ಹೈದರಾಬಾದ್ (ತೆಲಂಗಾಣ): ಅಲ್ಲಿ ಇನ್ನೇನು ಸ್ವಲ್ಪ ಹೊತ್ತಿನಲ್ಲಿಯೇ ವರ ವಧುವಿನ ಕೊರಳಿಗೆ ತಾಳಿ ಕಟ್ಟಬೇಕಿತ್ತು. ಬಂಧು-ಬಳಗ ಸೇರಿದ ಕಲ್ಯಾಣ ಮಂಟಪದಲ್ಲಿ ಸಂಭ್ರಮ, ಸಡಗರದ ವಾತಾವರಣವಿತ್ತು. ಅಷ್ಟರಲ್ಲಿ ವರನಿಗೆ ಶಾಕ್!. ಈ ಮದುವೆಯೇ ಬೇಡ ಎಂದು ಪಟ್ಟು ಹಿಡಿದ ವಧು ಮದುವೆಯನ್ನು ದಿಢೀರ್ ಕ್ಯಾನ್ಸಲ್ ಮಾಡಿದ್ದಾಳೆ. ನಮಗೆ ಇನ್ನಷ್ಟು ವಧುದಕ್ಷಿಣೆ ಬೇಕು, ನೀವು ಕೊಟ್ಟಿದ್ದು ಸಾಲುವುದಿಲ್ಲ ಎಂದು ಬೇಡಿಕೆ ಇಟ್ಟಿದ್ದಾಳೆ. ಇಂಥದ್ದೊಂದು ಘಟನೆ ಹೈದರಾಬಾದ್‌ನ ಘಟಕೇಸರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ನಡೆಯಿತು.
ಸಂಪೂರ್ಣ ವಿವರ: ಸಂಬಂಧಿಕರು ಮತ್ತು ಪೊಲೀಸರ ಹೇಳುವಂತೆ, ಪೋಚಾರಂ ಪುರಸಭೆ ವ್ಯಾಪ್ತಿಯ ಯುವಕ ಭದ್ರಾದ್ರಿ ಕೊತಗುಡೆಂ ಜಿಲ್ಲೆಯ ಅಶ್ವರಾವ್‌ಪೇಟೆ ನಿವಾಸಿಯಾದ ಯುವತಿಯನ್ನು ಮದುವೆಯಾಗಬೇಕಿತ್ತು. ಇಬ್ಬರ ಮದುವೆ ಗುರುವಾರ ನಿಶ್ಚಿಯವಾಗಿದೆ. ಹುಡುಗನ ಕಡೆಯವರು 2 ಲಕ್ಷ ರೂಪಾಯಿ ವಧುದಕ್ಷಿಣೆ ಕೊಡುವುದಾಗಿ ಹಿರಿಯರ ಸಮ್ಮುಖದಲ್ಲಿ ಒಪ್ಪಿದ್ದರು. ವರನ ಕುಟುಂಬಸ್ಥರು ವಧುವಿನ ಕುಟುಂಬಸ್ಥರಿಗೆ ಈ ಹಣವನ್ನೂ ನೀಡಿದ್ದಾರೆ. ಗುರುವಾರ ಸಂಜೆ ಸಮಯ 7:21ಕ್ಕೆ ಮದುವೆ ಮದುವೆ ನಿಶ್ಚಯವಾಗಿದೆ. ಘಟಕೇಸರದ ಫಂಕ್ಷನ್ ಹಾಲ್‌ನಲ್ಲಿ ಮದುವೆ ನಡೆಯಲಿದೆ ಎಂದು ಯುವಕನ ಕುಟುಂಬಸ್ಥರು ಸಂಬಂಧಿಕರಿಗೆ ಆಹ್ವಾನ ಪತ್ರಿಕೆಗಳನ್ನು ಹಂಚಿದ್ದರು. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಇಷ್ಟೊತ್ತಿಗೆ ಮದುವೆ ನಡೆದು ಹೋಗುತ್ತಿತ್ತು. ಆದ್ರೆ ಈ ಮದುವೆ ನಡೆಯಲೇ ಇಲ್ಲ.
ಮುಹೂರ್ತಕ್ಕೂ ಮುನ್ನ ವರನ ಕುಟುಂಬಸ್ಥರು, ಬಂಧು ಮಿತ್ರರು ಕಲ್ಯಾಣ ಮಂಟಪ ತಲುಪಿದ್ದರು. ಶುಭ ಮುಹೂರ್ತದ ಸಮಯವೂ ಆಗಿತ್ತು. ಮದುವೆ ಹೆಣ್ಣು ಮತ್ತು ಆಕೆಯ ಕುಟುಂಬಸ್ಥರು ಎಷ್ಟು ಸಮಯ ಕಳೆದರೂ ಕಲ್ಯಾಣ ಮಂಟಪಕ್ಕೆ ವಧು, ಆಕೆಯ ಕುಟುಂಬಸ್ಥರು ಬರಲೇ ಇಲ್ಲ. ಹೀಗಾಗಿ, ಕಲ್ಯಾಣ ಮಂಟಪಕ್ಕೆ ಬಾರದ ಕಾರಣ ಗಾಬರಿಗೊಂಡ ಯುವಕನ ಕುಟುಂಬಸ್ಥರು ಯುವತಿಯ ಕುಟುಂಬಸ್ಥರಿಗೆ ಕರೆ ಮಾಡಿ ವಿಚಾರಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ವಧು, ನಮಗೆ ನೀವು ನೀಡಿದ ವಧುದಕ್ಷಿಣೆ ಸಾಕಾಗುವುದಿಲ್ಲ. ಇನ್ನೂ ಹೆಚ್ಚು ಹಣವನ್ನು ನೀವು ನಮಗೆ ಬೇಕು. ಇಲ್ಲವಾದಲ್ಲಿ ಈ ಮದುವೆ ನಡೆಯಲು ಸಾಧ್ಯವಿಲ್ಲ ಎಂದು ನಿಷ್ಠುರವಾಗಿ ಹೇಳಿದ್ದಾಳೆ. ಇದಕ್ಕೆ ಆಕೆಯ ಕುಟುಂಬಸ್ಥರೂ ದನಿಗೂಡಿಸಿದ್ದಾರೆ.
ಈ ಬೇಡಿಕೆ ಕೇಳಿ ವರ ಮತ್ತು ಆತನ ಕುಟುಂಬಸ್ಥರಿಗೆ ಆಘಾತವಾಗಿದೆ. ಹೆಚ್ಚು ವಧುದಕ್ಷಿಣೆ ಕೊಟ್ಟಲ್ಲಿ ಮಾತ್ರ ಮದುವೆ ಮಾಡಿಕೊಳ್ಳುವುದಾಗಿ ತಿಳಿಸಿದ್ದರಿಂದ ಮುಂದೆ ಏನ್ಮಾಡ್ಬೇಕು ಎಂದು ವರನ ಕುಟುಂಬಸ್ಥರಿಗೆ ತೋಚಲಿಲ್ಲ. ಹೀಗಾಗಿ ಅವರು ಘಟಕೇಸರ್ ಪೊಲೀಸ್ ಠಾಣೆಯ ಕದ ತಟ್ಟಿ ದೂರು ನೀಡಿದ್ದಾರೆ.
ಪೊಲೀಸರು ಯುವತಿಯ ಕುಟುಂಬಸ್ಥರನ್ನು ಠಾಣೆಗೆ ಕರೆತಂದಿದ್ದಾರೆ. ಅಲ್ಲಿಯೂ ವಧುವಿನ ಕುಟುಂಬಸ್ಥರ ಮನವೊಲಿಕೆ ಕಸರತ್ತು ನಡೆಯಿತು. ಆದ್ರೂ ಅವರು ಒಪ್ಪಲಿಲ್ಲ. ಹೀಗಾಗಿ ವರನ ಕಡೆಯವರು ಆರಂಭದಲ್ಲಿ ನೀಡಿದ್ದ 2 ಲಕ್ಷ ರೂಪಾಯಿ ಹಣವನ್ನು ವಧುವಿನ ಕುಟುಂಬಸ್ಥರು ಹಿಂತಿರುಗಿಸಿ ಪೊಲೀಸ್ ಠಾಣೆಯಿಂದ ಮನೆಗೆ ಹೊರಟುಹೋದರು. ಹೀಗೆ ವಧುದಕ್ಷಿಣೆಗಾಗಿ ಕಲ್ಯಾಣ ಮಂಟಪದಲ್ಲೇ ಮದುವೆ ರದ್ದಾದ ವಿಚಿತ್ರ ಘಟನೆ ತೆಲಂಗಾಣದಲ್ಲಿ ನಡೆಯಿತು.
ಇದನ್ನೂ ಓದಿ: ಒಂದೇ ಮಂಟಪದಲ್ಲಿ ಇಬ್ಬರಿಗೆ ತಾಳಿ ಕಟ್ಟಿದ ಯುವಕ!