಾಗಿ ಶಾಲಾ ಶಿಕ್ಷಣ ಇಲಾಖೆಯು ಇತ್ತೀಚೆಗೆ ಈ ಕುರಿತು ಸುತ್ತೋಲೆ ಹೊರಡಿಸಿದೆ.
ಓದಿ: ಪಠ್ಯ ವಿರೋಧಿಸಿ ಪತ್ರ ಬರೆದಿದ್ದ ಸಾಹಿತಿಗಳ ಪೂರ್ವಾಪರ ಸಂಗ್ರಹಿಸಲು ಗುಪ್ತಚರ ಇಲಾಖೆಗೆ ಸರ್ಕಾರದ ಸೂಚನೆ
2022-23 ಶೈಕ್ಷಣಿಕ ವರ್ಷದಿಂದ ತೆಲಂಗಾಣ ರಾಜ್ಯದ ಎಲ್ಲ ಆಡಳಿತ ಮತ್ತು ವಿವಿಧ ಮಂಡಳಿಯ ಸಂಯೋಜಿತ ಶಾಲೆಗಳಿಗೆ (CBSE, ICSE, IB ಮತ್ತು ಇತರ ಮಂಡಳಿಗಳು) 1 ರಿಂದ 10ನೇ ತರಗತಿಯಿಂದ ತೆಲುಗು ಕಡ್ಡಾಯಗೊಳಿಸಲಾಗಿದೆ. ನಿಯಮಗಳನ್ನು ಉಲ್ಲಂಘಿಸಿದರೆ ಗಂಭೀರವಾಗಿ ಪರಿಗಣಿಸಲಾಗುವುದು ಮತ್ತು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ತೆಲಂಗಾಣ ರಾಜ್ಯ ಸರ್ಕಾರ ನೀಡಿರುವ ಕಾಯಿದೆ ಮತ್ತು ಮಾರ್ಗಸೂಚಿಗಳ ಪ್ರಕಾರ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ತೆಲುಗು ಮಾತನಾಡುವ ವಿದ್ಯಾರ್ಥಿಗಳಿಗೆ ಮತ್ತು ಮಾತೃಭಾಷೆ ತೆಲುಗು ಅಲ್ಲದ ಮಕ್ಕಳಿಗಾಗಿ ತೆಲಂಗಾಣ ಸರ್ಕಾರ ಎರಡು ತೆಲುಗು ಪಠ್ಯಪುಸ್ತಕಗಳನ್ನು ವಿನ್ಯಾಸಗೊಳಿಸಿದೆ. ನಿಯಮವನ್ನು ಪಾಲಿಸದಿದ್ದರೆ ಆ ಶಾಲೆಗಳಿಗೆ ನೀಡಲಾದ ಎನ್‌ಒಸಿ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ರಾಜ್ಯ ಸರ್ಕಾರ ಎಚ್ಚರಿಸಿದೆ.