ಹೈದರಾಬಾದ್ : 19 ವರ್ಷ.. 41 ದೇಶ.. 52 ಸಾವಿರ ಕಿಲೋಮೀಟರ್ ಪ್ರಯಾಣ.. 5 ತಿಂಗಳ ಸಮಯ.. ಮೇಲಾಗಿ ಒಂಟಿ ಯುವತಿ..! ಈ ಎಲ್ಲಾ ಲೆಕ್ಕಾಚಾರ ಏನು ಅಂತೀರಾ?. ಬೆಲ್ಜಿಯಂನ ಝರಾ ರುದರ್ಫೋರ್ಡ್ ಎಂಬ 19 ವರ್ಷದ ಯುವತಿ ನಾಲ್ಕು ಖಂಡಗಳ 41 ದೇಶಗಳನ್ನು ಒಂಟಿಯಾಗಿ ಸುತ್ತಾಡಿದ್ದಾಳೆ. ನಂಬಲಸಾಧ್ಯವಾದರೂ ಇದು ಸತ್ಯ.

ನಾವು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಹೋದರೆ ಅಲ್ಲಿಯ ವಾತಾವರಣ ಒಗ್ಗದೇ ಇರಬಹುದು. ರೈಲು, ಬಸ್‌ನಲ್ಲಿ ದೂರ ಪ್ರಯಾಣ ಮಾಡಬೇಕಾದರೆ ಭಯಪಡ್ತೀವಿ. ಆದರೆ, ಬೆಲ್ಜಿಯಂನ ಈ ಯುವತಿ ಚಿಕ್ಕ ವಿಮಾನದಲ್ಲಿ ಒಬ್ಬಳೇ 41 ದೇಶಗಳನ್ನು ಏಕಾಂಗಿಯಾಗಿ ಪರ್ಯಟನೆ ಮಾಡಿದ್ದಾಳೆ.

ಝರಾ ರುದರ್ಫೋರ್ಡ್ಳ ಈ ಸಾಧನೆ ಇದೀಗ ವಿಶ್ವದಾಖಲೆ ಸೃಷ್ಟಿಸಿದೆ. ಜಗತ್ತನ್ನು ಸುತ್ತಿದ 'ಅತಿ ಕಿರಿಯ ಮಹಿಳೆ' ಎಂಬ ದಾಖಲೆಗೆ ಝರಾ ರುದರ್ಫೋರ್ಡ್ ಪಾತ್ರರಾಗಿದ್ದಾರೆ.
2021ರಲ್ಲಿ ವಿಶ್ವಪರ್ಯಟನೆ
ಝರಾ ರುದರ್ಫೋರ್ಡ್ ಚಿಕ್ಕ ವಯಸ್ಸಿನಿಂದಲೇ ಪೈಲಟ್ ಆಗಬೇಕು ಎಂದುಕೊಂಡಿದ್ದಳಂತೆ. ಇದಕ್ಕೆ ಕಾರಣ ಅವಳ ತಂದೆ-ತಾಯಿ ಕೂಡ ಪೈಲಟ್. ಝರಾ ತನ್ನ 6ನೇ ವಯಸ್ಸಿನಲ್ಲಿಯೇ ವಿಮಾನ ಪ್ರಯಾಣ ಶುರು ಮಾಡಿದ್ದಳಂತೆ. 14ನೇ ವಯಸ್ಸಿಗೇ ತಾನೇ ಸ್ವತಃ ವಿಮಾನ ಹಾರಾಟ ನಡೆಸಿದ್ದಾಳೆ. ಬಳಿಕ ಚಿಗುರೊಡೆದಿದ್ದೇ ವಿಶ್ವ ಪರ್ಯಟನೆ ಕನಸು.

ತಾನು ಏಕಾಂಗಿಯಾಗಿ ವಿಶ್ವವನ್ನು ಸುತ್ತಬೇಕು ಎಂದುಕೊಂಡ ಝರಾ 18 ಆಗಸ್ಟ್ 2021ರಲ್ಲಿ ಚಿಕ್ಕ ವಿಮಾನದಲ್ಲಿ ವಿಶ್ವಪರ್ಯಟನೆ ಶುರು ಮಾಡಿದ್ದಾಳೆ. ಇದಕ್ಕೆ ಮೂರು ತಿಂಗಳ ಯೋಜನೆ ರೂಪಿಸಿದ್ದ ಝರಾ ರುದರ್ಫೋರ್ಡ್ಗೆ ಪ್ರತಿಕೂಲ ಹವಾಮಾನ, ವೀಸಾ ಸಮಸ್ಯೆಯಿಂದಾಗಿ 5 ತಿಂಗಳು ಹಿಡಿದಿದೆ. ಈ ವೇಳೆ ಝರಾ 4 ಖಂಡಗಳ 41 ದೇಶಗಳನ್ನು 155 ದಿನಗಳಲ್ಲಿ ಒಂಟಿಯಾಗಿ ಸುತ್ತಾಡಿದ್ದಾಳೆ. 52 ಸಾವಿರ ಕಿಲೋಮೀಟರ್ಗಳ ಸುದೀರ್ಘ ಪ್ರಯಾಣ ಇದಾಗಿತ್ತಂತೆ.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಸಾಹಸ ಪ್ರಯಾಣದ ವೇಳೆ ಪ್ರತಿಕೂಲ ಹವಾಮಾನ ಉಂಟಾದಾಗ ಭಯವಾಗುತ್ತಿತ್ತು. ಆದರೆ, ನನ್ನ ಕನಸು ಈಡೇರಿಸಿಕೊಳ್ಳಲು ಇದಕ್ಕೆ ಸೆಡ್ಡು ಹೊಡೆದು ಪ್ರಯಾಣ ಬೆಳೆಸಿದೆ ಎಂದು ಝರಾ ರುದರ್ಫೋರ್ಡ್ ತಿಳಿಸಿದ್ದಾಳೆ. ವಿಶ್ವ ಪರ್ಯಟನೆ ಮುಗಿಸಿ ಬಂದ ಝರಾ ರುದರ್ಫೋರ್ಡ್ಗೆ ಹೆತ್ತವರು ಸೇರಿದಂತೆ ದೇಶದ ಜನರು ಅಭೂತಪೂರ್ವ ಸ್ವಾಗತ ಕೋರಿದ್ದಾರೆ.

ಇದಕ್ಕೂ ಮೊದಲು 2017 ರಲ್ಲಿ 30 ವರ್ಷದ ಶಯಸ್ತಾ ವಾಯಿಜ್ ಎಂಬುವರು ಏಕಾಂಗಿಯಾಗಿ ವಿಶ್ವಪರ್ಯಟನೆ ಮಾಡಿದ ಮಹಿಳೆ ಎಂಬ ದಾಖಲೆ ಬರೆದಿದ್ದರು. ಇದನ್ನೀಗ ಝರಾ ಮುರಿದಿದ್ದಾಳೆ. ಆದರೆ, 18 ವರ್ಷದ ಟ್ರಾವಿಸ್ ಲುಡ್ಲೋ ಎಂಬ ಯುವಕ ವಿಶ್ವಸುತ್ತು ಹಾಕಿದ 'ಅತಿ ಕಿರಿಯ' ಎಂಬ ದಾಖಲೆ ಇದೆ.
ಇದನ್ನೂ ಓದಿ: ಇದು ಅಚ್ಚರಿ! ಆದರೂ ನಿಜ.. ಮೃತಪಟ್ಟ ಮಗುವಿಗೆ ಸ್ಮಶಾನದಲ್ಲಿ ಜೀವ ಬಂತು!!