ಹೈದರಾಬಾದ್ (ತೆಲಂಗಾಣ): ಒಟ್ಟು 5.82 ಲಕ್ಷ ಚದರ ಅಡಿ ವಿಸ್ತೀರ್ಣ ಹೊಂದಿರುವ ವಿಶ್ವದ ಅತೀ ದೊಡ್ಡ ಇನ್ನೋವೇಶನ್ ಕ್ಯಾಂಪಸ್, ಬ್ಯುಸಿನೆಸ್ ಇನ್ಕ್ಯುಬೇಟರ್ ಟಿ-ಹಬ್‌ನ ಹೊಸ ಸೌಲಭ್ಯವನ್ನು ಜೂನ್ 28 ರಂದು ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ಉದ್ಘಾಟಿಸಿದರು. ನಗರದಲ್ಲಿ ಮಂಗಳವಾರ ಟಿಹಬ್-2 ಗ್ಲೋಬಲ್ ಇನ್ನೋವೇಶನ್ ಸೆಂಟರ್ ಭರ್ಜರಿ ಆರಂಭ ಪಡೆದುಕೊಂಡಿತು.
ಮುಖ್ಯಮಂತ್ರಿ ಕೆಸಿಆರ್ ಟಿ-ಹಬ್‌ನ ನೂತನ ಕಟ್ಟಡಕ್ಕೆ ಭೇಟಿ ನೀಡಿದರು. ಸಿಎಂ ಕೆಸಿಆರ್ ವಿವಿಧ ಮಹಡಿಗಳಲ್ಲಿ ಸ್ಥಾಪಿಸಲಾಗಿರುವ ಕಚೇರಿಗಳ ವಿವರಗಳನ್ನು ತಿಳಿದುಕೊಂಡರು. ಸಿಎಂಗೆ ಸಚಿವ ಕೆಟಿಆರ್ ಟಿಹಬ್ ವಿಶೇಷತೆಗಳನ್ನು ವಿವರಿಸಿದರು. ಗೇಮಿಂಗ್, ಅನಿಮೇಷನ್, ಸಿನಿಮಾಗಳಲ್ಲಿ 3ಡಿ ಎಫೆಕ್ಟ್ ನೀಡುವಂತಹ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಕಂಪನಿಗಳು ಹೈದರಾಬಾದ್‌ನಲ್ಲಿ ನೆಲೆಸಿದ್ದು, ಪ್ರಪಂಚದಾದ್ಯಂತ ಸೇವೆ ಸಲ್ಲಿಸುತ್ತಿವೆ ಎಂದು ಕೆಟಿಆರ್ ವಿವರಿಸಿದರು.
ಟಿಹಬ್-2 ಉದ್ಘಾಟನೆ ಬಳಿಕ ಮಾತನಾಡಿದ ಮುಖ್ಯಮಂತ್ರಿ ಕೆಸಿಆರ್, ಅದ್ಭುತ ನಗರವಾದ ಹೈದರಾಬಾದ್ ಜಾಗತಿಕ ಉದಯೋನ್ಮುಖ ರಾಜಧಾನಿಯಾಗಿದೆ ಮಾರ್ಪಟ್ಟಿದೆ. ರಾಜ್ಯ ಸರ್ಕಾರದ ಟಿಹಬ್ ದೇಶಕ್ಕೆ ಆದರ್ಶವಾಗಿದೆ. ಪ್ರತಿಭಾವಂತ ಯುವಕರನ್ನು ಉದ್ಯಮಿಗಳನ್ನಾಗಿ ರೂಪಿಸುವ ಉದ್ದೇಶದಿಂದ ತಂತ್ರಜ್ಞಾನ ಕೇಂದ್ರವನ್ನು ಸ್ಥಾಪಿಸುವ ಮೂಲಕ ತೆಲಂಗಾಣ ದೇಶದಲ್ಲೇ ಮೊಟ್ಟಮೊದಲ ಉದಯೋನ್ಮುಖ ರಾಜ್ಯವಾಗಿ ಹೊರಹೊಮ್ಮಿದೆ. ಈ ಮೂಲಕ ವಿಶ್ವಕ್ಕೆ ಪೈಪೋಟಿ ನೀಡುವಲ್ಲಿ ಮಹತ್ತರ ಸಾಧನೆ ಮಾಡಿದೆ ಎಂದು ವಿವರಿಸಿದರು.
‘ಆಲೋಚನೆಯಿಂದ ಬನ್ನಿ - ಆವಿಷ್ಕರಣದೊಂದಿಗೆ ಹೋಗಿ’ ಎಂಬ ಘೋಷವಾಕ್ಯದಡಿ ರಾಜ್ಯ ಸರ್ಕಾರ ನಿರ್ಮಿಸಿರುವ ಟಿಹಬ್-2 ಇನ್ನೋವೇಶನ್ ಕ್ಯಾಂಪಸ್ ಭಾರತೀಯ ಇತಿಹಾಸದಲ್ಲಿ ಒಂದು ಮೈಲಿಗಲ್ಲು ಮತ್ತು ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಜಾಗತಿಕ ಆವಿಷ್ಕಾರಕ್ಕೆ ವೇದಿಕೆಯಾಗಿದೆ. ಇದು ದೇಶದ ಭವಿಷ್ಯಕ್ಕೆ ಮಾರ್ಗದರ್ಶನ ನೀಡುತ್ತದೆ. ಟಿಹಬ್-2 ದೇಶದ ಯುವ ಭಾರತೀಯರಿಗೆ ಸಮರ್ಪಿಸಲಾಗಿದೆ. ಯುವಕರಿಗೆ ಮತ್ತು ಉದ್ಯಮಿಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುವುದು ಎಂದು ಸಿಎಂ ಕೆಸಿಆರ್ ಹೇಳಿದರು.
ಓದಿ: ಬ್ಯುಸಿನೆಸ್ ಇನ್ಕ್ಯುಬೇಟರ್ ಟಿ -ಹಬ್ ಉದ್ಘಾಟಿಸಲಿರುವ ಮುಖ್ಯಮಂತ್ರಿ ಕೆಸಿಆರ್
ಟಿ-ಹಬ್ ತೆಲಂಗಾಣಕ್ಕೆ ಹೆಮ್ಮೆ: ಎಂಟು ವರ್ಷಗಳ ಹಿಂದೆ ತೆಲಂಗಾಣ ರಾಜ್ಯ ಉದಯವಾದ ನಂತರ ನಿರಂತರ ಆವಿಷ್ಕಾರಗಳು ಮತ್ತು ಉಪಕ್ರಮಗಳನ್ನು ಉತ್ತೇಜಿಸುವ ನಿರ್ಧಾರದೊಂದಿಗೆ ಟಿಹಬ್ ಅನ್ನು 2015 ರಲ್ಲಿ ಪ್ರಾರಂಭಿಸಲಾಯಿತು. ತೆಲಂಗಾಣದಲ್ಲಿ ಮೊದಲ ಬಾರಿಗೆ ಸರ್ಕಾರಿ ಪ್ರಾಯೋಜಿತ ನೀತಿಯನ್ನು ಆರಂಭಿಸಲಾಗಿದೆ.
75 ನೇ ಸ್ವಾತಂತ್ರ್ಯ ದಿನಾಚರಣೆಗೆ ಕೆಲವು ದಿನಗಳ ಮೊದಲು ಟಿ -ಹಬ್‌ನ ವಿಸ್ತರಣೆ ಮಾಡಿರುವುದರಿಂದ ತೆಲಂಗಾಣದ ತಾಂತ್ರಿಕ ಮತ್ತು ಕೈಗಾರಿಕಾ ಪ್ರಗತಿಗೆ ಸಾಕ್ಷಿಯಾಗಿದೆ. ಕಾರ್ಪೊರೇಟ್ ಮತ್ತು ಶೈಕ್ಷಣಿಕ ಸಂಸ್ಥೆಗಳೊಂದಿಗೆ ಪಾಲುದಾರಿಕೆ ಸ್ಥಾಪಿಸಲಾಗಿದೆ. ಇದು ಎಲ್ಲರೂ ಒಟ್ಟಾಗಿ ಕೆಲಸ ಮಾಡಲು, ಪರಸ್ಪರ ಸಹಾಯ ಮಾಡಲು ಅನುಕೂಲ ಮಾಡುತ್ತದೆ. ಟಿ-ಹಬ್ ಜೊತೆಗೆ ಟಿಎಸ್ಐಸಿ, ರಿಚ್, ಟಿವರ್ಕ್ಸ್, ಟಾಸ್ಕ್ ಮತ್ತು ಟಿಫೈಬರ್ ನಂತಹ ಕಂಪನಿಗಳು ರಾಜ್ಯದ ಆವಿಷ್ಕಾರಣಗಳಿಗೆ ಪ್ರೇರೇಪಿಸುತ್ತಿವೆ ಎಂದರು.
ರತನ್ ಟಾಟಾ ಶ್ಲಾಘನೆ: ಟಿ-ಹಬ್ ಸ್ಥಾಪನೆಯಿಂದಾಗಿ ಉದ್ಯಮಿ ದಿಗ್ಗಜ ರತನ್ ಟಾಟಾಗೆ ಸಂತಸವಾಗಿದೆ. ಅವರು ತೆಲಂಗಾಣ ಸಿಎಂ ಕೆಸಿಆರ್ಗೆ ಅಭಿನಂದನೆಗಳು ಸಲ್ಲಿಸಿದ್ದಾರೆ. ಹೈದರಾಬಾದ್‌ನಲ್ಲಿ ಹೊಸ ಟೀ ಹಬ್ ಸ್ಥಾಪಿಸಿದ್ದಕ್ಕಾಗಿ ತೆಲಂಗಾಣ ಸರ್ಕಾರ ಮತ್ತು ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ರಿಗೆ ಅಭಿನಂದನೆಗಳು. ಹೌದು, ಇದು ಭಾರತೀಯ ಸ್ಟಾರ್ಟ್ - ಅಪ್‌ಗಳ ಪರಿಸರ ವ್ಯವಸ್ಥೆಗೆ ಉತ್ತಮ ಉತ್ತೇಜನವಾಗಿದೆ ಎಂದು ರತನ್ಟಾಟಾ ಟ್ವೀಟ್ ಮಾಡಿದರು.
ಐಟಿ ಅಭಿವೃದ್ಧಿಗೆ ಅವಿರತವಾಗಿ ಶ್ರಮಿಸಿದ ಸಚಿವ ಕೆಟಿಆರ್ ಅವರೊಂದಿಗೆ ಅಧಿಕಾರಿಗಳ ತಂಡವನ್ನು ಮುಖ್ಯಮಂತ್ರಿಗಳು ವಿಶೇಷವಾಗಿ ಶ್ಲಾಘಿಸಿದರು. ಪೊಲೀಸ್ ಇಲಾಖೆಯಲ್ಲಿ ತಂತ್ರಜ್ಞಾನವನ್ನು ಇನ್ನಷ್ಟು ಸುಧಾರಿಸುವ ನಿಟ್ಟಿನಲ್ಲಿ ಸೈಬರ್ ಕ್ರೈಂ ತಡೆಗೆ ಕಮಾಂಡ್ ಮತ್ತು ಕಂಟ್ರೋಲ್ ರೂಂ ಅನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಟಿಹಬ್ನೊಂದಿಗೆ ಸಮನ್ವಯ ಸಾಧಿಸುವಂತೆ ಡಿಜಿಪಿ ಮಹೇಂದರ್ ರೆಡ್ಡಿ ಅವರಿಗೆ ಸೂಚಿಸಿದರು. ಕಾರ್ಯಕ್ರಮದಲ್ಲಿ ಸಂಸದ ರಂಜಿತ್ ರೆಡ್ಡಿ, ಮಾಜಿ ಸ್ಪೀಕರ್, ಎಂಎಲ್‌ಸಿ ಮಧುಸೂದನಾಚಾರಿ, ಎಂಎಲ್‌ಸಿಗಳಾದ ಪಲ್ಲಾ ರಾಜೇಶ್ವರರೆಡ್ಡಿ, ಶಾಸಕರಾದ ಅರಿಕೆಪುಡಿ ಗಾಂಧಿ, ಮರ್ರಿ ಜನಾರ್ದನರೆಡ್ಡಿ, ಟಿಎಸ್‌ಐಐಸಿ ಅಧ್ಯಕ್ಷ ಗಾಧರಿ ಬಾಲಮಲ್ಲು, ತೆಲಂಗಾಣ ರಾಜ್ಯ ತಂತ್ರಜ್ಞಾನ ಸೇವಾ ಅಧ್ಯಕ್ಷ ಪಾಟಿಮಿಡಿ ಜಗನ್ಮೋಹನ್ ರೆಡ್ಡಿ, ಸಿಎಸ್ ಸೋಮಶೀರ್ ಉಪಸ್ಥಿತರಿದ್ದರು.