ಹೈದರಾಬಾದ್(ತೆಲಂಗಾಣ): ಕಟ್ಟಿಕೊಂಡ ಹೆಂಡತಿಯನ್ನೇ ಕೊಂದಿರುವ ಗಂಡ ಮನೆಯಲ್ಲಿದ್ದ ಪ್ಲಾಸ್ಟಿಕ್ ಡ್ರಮ್ನಲ್ಲಿ ಮೃತದೇಹ ತುಂಬಿಟ್ಟಿರುವ ಘಟನೆ ತೆಲಂಗಾಣದ ರಾಜಧಾನಿ ಹೈದರಾಬಾದ್ನಲ್ಲಿ ನಡೆದಿದೆ. ಪ್ರಕರಣ ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಆರೋಪಿ ಬಂಧನಕ್ಕೆ ಶೋಧಕಾರ್ಯ ಆರಂಭಿಸಿದ್ದಾರೆ.
ತಮ್ಮ ಮಗಳು ನಾಪತ್ತೆಯಾಗಿದ್ದು, ಕಳೆದ ನಾಲ್ಕು ದಿನಗಳಿಂದ ಅಳಿಯ ಸಹ ಕಾಣಿಸಿಕೊಂಡಿಲ್ಲ. ಅವರ ಮೊಬೈಲ್ ಸ್ವಿಚ್ ಆಫ್ ಆಗಿದೆ ಎಂದು ಕಳೆದ ಜೂನ್ 2ರಂದು ಮಹಿಳೆಯ ತಂದೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಶೋಧಕಾರ್ಯ ನಡೆಸಿದಾಗ ಪತಿಯೇ ಕೊಲೆ ಮಾಡಿ, ಮೃತದೇಹವನ್ನ ಪ್ಲಾಸ್ಟಿಕ್ ಡ್ರಮ್ನಲ್ಲಿ ತುಂಬಿಟ್ಟಿರುವುದು ಬೆಳಕಿಗೆ ಬಂದಿದೆ. ಪೊಲೀಸರು ಅನುಮಾನಗೊಂಡು ಮನೆಯಲ್ಲಿ ಶೋಧಕಾರ್ಯ ನಡೆಸಿದಾಗ ಬಟ್ಟೆಗಳಿಂದ ತುಂಬಿದ್ದ ಡ್ರಮ್ನಲ್ಲಿ ಮಹಿಳೆಯ ಮೃತದೇಹ ಸಿಕ್ಕಿದೆ.
ಇದನ್ನೂ ಓದಿ: ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆರೋಪ.. ನಟ ವಿಜಯ್ ಸಿನಿಮಾ ವೀಕ್ಷಿಸದಂತೆ ಸ್ವಾಮೀಜಿ ಕರೆ
ಗಂಡ ಮನೆಯಿಂದ ಪರಾರಿಯಾಗುವುದಕ್ಕೂ ಮುಂಚಿತವಾಗಿ ಹೆಂಡತಿ ಕೊಲೆ ಮಾಡಿರುವ ಶಂಕೆ ಇದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 2020ರಲ್ಲೂ ಈತ ತನ್ನ ಮೊದಲ ಪತ್ನಿಯನ್ನ ಕೊಲೆ ಮಾಡಿರುವ ಆರೋಪ ಎದುರಿಸುತ್ತಿದ್ದು, ಇದರ ಬೆನ್ನಲ್ಲೇ ಎರಡನೇ ಹೆಂಡತಿಯನ್ನ ಕೊಲೆಗೈದಿದ್ದಾನೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಆತನಿಗೋಸ್ಕರ ಶೋಧಕಾರ್ಯ ಆರಂಭಿಸಿದ್ದಾರೆ.