ಹೈದರಾಬಾದ್: ಬಿಆರ್‌ಎಸ್ ಶಾಸಕರನ್ನು ಖರೀದಿಸುವ ಯತ್ನ ನಡೆಸಲಾಗಿತ್ತು ಎಂಬ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಅವರಿಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ಜಾರಿಗೊಳಿಸಿದ್ದ ನೋಟಿಸ್‌ಗೆ ನೀಡಿದ್ದ ತಡೆಯಾಜ್ಞೆಯನ್ನು ತೆಲಂಗಾಣ ಹೈಕೋರ್ಟ್ ಡಿಸೆಂಬರ್ 30 ರವರೆಗೆ ವಿಸ್ತರಿಸಿದೆ.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಂತೋಷ್ ಮತ್ತು ಇತರ ಮೂವರಿಗೆ ಸಿಆರ್‌ಪಿಸಿಯ ಸೆಕ್ಷನ್ 41 ಎ ಅಡಿ ಎಸ್‌ಐಟಿ ನೀಡಿದ್ದ ನೋಟಿಸ್‌ಗೆ ನೀಡಿದ್ದ ತಡೆಯಾಜ್ಞೆಯನ್ನು ಹೈಕೋರ್ಟ್ ಈ ಮೊದಲು ಡಿಸೆಂಬರ್ 22ರವರೆಗೆ ಮುಂದೂಡಿತ್ತು. ಡಿ.22 ರಂದು ಕೋರ್ಟ್ ತಡೆಯಾಜ್ಞೆಯನ್ನು ಡಿ.30ರವರೆಗೆ ವಿಸ್ತರಿಸಿ ಆದೇಶಿಸಿದೆ.
ನವೆಂಬರ್ 21 ರಂದು ವಿಚಾರಣೆಗೆ ಹಾಜರಾಗುವಂತೆ ಸಂತೋಷ್ ಮತ್ತು ಇತರರಿಗೆ ಎಸ್‌ಐಟಿ ನೋಟಿಸ್ ನೀಡಿತ್ತು. ಆದರೆ, ಅವರು ವಿಚಾರಣೆಗೆ ಹಾಜರಾಗಿರಲಿಲ್ಲ. ಹಾಗಾಗಿ, ನ್ಯಾಯಾಲಯದ ನಿರ್ದೇಶನದ ಆಧಾರದ ಮೇಲೆ, ನವೆಂಬರ್ 26 ಅಥವಾ 28 ರಂದು ತನ್ನ ಮುಂದೆ ಹಾಜರಾಗುವಂತೆ ಎಸ್‌ಐಟಿ ಮತ್ತೆ ಸಂತೋಷ್‌ಗೆ ಸಮನ್ಸ್ ನೀಡಿತು.
ಸಂತೋಷ್ ಮತ್ತು ಇತರ ಮೂವರನ್ನು ಪ್ರಕರಣದಲ್ಲಿ ಆರೋಪಿಗಳೆಂದು ಹೆಸರಿಸುವಂತೆ ಎಸ್‌ಐಟಿ ಸಲ್ಲಿಸಿದ್ದ ಮನವಿಯನ್ನು ಭ್ರಷ್ಟಾಚಾರ ನಿಗ್ರಹ ದಳದ ವಿಶೇಷ ನ್ಯಾಯಾಲಯ ಡಿಸೆಂಬರ್ 6 ರಂದು ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಹೈಕೋರ್ಟ್ ಮೆಟ್ಟಿಲೇರಿದ್ದು, ಆದೇಶವನ್ನು ಕಾಯ್ದಿರಿಸಿತ್ತು.
ಅಕ್ಟೋಬರ್ 26 ರಂದು ಬಿಆರ್‌ಎಸ್ ಶಾಸಕ ಪೈಲಟ್ ರೋಹಿತ್ ರೆಡ್ಡಿ ಸೇರಿದಂತೆ ನಾಲ್ವರು ಶಾಸಕರು ದೂರು ಸಲ್ಲಿಸಿದ ನಂತರ ಮೂವರನ್ನು - ರಾಮಚಂದ್ರ ಭಾರತಿ ಅಲಿಯಾಸ್ ಸತೀಶ್ ಶರ್ಮಾ, ನಂದು ಕುಮಾರ್ ಮತ್ತು ಸಿಂಹಯಾಜಿ ಸ್ವಾಮಿ ಅವರನ್ನು ಈಗಾಗಲೇ ಆರೋಪಿಗಳೆಂದು (ಎ1 ರಿಂದ ಎ 3) ಹೆಸರಿಸಲಾಗಿದೆ.
ತೆಲಂಗಾಣ ಸರ್ಕಾರ ನವೆಂಬರ್ 9 ರಂದು ಶಾಸಕರನ್ನು ಬೇಟೆಯಾಡುವ ಯತ್ನದ ಬಗ್ಗೆ ತನಿಖೆ ನಡೆಸಲು ಏಳು ಸದಸ್ಯರ ಎಸ್‌ಐಟಿಯನ್ನು ಸ್ಥಾಪಿಸಲು ಆದೇಶಿಸಿತ್ತು.
ಓದಿ: ಟಿಆರ್ಎಸ್ ಶಾಸಕರ ಖರೀದಿ ಯತ್ನ ಆರೋಪ ಪ್ರಕರಣ: ಬಿ ಎಲ್ ಸಂತೋಷ್‌ಗೆ ಸಮನ್ಸ್ ಜಾರಿ