ಕರೀಂನಗರ(ತೆಲಂಗಾಣ): ಸಾಮಾನ್ಯ ಮಟ್ಟಕ್ಕಿಂತ ಸ್ವಲ್ಪ ತಾಪಮಾನ ಕುಸಿದ್ರೆ, ಚಳಿಗೆ ಶಪಿಸುವ ನಾವು, ತಣ್ಣಗಿನ ನೀರನ್ನು ಮುಟ್ಟುವುದಕ್ಕೆ ಕಷ್ಟ ಪಡುತ್ತೇವೆ. ಆದರೆ ಇಲ್ಲೊಬ್ಬ ವ್ಯಕ್ತಿ ಸುಮಾರು 9 ಡಿಗ್ರಿ ಸೆಂಟಿಗ್ರೇಡ್ ತಾಪಮಾನವಿರುವ (ಐಸ್ ನೀರು) ನೀರಿನಲ್ಲಿ ಅರ್ಧಗಂಟೆ ಕುಳಿತು ಸಾಹಸ ಮೆರೆದಿದ್ದಾರೆ.
ಹೌದು, ಬೆಂಗಳೂರಿನಲ್ಲಿ ಚಳಿಗಾಲದ ಚಳಿ ಸರಾಸರಿ 18 ರಿಂದ 20 ಡಿಗ್ರಿ ಸೆಂಟಿಗ್ರೇಡ್ನಷ್ಟಿರುತ್ತದೆ. ಅದನ್ನು ತಡೆದುಕೊಳ್ಳುವುದಕ್ಕೆ ನಮಗೆ ಕಷ್ಟವಾಗಿರುತ್ತದೆ. ಆದರೆ ತೆಲಂಗಾಣದ ಕರೀಂನಗರ ಜಿಲ್ಲೆಗೆ ಸೇರಿದ ವ್ಯಕ್ತಿಯೋರ್ವ 9.2 ಡಿಗ್ರಿ ಸೆಂಟ್ರಿಗ್ರೇಡ್ ತಾಪಮಾನವಿರುವ ನೀರಿನಲ್ಲಿ ಅರ್ಧಗಂಟೆ ಕುಳಿತು, ಲಿಮ್ಕಾ ಬುಕ್ ಆಫ್ ರೆಕಾರ್ಡ್ನಲ್ಲಿ ಸೇರ್ಪಡೆಗೊಳ್ಳಲು ಮುಂದಾಗಿದ್ದಾರೆ. ಇವರ ಹೆಸರು ಕಾಮಾರಪು ರವೀಂದರ್.
ಕರೀಂನಗರದಲ್ಲಿರುವ ತೀಗಲಗುಟ್ಟಪಲ್ಲಿಯ ತಮ್ಮ ನಿವಾಸ ಬಳಿ ಡ್ರಮ್ನಲ್ಲಿ ಐಸ್ ತುಂಬಿ, ಅದರಲ್ಲಿ ಕುಳಿತು ಸಾಹಸ ಪ್ರದರ್ಶಿಸಿದ ರವೀಂದರ್, ಈ ಸಾಹಸವನ್ನು ವಿಡಿಯೋ ಚಿತ್ರೀಕರಣ ಮಾಡಿ, ಅದನ್ನು ಲಿಮ್ಕಾ ಬುಕ್ ಆಫ್ ರೆಕಾರ್ಡ್ಗೆ ಕಳಿಸುವುದಾಗಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ತೆಲಂಗಾಣದಲ್ಲಿ ಬಿಜೆಪಿ ಬೆಳವಣಿಗೆ ನೋಡಿ ಕೆಸಿಆರ್ ಭೀತಿಗೊಳಗಾಗಿದ್ದಾರೆ: ಡಿಕೆ ಅರುಣಾ ವಾಗ್ದಾಳಿ!
ಗರ್ಭಿಣಿಯಾಗಿದ್ದಾಗ ರವೀಂದರ್ ಪತ್ನಿ ದಾಖಲೆ: ರವೀಂದರ್ ಅವರ ಪತ್ನಿ ಲಕ್ಷ್ಮಿ ಅವರು 2018ರಲ್ಲಿ 9 ತಿಂಗಳ ಗರ್ಭಿಣಿಯಾಗಿದ್ದಾಗ ಸಾಹಸವೊಂದನ್ನು ಮಾಡಿದ್ದರು. ಕರೀಂನಗರದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ 5 ಕಿ.ಮೀ ದೂರವನ್ನು 30 ನಿಮಿಷ 22 ಸೆಕೆಂಡುಗಳಲ್ಲಿ ಕ್ರಮಿಸಿ ಲಕ್ಷ್ಮಿ ದಾಖಲೆ ನಿರ್ಮಿಸಿದ್ದರು. ನಂತರ ಸಾಮಾನ್ಯ ಹೆರಿಗೆಯ ಮೂಲಕವೇ ಆರೋಗ್ಯವಂತ ಮಗುವಿಗೆ ಜನ್ಮ ನೀಡಿದ್ದರು. ಈ ಮೂಲಕ ಗರ್ಭಿಣಿಯರಿಗೆ ವ್ಯಾಯಾಮದ ಅಗತ್ಯತೆ ಒತ್ತಿ ಹೇಳಿದ್ದರು.
ಓಟದಲ್ಲಿ ದಾಖಲೆ ನಿರ್ಮಿಸಿದ್ದ ರವೀಂದರ್: ಈ ಮೊದಲು ಬಿರುಬೇಸಿಗೆಯಲ್ಲಿ ಒಂದು ಗಂಟೆ ಅವಧಿಯಲ್ಲಿ 10 ಕಿ.ಮೀ. ಓಟವನ್ನು ಯಶಸ್ವಿಯಾಗಿ ಪೂರೈಸಿ ರವೀಂದರ್ ದಾಖಲೆ ನಿರ್ಮಿಸಿದ್ದರು. 56 ವರ್ಷ ವಯಸ್ಸಿನ ರವೀಂದರ್ ಆರೋಗ್ಯವಾಗಿದ್ದಾರೆ.
ಈಗ ಐಸ್ ನೀರಿನಲ್ಲಿ ಕುಳಿತುಕೊಳ್ಳುವ ಮೂಲಕ ಸಾರ್ವಜನಿಕ ಆರೋಗ್ಯ ಜಾಗೃತಿ ಮೂಡಿಸಲು ಮತ್ತು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಸ್ಥಾನಗಳಿಸಲು ಪ್ರಯತ್ನಿಸಿದ್ದಾರೆ.