ಹೈದರಾಬಾದ್: ತೆಲಂಗಾಣ ರಾಜ್ಯ ವಿಧಾನಸಭೆ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗವು ಇಂದು ಅಧಿಸೂಚನೆ ಬಿಡುಗಡೆ ಮಾಡಿದ್ದು, ಇಂದಿನಿಂದ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ನವೆಂಬರ್10 ನಾಪಮತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ರಾಜ್ಯದ 119 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು ಇದಕ್ಕಾಗಿ ಚುನಾವಣಾ ಆಯೋಗ ಈಗಾಗಲೇ ಎಲ್ಲ ಅಗತ್ಯ ಸಿದ್ಧತೆಗಳನ್ನೂ ಮಾಡಿಕೊಂಡಿದೆ. ಹೀಗಾಗಿ ಬಿ ಫಾರಂ ಪಡೆದ ಅಭ್ಯರ್ಥಿಗಳು ಇಂದಿನಿಂದಲೇ ನಾಮಪತ್ರ ಸಲ್ಲಿಸಬಹುದಾಗಿದೆ. ಬೆಳಗ್ಗೆ 11ರಿಂದ ಮಧ್ಯಾಹ್ನ 3ರವರೆಗೆ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ನಾಮಪತ್ರಗಳನ್ನು ಸ್ವೀಕರಿಸಲಾಗುವುದಾಗಿ ಆಯೋಗ ತಿಳಿಸಿದೆ.
ನಾಮಪತ್ರ ಸಲ್ಲಿಕೆ ವೇಳೆ ನಾಮಿನಿಯೊಂದಿಗೆ ಕೇವಲ ಐದು ಜನರಿಗೆ ಮಾತ್ರ ಕಚೇರಿ ಒಳಗೆ ಪ್ರವೇಶ ನೀಡಲಾಗುವುದು. ಕಚೇರಿಯಿಂದ 100 ಮೀಟರ್ ವರೆಗೆ ಅಭ್ಯರ್ಥಿಗೆ ಸೇರಿದ 3ವಾಹನಗಳಿಗೆ ಮಾತ್ರ ಅನುಮತಿಸಲಾಗುತ್ತದೆ. ಅಭ್ಯರ್ಥಿಯು ನಾಮಪತ್ರ ಸಲ್ಲಿಸುವ ಒಂದು ದಿನ ಮುಂಚಿತವಾಗಿ ರಾಜ್ಯದ ಯಾವುದೇ ಬ್ಯಾಂಕ್‌ನಲ್ಲಿ ಚುನಾವಣೆಗಾಗಿ ಪ್ರತ್ಯೇಕ ಬ್ಯಾಂಕ್ ಖಾತೆ ತೆರೆಯಬೇಕು. ನಾಮಪತ್ರದೊಂದಿಗೆ ತೆರೆಯಲಾದ ಬ್ಯಾಂಕ್ ಖಾತೆಯನ್ನು ಚುನಾಚಣಾಧಿಕಾರಿಗಳ ಕಚೇರಿಯಲ್ಲಿ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.
ಅಭ್ಯರ್ಥಿಗಳು ಸಲ್ಲಿಸಿರುವ ನಾಮಪತ್ರಗಳ ಪರಿಶೀಲನೆ ನವೆಂಬರ್ 13ರಂದು ನಡೆಯಲಿದೆ. ನಾಮಪತ್ರಗಳನ್ನು ಹಿಂಪಡೆಯಲು ನವೆಂಬರ್ 15 ಕೊನೆಯ ದಿನಾಂಕವಾಗಿದೆ. ನವೆಂಬರ್ 30ರಂದು ಮತದಾನ ನಡೆಯಲಿದ್ದು, ಡಿಸೆಂಬರ್ ಮೂರಕ್ಕೆ ಮತ ಎಣಿಕೆ ಕಾರ್ಯ ನಡೆಯಲಿದೆ.
ಚುನಾವಣೆಯಿಂದ ಹಿಂದೆ ಸರಿದ ವೈಎಸ್ಆರ್ ತೆಲಂಗಾಣ ಪಕ್ಷ: ತೆಲಂಗಾಣ ವಿಧಾನಸಭಾ ಚುನಾವಣೆಗೆ ವೈಎಸ್ಆರ್ ತೆಲಂಗಾಣ ಪಕ್ಷ ಸ್ಪರ್ಧಿಸುವುದಿಲ್ಲ ಎಂದು ಪಕ್ಷದ ಅಧ್ಯಕ್ಷೆ ವೈ.ಎಸ್.ಶರ್ಮಿಳಾ ಘೋಷಿಸಿದ್ದಾರೆ. ಬದಲಿಗೆ ಚುನಾವಣೆಗೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವುದಾಗಿ ಅವರು ಹೇಳಿದ್ದಾರೆ. ಕಾಂಗ್ರೆಸ್ನ ಮತ ವಿಭಜನೆಯಾಗುವುದನ್ನು ತಾವು ಬಯಸುವುದಿಲ್ಲ ಎಂದೂ ಅವರು ತಿಳಿಸಿದರು. ಶರ್ಮಿಳಾ ಅವರು ಕಾಂಗ್ರೆಸ್ ಜೊತೆ ಕೈ ಜೋಡಿಸಲಿದ್ದಾರೆ ಎಂಬ ಊಹಾಪೋಹಗಳು ಕೆಲ ತಿಂಗಳ ಹಿಂದೆ ಹಬ್ಬಿದ್ದವು. ಆದಾಗ್ಯೂ ವೈಎಸ್ಆರ್ಟಿಪಿ ತೆಲಂಗಾಣದ 119 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ ಎಂದು ಅಕ್ಟೋಬರ್ 12 ರಂದು ವೈಎಸ್ಆರ್ಟಿಪಿ ಅಧ್ಯಕ್ಷೆ ಶರ್ಮಿಳಾ ಘೋಷಿಸಿದ್ದರು. ಶರ್ಮಿಳಾ ಅವರು ಅಕ್ಟೋಬರ್-2021 ರಲ್ಲಿ ತಮ್ಮ 4,000 ಕಿಲೋಮೀಟರ್ ಪ್ರಯಾಣದ 'ಮಾರೋ ಪ್ರಜಾ ಪ್ರಸ್ಥಾನಂ' ಪಾದಯಾತ್ರೆಯನ್ನು ಪ್ರಾರಂಭಿಸಿದ್ದರು. ಇದೀಗ ತಮ್ಮ ಪಕ್ಷ ಚುನಾವಣೆಯಿಂದ ಹಿಂದೆ ಸರಿದಿರುವುದಾಗಿ ಘೋಷಿಸಿ ಅಚ್ಚರಿ ಮೂಡಿಸಿದ್ದಾರೆ. ಇದೇ ವೇಳೆ ತೆಲಂಗಾಣ ಚುನಾವಣೆಯಲ್ಲಿ ಸ್ಪರ್ಧಿಸದಿರಲು ಕಾರಣಗಳನ್ನು ವಿವರಿಸಿದ್ದಾರೆ. ಈ ಬಾರಿ ಮತಗಳು ವಿಭಜನೆಯಾಗಿ ಕೆ ಚಂದ್ರಶೇಖರ್ ರಾವ್ ಮರು ಆಯ್ಕೆಯಾಗುವ ಎಲ್ಲ ಸಾಧ್ಯತೆಗಳಿವೆ ಎಂದೂ ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ತಮಿಳುನಾಡು ಲೋಕೋಪಯೋಗಿ ಸಚಿವರ ಮೇಲೆ ಐಟಿ ದಾಳಿ; 80ಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧ