ಹೈದರಾಬಾದ್: ತೆಲಂಗಾಣ ರಾಜಕೀಯ ಮಹತ್ವದ ತಿರುವು ಪಡೆದುಕೊಂಡಿದೆ. ಮುನುಗೋಡು ಕ್ಷೇತ್ರದ ಕಾಂಗ್ರೆಸ್ ಶಾಸಕ ಕೋಮಟಿ ರಾಜಗೋಪಾಲ್ ರೆಡ್ಡಿ ಪಕ್ಷ ಬದಲಾವಣೆ ವಿಚಾರ ಮತ್ತಷ್ಟು ಕುತೂಹಲ ಮೂಡಿಸಿದೆ. ಮೂರು ದಿನಗಳಿಂದ ಕ್ಷೇತ್ರದ ಪ್ರಮುಖ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಪಕ್ಷ ಬದಲಾಯಿಸಬೇಕೋ ಬೇಡವೋ ಎಂಬ ಬಗ್ಗೆ ಸಮಾಲೋಚನೆ ನಡೆಸುತ್ತಿರುವ ರಾಜಗೋಪಾಲ್ ರೆಡ್ಡಿ, ಈ ಬಗ್ಗೆ ಇನ್ನೂ ಸ್ಪಷ್ಟ ಸೂಚನೆ ನೀಡುತ್ತಿಲ್ಲ. ಪಕ್ಷ ಬದಲಾವಣೆ ಜತೆಗೆ ರಾಜಗೋಪಾಲ್ ರೆಡ್ಡಿ ರಾಜೀನಾಮೆ ವಿಚಾರವಾಗಿಯೂ ಸ್ಥಳೀಯ ಮುಖಂಡರ ಜತೆ ಚರ್ಚೆ ನಡೆಸಿದ್ದಾರೆ ಎನ್ನಲಾಗ್ತಿದೆ.
ಪಕ್ಷ ಬದಲಾವಣೆ ವಿಚಾರದಲ್ಲಿ ನೀವು ಕೈಗೊಳ್ಳುವ ನಿರ್ಧಾರಕ್ಕೆ ಬದ್ಧ ಎಂದು ಕೆಲ ಪ್ರಮುಖ ಮುಖಂಡರು, ಕಾರ್ಯಕರ್ತರು ಬೆಂಬಲ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಸುಮ್ಮನಿದ್ದಾರೆ. ಅವರು ಒಂದು ವೇಳೆ ರಾಜೀನಾಮೆ ನೀಡಿದ್ರೆ, ಮತ್ತೆ ಗೆಲ್ಲಲು ಸಾಧ್ಯವಿಲ್ಲ ಎಂದು ವರದಿಯಾಗಿದೆ. ಆದರೆ, ಕೋಮಟಿರೆಡ್ಡಿ ಬಿಜೆಪಿ ಸೇರುವ ಮುನ್ನವೇ ಕಾಂಗ್ರೆಸ್ ಹೈಕಮಾಂಡ್ ಅವರನ್ನು ಅಮಾನತು ಮಾಡುವ ನಿರೀಕ್ಷೆ ಇದೆ.
ರಾಜಗೋಪಾಲ್ ರೆಡ್ಡಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಮುನುಗೋಡು ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದೆ. ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ರಾಜಗೋಪಾಲ್ ರೆಡ್ಡಿ ಗೆಲುವು ಸಾಧಿಸಿದರೆ, ಏಕಕಾಲಕ್ಕೆ ಟಿಆರ್ಎಸ್ ಹಾಗೂ ಕಾಂಗ್ರೆಸ್ ಎರಡಕ್ಕೂ ಹಾನಿಯಾಗಬಹುದು ಎಂಬುದು ಬಿಜೆಪಿ ನಿರೀಕ್ಷೆ.
ಇದನ್ನೂ ಓದಿ: ವರ್ಷಕ್ಕೆ ₹3 ಕೋಟಿಯ ಪ್ಯಾಕೇಜ್.. ಕೇರಳ ವಿದ್ಯಾರ್ಥಿಗೆ ಬಹುರಾಷ್ಟ್ರೀಯ ಕಂಪನಿಯಿಂದ ಬಿಗ್ ಆಫರ್!
ರಾಜಗೋಪಾಲ್ ರೆಡ್ಡಿ ಅವರು ಬಿಜೆಪಿ ಸೇರಲು ಸಿದ್ಧ ಎಂದು ಹೇಳಿದ್ದಾರೆ. ಆದರೆ, ರಾಜೀನಾಮೆ ಬಗ್ಗೆ ಇನ್ನೂ ನಿರ್ಧರಿಸಿಲ್ಲ. ಕಾಂಗ್ರೆಸ್ ಹೈಕಮಾಂಡ್ ಅವರನ್ನು ಅಮಾನತುಗೊಳಿಸಿದ್ರೆ, ಬಿಜೆಪಿ ಸೇರುವುದು ರಾಜಗೋಪಾಲ್ ರೆಡ್ಡಿ ತಂತ್ರವಾಗಿದೆ. ರಾಜಗೋಪಾಲ್ ರೆಡ್ಡಿ ಅಮಾನತು ಬಗ್ಗೆ ಕಾಂಗ್ರೆಸ್ ನಾಯಕರು ಇನ್ನೂ ಖಚಿತಪಡಿಸಿಲ್ಲ. ರಾಜಗೋಪಾಲ್ ರೆಡ್ಡಿಗೆ ಮನವರಿಕೆ ಮಾಡಲು ಕಾಂಗ್ರೆಸ್ ನಾಯಕರು ಪ್ರಯತ್ನಿಸುತ್ತಿದ್ದಾರೆ. ಅವರು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದರೆ ಮಾತ್ರ ಅವರನ್ನು ಪಕ್ಷಕ್ಕೆ ಆಹ್ವಾನಿಸಲು ಬಿಜೆಪಿ ಬಯಸಿದೆ.