ಹೈದರಾಬಾದ್ : ದೇಶವನ್ನು ಒತ್ತೆಯಾಳಾಗಿ ಹಿಡಿದಿರುವ ಮೋದಿ ಸರ್ಕಾರವನ್ನು ಕಿತ್ತೊಗೆಯುವ ಸಮಯ ಹತ್ತಿರವಾಗಿದೆ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ (ಕೆಸಿಆರ್) ಹೇಳಿದರು. ಬಿಜೆಪಿಯನ್ನು ಕಿತ್ತೊಗೆಯಲು ಎಲ್ಲ ರಾಜಕೀಯ ಶಕ್ತಿಗಳು ಒಂದಾಗಬೇಕು. ಜನರೆಲ್ಲ ಒಗ್ಗೂಡಿದರೆ ನಾಯಕರ ಕುರ್ಚಿಗಳು ಕದಲುತ್ತವೆ ಎಂದರು.
ಕಾಂಗ್ರೆಸ್‌ನತ್ತ ತಮ್ಮ ಒಲವಿನ ಸುಳಿವು ನೀಡಿರುವ ಕೆಸಿಆರ್, ದೇಶದಲ್ಲಿ ಬಿಜೆಪಿ ಆಡಳಿತ ಮುಂದುವರೆದರೆ ದೇಶ ಸರ್ವನಾಶವಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ವಿವಿಧ ರಾಜಕೀಯ ಪಕ್ಷಗಳನ್ನು ಒಗ್ಗೂಡಿಸುವ ಪ್ರಯತ್ನಗಳ ಭಾಗವಾಗಿ ಶೀಘ್ರದಲ್ಲೇ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಮತ್ತು ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಅವರೊಂದಿಗೆ ಸಭೆ ನಡೆಸುವುದಾಗಿ ಅವರು ತಿಳಿಸಿದ್ಧಾರೆ.
ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಅಧ್ಯಕ್ಷರು ಬ್ಯಾನರ್ಜಿ ಅವರಿಗೆ ಕರೆ ಮಾಡಿದ್ದಾರೆ ಮತ್ತು ಅವರು ದೂರವಾಣಿಯಲ್ಲಿ ಚರ್ಚೆ ನಡೆಸಿದ್ದಾರೆ ಎಂದು ಹೇಳಿದರು. ಇನ್ನು ಜನಾದೇಶವನ್ನು ಪಡೆಯದಿದ್ದರೂ ಅಧಿಕಾರ ಹಿಡಿಯಲು ಕರ್ನಾಟಕ ಮತ್ತು ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರಗಳನ್ನು ಬಿಜೆಪಿ ಉರುಳಿಸಿದೆ ಎಂದು ಆರೋಪಿಸಿದರು.
ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಕೆಸಿಆರ್, ಧರ್ಮದ ಹೆಸರಿನಲ್ಲಿ ಗಲಭೆ ಸೃಷ್ಟಿಸುವ ಪ್ರಯತ್ನಗಳ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಇದು ಅಂತರ್ಯುದ್ಧದಂತಹ ಪರಿಸ್ಥಿತಿಗೆ ಕಾರಣವಾಗಬಹುದು ಎಂದು ಅವರು ಎಚ್ಚರಿಸಿದರು.
ಇದನ್ನೂ ಓದಿ: ಸರ್ಜಿಕಲ್ ದಾಳಿ ಕುರಿತು ಸಾಕ್ಷಿ ಕೊಡಿ : ಕೇಂದ್ರಕ್ಕೆ ಸವಾಲು ಹಾಕಿದ ತೆಲಂಗಾಣ ಸಿಎಂ