ಬರೇಲಿ: ಉತ್ತರ ಪ್ರದೇಶದ ಬರೇಲಿಯಲ್ಲಿ 17 ವರ್ಷದ ಬಾಲಕಿ ಮೇಲೆ ಆಕೆಯ ಪ್ರಿಯಕರ ಮತ್ತು ಆತನ ಸ್ನೇಹಿತ ಸೇರಿ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿರುವ ಆರೋಪ ಕೇಳಿಬಂದಿದೆ. ಬಾಲಕಿಯ ತಾಯಿ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ನಾನು ಮತ್ತು ನನ್ನ ಮಗಳು ಮನೆಯಲ್ಲಿ ಯಾವುದೋ ಕೆಲಸದಲ್ಲಿ ತೊಡಗಿದ್ದೆವು. ಆಗ ಯುವಕರು ಇದ್ದಕ್ಕಿದ್ದಂತೆ ಮನೆಗೆ ನುಗ್ಗಿ ಬಾಲಕಿಯ ಮೇಲೆ ಹಲ್ಲೆ ಮಾಡಲು ಪ್ರಾರಂಭಿಸಿದರು. ಅಲ್ಲೇ ಪಕ್ಕದಲ್ಲಿದ್ದ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದರು. ಘಟನೆ ನಡೆದ ವೇಳೆ ತನ್ನ ಪತಿ ರೈಸ್ ಮಿಲ್ ಕೆಲಸಕ್ಕೆ ಹೋಗಿದ್ದರು. ಹಾಗೆ ಇಬ್ಬರು ಪುತ್ರರೂ ಸಹ ಇರಲಿಲ್ಲ ಎಂದು ತಿಳಿಸಿದ್ದಾರೆ.
ಆಕೆಗೆ ಬೆಂಕಿ ಹಚ್ಚಿದ ಬಳಿಕ ಸ್ಥಳದಿಂದ ಕಿರಾತಕರು ಪರಾರಿಯಾಗಿದ್ದು, ಆಕೆಯ ಕಿರುಚಾಟವನ್ನು ಕೇಳಿದ ತಾಯಿ ಮತ್ತೊಂದು ಕೊಠಡಿಯಿಂದ ಹೊರಬಂದು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರಂತೆ.
ಇದನ್ನೂ ಓದಿ: ರಾಜ್ಯದಲ್ಲಿ ಇಂದಿನಿಂದ ಕೋವಿಡ್ ಹೊಸ ಮಾರ್ಗಸೂಚಿ ಜಾರಿ: ಯಾವುದಕ್ಕೆಲ್ಲಾ ನಿರ್ಬಂಧ?
ಘಟನೆ ಹಿನ್ನೆಲೆ ಬಾಲಕಿಯನ್ನು ಆಸ್ಪತ್ರೆಗೆ ರವಾನೆ ಮಾಡಲಾಯಿತು. ಹೆಚ್ಚಿನ ಚಿಕಿತ್ಸೆಗೆ ಅಲ್ಲಿಂದ ಬರೇಲಿ ಆಸ್ಪತ್ರೆಗೆ ಕಳುಹಿಸಲಾಗಿದ್ದು, ಆಕೆಯ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.
ಆರೋಪಿಗಳು ಇವರ ಮನೆಯ ಸಮೀಪದಲ್ಲೇ ವಾಸಿಸುತ್ತಿದ್ದು, ಆರೋಪಿಗಳಲ್ಲಿ ಒಬ್ಬರೊಂದಿಗೆ ಈಕೆ ಪ್ರೇಮ ಸಂಬಂಧ ಹೊಂದಿದ್ದರು ಎಂದು ತಿಳಿದುಬಂದಿದೆ. ಖಚಿತ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿ ಬಾಲಕಿಯ ಸುಟ್ಟ ಬಟ್ಟೆಗಳನ್ನು ವಶಪಡಿಸಿಕೊಂಡಿದ್ದಾರೆ.
ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ದೇವ್ರಾನಿಯಾ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸುನೀಲ್ ಕುಮಾರ್ ಶರ್ಮಾ, ಘಟನೆ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ. ನಾವು ತನಿಖೆ ನಡೆಸುತ್ತಿದ್ದೇವೆ. ಬಾಲಕಿ ದೇಹ 80 ರಷ್ಟು ಸುಟ್ಟಿದೆ. ಅದೇ ಸಮುದಾಯದ ಇಬ್ಬರು ಯುವಕರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಹೇಳಿದ್ದಾರೆ.