ಹೈದರಾಬಾದ್ (ತೆಲಂಗಾಣ): ಸ್ವಾತಂತ್ರ್ಯ ಅಮೃತ ಮಹೋತ್ಸವ ರ‍್ಯಾಲಿ ವೇಳೆ ಪೊಲೀಸ್ ಸಿಬ್ಬಂದಿ ಬಳಿಯಿದ್ದ ಬಂದೂಕಿನಿಂದ ತೆಲಂಗಾಣದ ಅಬಕಾರಿ ಸಚಿವ ವಿ.ಶ್ರೀನಿವಾಸ್ ಗೌಡ ಗಾಳಿಯಲ್ಲಿ ಗುಂಡು ಹಾರಿಸಿರುವ ಘಟನೆ ಮಹೆಬೂಬ್‌ನಗರದಲ್ಲಿ ನಡೆದಿದೆ. ಸಚಿವರ ನಡೆ ಬಗ್ಗೆ ಪ್ರತಿಪಕ್ಷ ಬಿಜೆಪಿ ಕಿಡಿಕಾರಿದ್ದು, ಸಚಿವ ಸಂಪುಟದಿಂದ ಶ್ರೀನಿವಾಸ್ ಗೌಡ ಅವರನ್ನು ಕೈಬಿಡಬೇಕೆಂದು ಆಗ್ರಹಿಸಿದೆ.
75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಶನಿವಾರ ಮಹೆಬೂಬ್‌ನಗರದಲ್ಲಿ ರ‍್ಯಾಲಿ ಆಯೋಜಿಸಲಾಗಿತ್ತು. ಇದರಲ್ಲಿ ಭಾಗವಹಿಸಿದ್ದ ಸಚಿವ ಶ್ರೀನಿವಾಸ್ ಗೌಡ, ತಮ್ಮ ಭದ್ರತಾ ಸಿಬ್ಬಂದಿ ಬಳಿಯಿಂದ ಸ್ವಯಂ ಲೋಡಿಂಗ್ ಬಂದೂಕು ತೆಗೆದುಕೊಂಡು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ರ‍್ಯಾಲಿಗೆ ಚಾಲನೆ ನೀಡಿದ್ದಾರೆ. ಸಚಿವರು ಗಾಳಿಯಲ್ಲಿ ಗುಂಡು ಹಾರಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಟೀಕೆ ಕೂಡ ವ್ಯಕ್ತವಾಗಿದೆ.
ರಬ್ಬರ್ ಬುಲೆಟ್ ಎಂದ ಸಚಿವ: ಸಾರ್ವಜನಿಕವಾಗಿ ಗಾಳಿಯಲ್ಲಿ ಗುಂಡು ಹಾರಿಸಿರುವ ಬಗ್ಗೆ ಟೀಕೆ ವ್ಯಕ್ತವಾದ ಬೆನ್ನಲ್ಲೇ ಶ್ರೀನಿವಾಸ್ ಗೌಡ ಸ್ಪಷ್ಟನೆಯನ್ನು ನೀಡಿದ್ದಾರೆ. ಆದರೆ, ಅವರು ಕೊಟ್ಟಿರುವ ಸ್ಪಷ್ಟನೆ ಸಹ ಆಶ್ಚರ್ಯಕರವಾಗಿದೆ. ನಾನು ರಬ್ಬರ್ ಬುಲೆಟ್ ಬಳಸಿ ಗುಂಡು ಹಾರಿಸಿದ್ದೇನೆ ಮತ್ತು ಶಸ್ತ್ರಾಸ್ತ್ರಗಳನ್ನು ನಿರ್ವಹಿಸಲು ನನಗೆ ಪರವಾನಗಿ ಇದೆ ಎಂದು ಸಚಿವರು ಹೇಳಿದ್ದಾರೆ.
ಆದರೆ, ರಬ್ಬರ್ ಬುಲೆಟ್ ಎಂಬ ಸಚಿವರ ಹೇಳಿಕೆ ಬಗ್ಗೆಯೇ ಬಿಜೆಪಿ ಲೇವಡಿ ಮಾಡಿದೆ. ಸಚಿವರಿಗೆ ಜೀವ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಭದ್ರತೆ ಒದಗಿಸಲಾಗಿದೆ. ರಬ್ಬರ್ ಬುಲೆಟ್ ಎಂದು ಹೇಳಿದರೆ ಎಲ್ಲ ಶಾಸಕರು ತಮಗೆ ನೀಡಿರುವ ಭದ್ರತೆ ಬಗ್ಗೆ ಮರು ಚಿಂತನೆ ನಡೆಸಬೇಕಾಗುತ್ತದೆ ಎಂದು ಬಿಜೆಪಿ ಶಾಸಕ ರಘುನಂದನ್ ರಾವ್ ವಾಗ್ದಾಳಿ ನಡೆಸಿದ್ದಾರೆ.
ಅಲ್ಲದೇ, ಇದು ರಬ್ಬರ್ ಬುಲೆಟ್ ಅಥವಾ ಒರಿಜಿನಲ್ ಬುಲೆಟ್ ಎಂಬುದನ್ನು ಪೊಲೀಸ್ ಮಹಾನಿರ್ದೇಶಕರು ಸ್ಪಷ್ಟಪಡಿಸಬೇಕು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಮ್ಮುಖದಲ್ಲಿ ಸಚಿವರು ಗುಂಡು ಹಾರಿಸಿದರೂ ಇದುವರೆಗೆ ಯಾವುದೇ ಪ್ರಕರಣ ದಾಖಲಿಸಿಲ್ಲ ಹಾಗೂ ಬಂದೂಕು ವಶಪಡಿಸಿಕೊಂಡಿಲ್ಲ. ಸಾರ್ವಜನಿಕ ಸ್ಥಳದಲ್ಲಿ ಗುಂಡಿನ ದಾಳಿ ನಡೆಸುವುದು ಕಾನೂನು ಬಾಹಿರವಾಗಿದೆ. ಈ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕೆಂದು ಬಿಜೆಪಿ ಶಾಸಕ ರಾವ್ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಮನೆಯಲ್ಲಿ ಚಿನ್ನ ಕದ್ದು ಮದ್ಯ, ಗಾಂಜಾ ಸೇವಿಸಿ ಐಷಾರಾಮಿ ಜೀವನ: ಸುಪಾರಿ ಕೊಟ್ಟು ಮಗನ ಕೊಲ್ಲಿಸಿದ ತಂದೆ