ಹೈದರಾಬಾದ್: ಹೈಕೋರ್ಟ್ನ ಸೂಚನೆಯಂತೆ ತೆಲಂಗಾಣ ಸರ್ಕಾರ ಶಬ್ದ ಮಾಲಿನ್ಯ ಹಾಗೂ ವಾಯು ಮಾಲಿನ್ಯ ನಿಯಂತ್ರಣಕ್ಕಾಗಿ ಈ ಬಾರಿ ದೀಪಾವಳಿಗೆ ಪಟಾಕಿಗಳನ್ನು ಮಾರುವುದು ಹಾಗೂ ಬಳಸುವುದನ್ನು ನಿಷೇಧ ಮಾಡಿದೆ.
ಮಂಗಳವಾರ ಪಟಾಕಿ ಮಾರಾಟವನ್ನು ತಡೆಯಲು ಹಾಗೂ ಈ ಬಾರಿ ದೀಪಾವಳಿಯಲ್ಲಿ ಸಾರ್ವಜನಿಕರು ಅದನ್ನು ಬಳಸದಂತೆ ತಡೆಯಲು ಶೀಘ್ರವೇ ಕಟ್ಟನಿಟ್ಟಿನ ಆದೇಶ ಜಾರಿಗೊಳಿಸುವಂತೆ ತೆಲಂಗಾಣ ಸರ್ಕಾರಕ್ಕೆ ಸೂಚನೆ ನೀಡಿತ್ತು.
ತೆಲಂಗಾಣ ಹೈಕೋರ್ಟ್ನ ಸೂಚನೆಯಂತೆ ಸರ್ಕಾರ ಪಟಾಕಿ ಬ್ಯಾನ್ ಆದೇಶವನ್ನು ಜಾರಿಗೊಳಿಸಿದ್ದರೂ ಸುಪ್ರೀಂಕೋರ್ಟ್ ಕೆಲವೊಂದು ತಿದ್ದುಪಡಿಗಳನ್ನು ಮಾಡಿ, ನಿಗದಿತ ಸಮಯದಲ್ಲಿ ಪಟಾಕಿ ಸಿಡಿಸಲು ಅನುವು ಮಾಡಿಕೊಟ್ಟಿದೆ.
ಹಸಿರು ನ್ಯಾಯಾಧೀಕರಣದ ಮಾರ್ಗಸೂಚಿಗಳ ಅನ್ವಯ ಸುಪ್ರೀಂಕೋರ್ಟ್ ಕೆಲವೊಂದು ತಿದ್ದುಪಡಿಗಳನ್ನು ಮಾಡಿದೆ. ಅವುಗಳೆಂದರೆ..
- ಪ್ರದೇಶದ ಗಾಳಿಯ ಗುಣಮಟ್ಟ ಆಧರಿಸಿ ಪಟಾಕಿ ಖರೀದಿಯ ಮೇಲೆ ನಿರ್ಬಂಧ
- ಪಟಾಕಿ ಸಿಡಿಸಲು ರಾತ್ರಿ 8ರಿಂದ 10 ಗಂಟೆಯವರೆಗೆ ಮಾತ್ರ ಅವಕಾಶ
- ಅತಿ ಹೆಚ್ಚು ವಾಯು ಮಾಲಿನ್ಯದ ಪ್ರದೇಶಗಳಲ್ಲಿ ಪಟಾಕಿಗೆ ನಿಷೇಧ
- ದೀಪಾವಳಿ ಮಾತ್ರವಲ್ಲದೆ ಕ್ರಿಸ್ಮಸ್, ಹೊಸ ವರ್ಷದಂದೂ ಇದು ಅನ್ವಯ
ಈ ಮೊದಲು ಸಾರ್ವಜನಿಕರು ಪಟಾಕಿ ಸುಡದೆ ಪರಿಸರ ರಕ್ಷಿಸಬೇಕು, ಮಾಲಿನ್ಯವಾಗುವುದನ್ನು ತಪ್ಪಿಸಬೇಕೆಂದು ಮನವಿ ಮಾಡಲಾಗಿತ್ತು. ಈ ಸೂಚನೆಯಂತೆ ಸರ್ಕಾರ ಪಟಾಕಿ ನಿಷೇಧ ಮಾಡಿದೆ.
ಸರ್ಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ರಾಜ್ಯದ ಡಿಜಿಪಿ, ಆಗ್ನಿಶಾಮಕ ದಳದ ಡಿಜಿ, ಎಲ್ಲಾ ಜಿಲ್ಲಾಧಿಕಾರಿಗಳು, ಪೊಲೀಸ್ ಆಯುಕ್ತರು, ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಎಲ್ಲಾ ಪಟಾಕಿ ಮಳಿಗೆ ಬಂದ್ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ.