ಹೈದರಾಬಾದ್(ತೆಲಂಗಾಣ): ಐದು ವರ್ಷಗಳ ಹಿಂದೆ ತೆಲಂಗಾಣ ವಿಧಾನಸಭೆಯ ಉಭಯ ಸದನಗಳು ಅಂಗೀಕರಿಸಿದ ಪರಿಶಿಷ್ಟ ವರ್ಗಗಳಿಗೆ ಮೀಸಲಾತಿ ಮಸೂದೆಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡದ ಹಿನ್ನೆಲೆಯಲ್ಲಿ, ಸೆಡ್ಡು ಹೊಡೆದ ಸಿಎಂ ಕೆ.ಸಿ.ಚಂದ್ರಶೇಖರ ರಾವ್ ಅವರು ಇದೀಗ ಮಹತ್ವದ ಘೋಷಣೆ ಮಾಡಿದ್ದಾರೆ. ಶನಿವಾರ ಈ ಕುರಿತು ಮಾತನಾಡುತ್ತಾ, ರಾಜ್ಯದಲ್ಲಿ ಶೀಘ್ರದಲ್ಲೇ ಪರಿಶಿಷ್ಟ ಪಂಗಡಕ್ಕೆ ಶೇ 10 ರಷ್ಟು ಮೀಸಲಾತಿ ನೀಡಿ ಸರ್ಕಾರ ಆದೇಶ ಹೊರಡಿಸಲಿದೆ ಎಂದು ಘೋಷಣೆ ಮಾಡಿದರು.
ಹೈದರಾಬಾದ್‌ನ ಎನ್‌ಟಿಆರ್ ಸ್ಟೇಡಿಯಂನಲ್ಲಿ 'ಆದಿವಾಸಿ-ಬಂಜಾರ ಆತ್ಮೀಯ ಸಭಾ' ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ, "ತೆಲಂಗಾಣ ಸರ್ಕಾರ ಈ ಕುರಿತು ಹೊರಡಿಸಲಿರುವ ಆದೇಶವನ್ನು ಪ್ರಧಾನಿ ನರೇಂದ್ರ ಮೋದಿ ಗೌರವಿಸಬೇಕು. ಇಲ್ಲವೇ, ಅದನ್ನೇ ಹಗ್ಗವೆಂದು ಪರಿಗಣಿಸಿ ನೇಣು ಹಾಕಿಕೊಳ್ಳಲಿ" ಎಂದು ಕಟುವಾಗಿ ವಾಕ್ ಪ್ರಹಾರ ನಡೆಸಿದರು.
ಇದನ್ನೂ ಓದಿ: ಹೊಸ ರಾಷ್ಟ್ರೀಯ ಪಕ್ಷ ಕಟ್ಟುವ ಚಿಂತನೆಯಲ್ಲಿ ತೆಲಂಗಾಣ ಸಿಎಂ ಕೆಸಿಆರ್: ಪಾರ್ಟಿ ಹೆಸರೇನು ಗೊತ್ತೇ?
ರಾಜ್ಯದ ಸರ್ಕಾರಿ ಉದ್ಯೋಗಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಪರಿಶಿಷ್ಟ ವರ್ಗ ಮತ್ತು ಹಿಂದುಳಿದ ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ ಕಲ್ಪಿಸುವ ಉದ್ದೇಶದಿಂದ 2017 ರ ಏಪ್ರಿಲ್‌ನಲ್ಲಿ ತೆಲಂಗಾಣ ವಿಧಾನಮಂಡಲದ ಉಭಯ ಸದನಗಳಲ್ಲಿ ವಿಶೇಷ ಮಸೂದೆಯನ್ನು ಅಂಗೀಕರಿಸಲಾಗಿತ್ತು. ಈ ಮಸೂದೆಯಂತೆ, ಪ. ಪಂಗಡಕ್ಕೆ ಈಗಿರುವ ಶೇ 6 ರ ಮೀಸಲಾತಿಯನ್ನು ಶೇ 10 ಕ್ಕೇರಿಸಲು ಕೆಸಿಆರ್ ಸರ್ಕಾರ ನಿರ್ಧರಿಸಿತ್ತು. ಇದೀಗ ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಅವರು, "ಕಳೆದ 5 ವರ್ಷಗಳಿಂದಲೂ ಈ ಮಸೂದೆ ರಾಷ್ಟ್ರಪತಿಗಳ ಅಂಗೀಕಾರಕ್ಕಾಗಿ ಕೇಂದ್ರ ಸರ್ಕಾರದಲ್ಲಿ ಕಾಯುತ್ತಿದೆ" ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ: ಮೀಸಲಾತಿ ವಿಚಾರ: ಎಸ್ಸಿ ಎಸ್ಟಿ ಸಮುದಾಯಕ್ಕೆ ಶೀಘ್ರದಲ್ಲೇ ಸಿಹಿ ಸುದ್ದಿ - ಸಚಿವ ಶ್ರೀರಾಮುಲು
"ಮೀಸಲಾತಿ ನೀಡುವಂತೆ ಮನವಿ ಮಾಡಿ ನಮಗೆ ಸಾಕಾಗಿ ಹೋಗಿದೆ. ಹೀಗಾಗಿ ವಾರದೊಳಗೆ ನಾವು ಪರಿಶಿಷ್ಟ ಪಂಗಡಕ್ಕೆ ಶೇ 10 ರಷ್ಟು ಮೀಸಲಾತಿ ನೀಡುವ ಬಗ್ಗೆ ಸರ್ಕಾರಿ ಆದೇಶ ಹೊರಡಿಸುತ್ತೇವೆ. ನನ್ನ ಮನವಿ ಇಷ್ಟೇ. ಒಂದೋ ನರೇಂದ್ರ ಮೋದಿ ನಮ್ಮ ಮನವಿಯನ್ನು ಪುರಸ್ಕರಿಸಬೇಕು, ಇಲ್ಲವೇ ಅದನ್ನೇ ಹಗ್ಗವೆಂದು ಭಾವಿಸಿ ನೇಣು ಹಾಕಿಕೊಳ್ಳಲಿ" ಎಂದು ಟೀಕಿಸಿದರು.
"ಕೆಸಿಆರ್ ಪ್ರಕಾರ, ಮೀಸಲಾತಿ ವಿಚಾರದಲ್ಲಿ ಯಾವುದೇ ಸೀಲಿಂಗ್ ಇಲ್ಲ. ನೆರೆಯ ರಾಜ್ಯ ತಮಿಳುನಾಡು ಶೇ 69 ರಷ್ಟು ಮೀಸಲಾತಿ ನೀಡುತ್ತಿದೆ. ಹಾಗಾಗಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಹೈದರಾಬಾದ್ ವಿಮೋಚನಾ ದಿನಾಚರಣೆಗೆ ಆಗಮಿಸಿ ವಿಭಜನಕಾರಿ ರಾಜಕೀಯ ಮಾಡುತ್ತಿರುವ ಅಮಿತ್ ಶಾ ಈ ಮಸೂದೆಗೆ ಯಾಕೆ ಅಡ್ಡಿ ಉಂಟು ಮಾಡುತ್ತಿದ್ದೀರಿ?" ಎಂದು ಪ್ರಶ್ನಿಸಿದರು. ಮುಂದುವರಿದು ಮಾತನಾಡಿದ ಸಿಎಂ, "ಜನರು ಕೋಮು ಆಧಾರಿತ ರಾಜಕೀಯಕ್ಕೆ ಆಹಾರವಾಗಬಾರದು. ರಾಜ್ಯದಲ್ಲಿ ದಲಿತ ಬಂಧು ಎಂಬ ರೀತಿಯಲ್ಲಿ ಶೀಘ್ರದಲ್ಲೇ ಗಿರಿಜನ ಬಂಧು ಕಾರ್ಯಕ್ರಮ ಜಾರಿಗೆ ಬರಲಿದೆ" ಎಂದು ಇದೇ ವೇಳೆ ಅವರು ಭರವಸೆ ಕೊಟ್ಟರು.
ಇದನ್ನೂ ಓದಿ: ಕೇಂದ್ರದಲ್ಲಿ ಬಿಜೆಪಿಯೇತರ ಸರ್ಕಾರ ಅಧಿಕಾರಕ್ಕೆ ಬಂದ್ರೆ ದೇಶದ ರೈತರಿಗೆ ಉಚಿತ ವಿದ್ಯುತ್: ತೆಲಂಗಾಣ ಸಿಎಂ
ಅದೇ ರೀತಿ, ಯಾವುದೇ ಜಮೀನಿಲ್ಲದ ಅಥವಾ ಯಾವುದೇ ಆದಾಯದ ಮೂಲಗಳಿಲ್ಲದ ಪರಿಶಿಷ್ಟ ಪಂಗಡದ ಕುಟುಂಬಗಳಿಗೆ ಉದ್ಯಮ, ವಾಣಿಜ್ಯ ವ್ಯವಹಾರ ಶುರು ಮಾಡಲು ಸರ್ಕಾರ 10 ಲಕ್ಷ ರೂಪಾಯಿ ನೀಡಲಿದೆ ಎಂದು ಹೇಳಿದರು. ಇದಕ್ಕೂ ಮೊದಲು ಕೆಸಿಆರ್, ಆದಿವಾಸಿ ಭವನ ಮತ್ತು ಸೇವಾಲಾಲ್ ಬಂಜಾರ ಭವನ ಉದ್ಘಾಟಿಸಿದರು. ಜೊತೆಗೆ, ಬ್ರಿಟಿಷರ ವಿರುದ್ಧ ಹೋರಾಡಿದ ರಾಜ್ಯದ ಅಪ್ರತಿಮ ಸ್ವಾತಂತ್ರ್ಯ ಸೇನಾನಿ ಕುಮಾರ್ ಭೀಮ್ ಅವರ ಪ್ರತಿಮೆ ಅನಾವರಣ ಮಾಡಿದರು.