ಹೈದರಾಬಾದ್(ತೆಲಂಗಾಣ): ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿಗೆ ನ್ಯಾಯಾಲಯ 30 ವರ್ಷ ಜೈಲು ಶಿಕ್ಷೆ, 13 ಸಾವಿರ ದಂಡ ಹಾಕಿ ಆದೇಶ ಹೊರಡಿಸಿದೆ.
ಪಬ್ಲಿಕ್ ಪ್ರಾಸಿಕ್ಯೂಟರ್ ಕೊಂಗರ ರಾಜಿರೆಡ್ಡಿ ಪ್ರಕಾರ, ಆರೋಪಿ ಸುಶೀಲ್ ಕುಮಾರ್ ಸಿಂಗ್ (35) ರಂಗಾರೆಡ್ಡಿ ಜಿಲ್ಲೆಯ ರಾಜೇಂದ್ರನಗರ ತಾಲೂಕಿನ ಕ್ಯಾಟೆಡನ್‌ನಲ್ಲಿರುವ ಆಹಾರ ಉತ್ಪನ್ನ ಕಂಪನಿಗೆ ಹೊಂದಿಕೊಂಡಿರುವ ವಸತಿ ಸಂಕೀರ್ಣದಲ್ಲಿ ವಾಸಿಸುತ್ತಿದ್ದರು. ಅವರಿಗೆ ಪತ್ನಿ ಮತ್ತು ಮೂವರು ಮಕ್ಕಳಿದ್ದಾರೆ. ಅವರು ಬಿಹಾರದ ಸ್ವಗ್ರಾಮದಲ್ಲಿ ನೆಲೆಸಿದ್ದಾರೆ. ಬರೀ ಕುಡಿತ ಮತ್ತಿತರ ಕೆಟ್ಟ ಚಟಗಳಿಗೆ ದಾಸನಾಗಿದ್ದ ಈತ ಮೇ 4, 2019 ರಂದು ಏಳು ವರ್ಷದ ಬಾಲಕಿಗೆ ಸಮೋಸ ನೀಡುವುದಾಗಿ ನಂಬಿಸಿ ಬುದ್ವೆಲ್ ರೈಲು ನಿಲ್ದಾಣದ ಬಳಿಯ ನಿರ್ಜನ ಸ್ಥಳಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ.
ಮೈಲಾರ ದೇವುಲಪಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸಿಸಿ ಕ್ಯಾಮರಾಗಳ ಆಧಾರದ ಮೇಲೆ ಆರೋಪಿಯನ್ನು ಬಂಧಿಸಿ ರಿಮಾಂಡ್‌ಗೆ ಕಳುಹಿಸಿದ್ದರು. ಸಮಗ್ರ ತನಿಖೆಯ ನಂತರ ಆರೋಪಿಗಳ ವಿರುದ್ಧ ಪೋಕ್ಸೋ ಕಾಯ್ದೆಯಡಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಯಿತು. ಪ್ರಕರಣದ ವಿಚಾರಣೆ ನಡೆಸಿದ ಸೈಬರಾಬಾದ್ ಮೆಟ್ರೋಪಾಲಿಟನ್ ಸೆಷನ್ಸ್ ನ್ಯಾಯಾಧೀಶ ಆರ್.ತಿರುಪತಿ ಅವರು ಆರೋಪಿಗೆ 20 ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದೆ. ಇದಲ್ಲದೇ ಸಂತ್ರಸ್ತ ಮಗುವಿಗೆ ರೂ. 5 ಲಕ್ಷ ಪರಿಹಾರ ನೀಡುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಶಿಫಾರಸು ಮಾಡಲಾಗಿದೆ.
ಈ ಘಟನೆಯ ಮೊದಲು ಏಪ್ರಿಲ್ 29, 2019 ರಂದು ಆರೋಪಿ ಸುಶೀಲ್ ಕುಮಾರ್ ಸಿಂಗ್ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ರಾಜೇಂದ್ರನಗರ ಮಂಡಲದ ಮೈದಾನದಲ್ಲಿ ಆಟವಾಡುತ್ತಿದ್ದ ಏಳು ವರ್ಷದ ಬಾಲಕನನ್ನು ಸಮೀಪದ ಸ್ಮಶಾನಕ್ಕೆ ಕರೆದೊಯ್ದು ಅಮಾನುಷವಾಗಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಮೈಲಾರ ದೇವುಲಪಲ್ಲಿ ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದರು. ಆ ಬಳಿಕ ಕೂಲಂಕುಷವಾಗಿ ತನಿಖೆ ನಡೆಸಿದ ಪೊಲೀಸರು ತಾಂತ್ರಿಕ ಹಾಗೂ ವೈದ್ಯಕೀಯ ಸಾಕ್ಷ್ಯಗಳೊಂದಿಗೆ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ನ್ಯಾಯಾಧೀಶ ತಿರುಪತಿ ಅವರು ತಪ್ಪಿತಸ್ಥನಿಗೆ ಹತ್ತು ವರ್ಷ ಜೈಲು ಶಿಕ್ಷೆ ಹಾಗೂ ರೂ. 3000 ರೂ. ದಂಡ ವಿಧಿಸಿ ತೀರ್ಪು ಪ್ರಕಟಿಸಿದರು.
ಓದಿ: ಮದ್ಯ ಸೇವನೆಗೆ ಹಣ ಕೊಡಲಿಲ್ಲವೆಂದು ಬೆಂಕಿ ಹಚ್ಚಿ ಪತ್ನಿ ಕೊಲೆ.. ಪತಿಗೆ ಜೀವಾವಧಿ ಶಿಕ್ಷೆ