ಹೈದರಾಬಾದ್: ಮೊಹಮ್ಮದ್ ಪೈಗಂಬರ್ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿರುವ ಆರೋಪದ ಮೇಲೆ ತೆಲಂಗಾಣ ಬಿಜೆಪಿ ಶಾಸಕ ಟಿ. ರಾಜಾ ಸಿಂಗ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಧಾರ್ಮಿಕ ಭಾವನೆಗಳಿಗೆ ಘಾಸಿ ಉಂಟು ಮಾಡಿದ ಆರೋಪ ಇವರ ಮೇಲಿದೆ. ಇವರ ಹೇಳಿಕೆ ಖಂಡಿಸಿ ಹೈದರಾಬಾದ್ನಲ್ಲಿ ಬೃಹತ್ ಪ್ರತಿಭಟನೆಗಳು ನಡೆಯುತ್ತಿವೆ. ಈ ಮಧ್ಯೆ ಇಂದು ಬೆಳಗ್ಗೆ ಆರೋಪಿ ಶಾಸಕರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಮೊಹಮ್ಮದ್ ಪೈಗಂಬರ್ ವಿರುದ್ಧ ಹೇಳಿಕೆ ನೀಡಿದ್ದ ರಾಜಾ ಸಿಂಗ್ ವಿರುದ್ಧ ಹಲವಾರು ದೂರುಗಳು ದಾಖಲಾಗಿವೆ. ಅಷ್ಟೇ ಅಲ್ಲದೆ ಡಬೀರ್‌ಪುರ, ಭವಾನಿ ನಗರ, ರೈನ್‌ಬಜಾರ್, ಮೀರ್‌ಚೌಕ್ ಪೊಲೀಸ್ ಠಾಣೆಗಳ ಮುಂದೆ ಸಾವಿರಾರು ಸಂಖ್ಯೆಯಲ್ಲಿ ಜನತೆ ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ. ಒಂದು ಸಮುದಾಯದ ಧಾರ್ಮಿಕ ಭಾವನೆಗಳಿಗೆ ರಾಜಾ ಸಿಂಗ್ ಧಕ್ಕೆ ತಂದಿದ್ದಾರೆ ಎಂದು ಜನತೆ ಆಕ್ರೋಶ ವ್ಯಕ್ತಪಡಿಸಿದರು.
ರಾಜಾ ಸಿಂಗ್ ಇತ್ತೀಚೆಗೆ ವೀಡಿಯೊ ಒಂದನ್ನು ಅಪ್ಲೋಡ್ ಮಾಡಿದ್ದು, ಅದರಲ್ಲಿ ಮೊಹಮ್ಮದ್ ಪೈಗಂಬರ್ ಅವರ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ಇದರ ನಂತರ ರೊಚ್ಚಿಗೆದ್ದ ಸಮುದಾಯದ ಜನ ಸೋಮವಾರ ರಾತ್ರಿಯೇ ಪೊಲೀಸ್ ಕಮಿಷನರ್ ಸಿ.ವಿ. ಆನಂದ ಅವರ ಕಚೇರಿ ಎದುರು ಹಾಗೂ ನಗರದ ಹಲವೆಡೆ ಪ್ರತಿಭಟನೆ ಆರಂಭಿಸಿದರು. ರಾಜಾ ಸಿಂಗ್ ಬಂಧನಕ್ಕೆ ಪ್ರತಿಭಟನಾಕಾರರು ಪಟ್ಟು ಹಿಡಿದರು. ಈ ವಿಡಿಯೋದಲ್ಲಿ ರಾಜಾ ಸಿಂಗ್ ಅವರು ಹಾಸ್ಯನಟ ಮುನವ್ವರ್ ಫಾರೂಕಿ ಮತ್ತು ಅವರ ತಾಯಿಯ ಬಗ್ಗೆಯೂ ಕಾಮೆಂಟ್ ಮಾಡಿದ್ದಾರೆ ಎನ್ನಲಾಗಿದೆ.
ಬಂಡಿ ಸಂಜಯ್ ಬಂಧನ: ತೆಲಂಗಾಣ ಬಿಜೆಪಿ ರಾಜ್ಯಾಧ್ಯಕ್ಷ ಬಂಡಿ ಸಂಜಯ್ ಕುಮಾರ್ ಅವರನ್ನು ಬಂಧಿಸಲಾಗಿದೆ. ಬಿಜೆಪಿ ಕಾರ್ಯಕರ್ತರ ಬಂಧನ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಬಂಡಿ ಸಂಜಯ್ ಕುಮಾರ್ ಅವರನ್ನು ಜಂಗಾಂವ್ ಜಿಲ್ಲೆಯಲ್ಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.