ಆದಿಲಾಬಾದ್ (ತೆಲಂಗಾಣ): ಅತ್ಯಂತ ಪ್ರೀತಿಯಿಂದ ನೋಡಿಕೊಂಡು..ಗುಣಮಟ್ಟದ ಶಿಕ್ಷಣ ಕೊಡಿಸುತ್ತಾ ಉತ್ತಮ ಸ್ಥಾನದಲ್ಲಿ ಮಗಳನ್ನು ನೋಡಬೇಕೆಂಬ ತಂದೆ - ತಾಯಿಯ ಆಸೆ ಆ ವಿಧಿ ಕಸಿದಿಕೊಂಡಿದೆ. ಎಷ್ಟೋ ಕಷ್ಟಪಟ್ಟು ಇಂಟರ್ ಮುಗಿಸಿ ಡಿಗ್ರಿ ವ್ಯಾಸಂಗ ಮಾಡುತ್ತಿದ್ದ ಯುವತಿಗೆ ಹಾವಿನ ರೂಪದಲ್ಲಿ ಸಾವು ಬಂದಿದೆ. ಈ ನೋವಿನ ಘಟನೆ ನಡೆದಿರೋದು ತೆಲಂಗಾಣದ ಆದಿಲಾಬಾದ್ ಜಿಲ್ಲೆಯಲ್ಲಿ
ಮೂರು ಬಾರಿ ಕಚ್ಚಿದ ನಾಗ: ಇಲ್ಲಿನ ಬೆದೋಡ ಗ್ರಾಮದ ರೈತ ಸುಭಾಷ್ಗೆ ಪ್ರಣಾಳಿ (18) ಎಂಬ ಏಕೈಕ ಮಗಳಿದ್ದಳು. ಮುದ್ದಿನಿಂದ ಸಾಕಿದ ಅವಳನ್ನು ಆದಿಲಾಬಾದ್ನಲ್ಲಿರುವ ಖಾಸಗಿ ಕಾಲೇಜ್ವೊಂದರಲ್ಲಿ ಡಿಗ್ರಿ ಓದಿಸುತ್ತಿದ್ದರು. ಕಳೆದ ವರ್ಷ ಸೆಪ್ಟಂಬರ್ನಲ್ಲಿ ಮನೆಯಲ್ಲಿ ಪ್ರಣಾಳಿ ಮಲಗಿದ್ದಾಗ ಕೈಗೆ ಹಾವು ಕಚ್ಚಿತ್ತು. ಪೋಷಕರು ನಾಲ್ಕು ಲಕ್ಷ ರೂಪಾಯಿ ಖರ್ಚು ಮಾಡಿ ತಮ್ಮ ಮಗಳನ್ನು ಬದುಕಿಸಿಕೊಂಡು ಬಂದಿದ್ದರು. ದುರ್ದೈವ ಎಂದರೆ ಇದೇ ಜನವರಿಯಲ್ಲಿ ಪ್ರಣಾಳಿ ಮನೆಯಂಗಳದಲ್ಲಿ ಕುಳಿತುಕೊಂಡಿದ್ದಾಗ ಮತ್ತೆ ಹಾವು ಕಚ್ಚಿತ್ತು. ಆಗಲೂ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮಗಳನ್ನು ಬದುಕಿಸಿಕೊಳ್ಳುವಲ್ಲಿ ಪೋಷಕರು ಯಶಸ್ವಿಯಾಗಿದ್ದರು.
ಓದಿ: IPL 2022 : ಸಿಎಸ್ಕೆ, ಕೆಕೆಆರ್ ನಡುವಿನ ಮೊದಲ ಪಂದ್ಯ ವೀಕ್ಷಿಸುವುದು ಎಲ್ಲಿ?, ಹೇಗೆ?
ವಿಧಿಯಾಟ: ಈ ಘಟನೆಗಳು ಪದೇ ಪದೆ ನಡೆಯುತ್ತಿದ್ದರಿಂದ ಪೋಷಕರು ತಮ್ಮ ಮಗಳನ್ನು ಕಣ್ಣಿನ ರೆಪ್ಪೆಯಂತೆ ನೋಡಿಕೊಳ್ಳುತ್ತಿದ್ದರು. ಮಗಳನ್ನು ಮನೆಯಲ್ಲೇ ಇರುವಂತೆ ಹೇಳುತ್ತಿದ್ದರು. ಆದರೆ ವಿಧಿ ಬಿಡಬೇಕಲ್ಲ. ಶುಕ್ರವಾರ ಹೋಳಿ ಹಬ್ಬದ ಪ್ರಯುಕ್ತ ತನ್ನ ಸ್ನೇಹಿತರಿಗೆ ಬಣ್ಣ ಹಚ್ಚಲು ಪ್ರಣಾಳಿ ತನ್ನ ಕಾಲೇಜ್ ಬ್ಯಾಗ್ನಲ್ಲಿದ್ದ ಬಣ್ಣದ ಪ್ಯಾಕೇಟ್ ತೆಗೆಯುವ ವೇಳೆ ಅದರಲ್ಲಿದ್ದ ಹಾವು ಕಚ್ಚಿದೆ.
ವಿಧಿದೇ ಗೆಲುವು: ಹಾವು ಕಚ್ಚಿದ ಕೂಡಲೇ ಪೋಷಕರು ಮಗಳನ್ನು ರಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ, ಚಿಕಿತ್ಸೆ ಫಲಿಸದೇ ಮಧ್ಯರಾತ್ರಿ ಪ್ರಣಾಳಿ ಶಾಶ್ವತವಾಗಿ ಕಣ್ಣು ಮುಚ್ಚಿದ್ದಾಳೆ. ಏಕೈಕ ಮಗಳನ್ನು ಕಳೆದುಕೊಂಡ ಕುಟುಂಬದ ರೋದನೆ ಮುಗಿಲು ಮುಟ್ಟಿದೆ. ಕಳೆದ ಏಳು ತಿಂಗಳಲ್ಲಿ ಹಾವು ಬೆನ್ನು ಬಿಡದೇ ಆಕೆಯನ್ನು ಮೂರನೇ ಬಾರಿಗೆ ಕಚ್ಚಿದೆ. ಎರಡು ಬಾರಿ ಸಾವಿನ ದವಡೆಯಿಂದ ತಪ್ಪಿಸಿಕೊಂಡು ಬಂದಿದ್ದ ಪ್ರಣಾಳಿ, ಮೂರನೇ ಬಾರಿಗೆ ಹಾವಿನಿಂದ ಕಚ್ಚಿಸಿಕೊಂಡು ಬದುಕುಳಿಯಲು ಸಾಧ್ಯವಾಗಿಲ್ಲ. ಎರಡು ಬಾರಿ ವಿಫಲವಾಗಿದ್ದ ಹಾವು ಮೂರನೇ ಬಾರಿಗೆ ತನ್ನ ಸೇಡು ತಿರಿಸಿಕೊಂಡಂತೆ ಕಾಣುತ್ತೆ.
ಇನ್ನು ಯುವತಿಗೆ ಕಚ್ಚಿರುವ ಹಾವು ಒಂದೇ ಅಥವಾ ಬೇರೆ - ಬೇರೆ ಹಾವುಗಳು ಎಂಬುದು ತಿಳಿದು ಬರಬೇಕಾಗಿದೆ. ಬದುಕು ಮತ್ತು ಸಾವು ನಡುವೇ ನಡೆದ ಹೋರಾಟದಲ್ಲಿ ವಿಧಿಯೇ ಗೆದ್ದಿದೆ.