ಹೈದರಾಬಾದ್, ತೆಲಂಗಾಣ: ಕೋವಿಡ್ ಸೋಂಕು ನಿಯಂತ್ರಣಕ್ಕೆ ತರುವ ಉದ್ದೇಶದಿಂದಾಗಿ ಸುಮಾರು 10 ದಿನಗಳ ಕಾಲ ತೆಲಂಗಾಣ ಸರ್ಕಾರ ವಿಧಿಸಿದ್ದ ಲಾಕ್ಡೌನ್ ಅನ್ನು ಮೇ 30ರವರೆಗೆ ವಿಸ್ತರಣೆ ಮಾಡಲಾಗಿದೆ.
ತೆಲಂಗಾಣ ಸಿಎಂ ಕೆ.ಚಂದ್ರಶೇಖರ ರಾವ್, ತೆಲಂಗಾಣ ಸರ್ಕಾರದ ಮುಖ್ಯ ಕಾರ್ಯದರ್ಶಿ ಸೋಮೇಶ್ ಕುಮಾರ್ ಅವರಿಗೆ ಲಾಕ್ಡೌನ್ ವಿಸ್ತರಣೆ ಕುರಿತಂತೆ ಆದೇಶ ಹೊರಡಿಸಬೇಕೆಂದು ಸೂಚಿಸಿದ್ದಾರೆ.
ಮೇ 12ರಂದು ತೆಲಂಗಾಣ ಸರ್ಕಾರ 10 ದಿನಗಳ ಲಾಕ್ಡೌನ್ ಘೋಷಣೆ ಮಾಡಿತ್ತು. ಈ ಲಾಕ್ಡೌನ್ ಇನ್ನು ಕೆಲವೇ ದಿನಗಳಲ್ಲಿ ಮುಗಿಯಲಿದ್ದು, ಆ ನಂತರ ಮೇ 30ರವರೆಗೆ ಲಾಕ್ಡೌನ್ ವಿಸ್ತರಣೆ ಮಾಡಲಾಗಿದೆ.
ಇದನ್ನೂ ಓದಿ: ರಾಜ್ಯಕ್ಕೆ ಸದ್ಯದಲ್ಲೇ 2 ಲಕ್ಷ ಕೋವಿಶೀಲ್ಡ್ ಆಗಮನ: ಸುಧಾಕರ್
ಲಾಕ್ಡೌನ್ ವಿಸ್ತರಣೆ ಮಾಡುವುದಾಗಿ ಸಿಎಂ ಆದೇಶ ಹೊರಡಿಸಿರುವ ಕಾರಣದಿಂದಾಗಿ ಮೇ 20ರಂದು ನಡೆಯಬೇಕಿದ್ದ ರಾಜ್ಯದ ಕೋವಿಡ್ ಸ್ಥಿತಿಗತಿಗಳ ಕುರಿತ ಕ್ಯಾಬಿನೆಟ್ ಸಭೆಯನ್ನು ರದ್ದು ಮಾಡಲಾಗಿದೆ.
ಎಲ್ಲಾ ಸಚಿವರು ಕೊರೊನಾ ಸ್ಥಿತಿಗತಿಯನ್ನು ಅವಲೋಕಿಸುತ್ತಿರುವ ಕಾರಣದಿಂದ ಮತ್ತು ತಮ್ಮ ಕ್ಷೇತ್ರಗಳಲ್ಲಿ ವೈದ್ಯಕೀಯ ಸೇವೆಗಳ ಒದಗಿಸುವ ಬಗ್ಗೆ ಮೇಲ್ವಿಚಾರಣೆ ವಹಿಸುತ್ತಿರುವ ಕಾರಣದಿಂದ ಕ್ಯಾಬಿನೆಟ್ ಮೀಟಿಂಗ್ ಅನ್ನು ರದ್ದು ಮಾಡಲಾಗಿದೆ ಎಂದು ಮುಖ್ಯಮಂತ್ರಿಗಳ ಕಚೇರಿ ಮಾಹಿತಿ ನೀಡಿದೆ.
ಮತ್ತೊಂದೆಡೆ ಮಂಗಳವಾರ ತೆಲಂಗಾಣದಲ್ಲಿ ಸುಮಾರು 27 ಸೋಂಕಿತರು ಸಾವನ್ನಪ್ಪಿದ್ದು, ಹೊಸ ಪಾಸಿಟಿವ್ ಕೇಸ್ಗಳಿಗಿಂತ ಗುಣಮುಖರಾಗುವವರ ಸಂಖ್ಯೆ ಹೆಚ್ಚಿದೆ.