ಸಹರಾನ್‌ಪುರ (ಉತ್ತರ ಪ್ರದೇಶ): 40 ವರ್ಷದ ಶಿಕ್ಷಕ ಹಾಗೂ 17 ವರ್ಷದ ವಿದ್ಯಾರ್ಥಿನಿಯ ಶವ ಹಗ್ಗದಿಂದ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಉತ್ತರ ಪ್ರದೇಶದ ಸಹರಾನ್‌ಪುರದ ಅರಣ್ಯದಲ್ಲಿ ನಡೆದಿದೆ.
ಮೃತರನ್ನು ಶಿಕ್ಷಕ ವೀರೇಂದ್ರ ಮತ್ತು ಒಂಬತ್ತನೇ ತರಗತಿಯ ವಿದ್ಯಾರ್ಥಿನಿಯಾದ 17 ವರ್ಷದ ಬಾಲಕಿ ಎಂದು ಗುರುತಿಸಲಾಗಿದೆ. ಸೆಪ್ಟೆಂಬರ್ 3ರಿಂದ ಶಿಕ್ಷಕ ಮತ್ತು ವಿದ್ಯಾರ್ಥಿನಿ ನಾಪತ್ತೆಯಾಗಿದ್ದರು. ಮಂಗಳವಾರ ತಡರಾತ್ರಿ ಇಲ್ಲಿನ ಅರಣ್ಯ ಪ್ರದೇಶದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಇಬ್ಬರ ಶವಗಳು ಪತ್ತೆಯಾಗಿವೆ ಪೊಲೀಸ್ ವರಿಷ್ಠಾಧಿಕಾರಿ ವಿಪಿನ್ ತಾಡಾ ತಿಳಿಸಿದ್ದಾರೆ.
ರಸೂಲ್‌ಪುರ ಗ್ರಾಮದ ನಿವಾಸಿಯಾಗಿದ್ದ ಶಿಕ್ಷಕ ವೀರೇಂದ್ರ ತಾನು ಕೆಲಸ ಮಾಡುತ್ತಿದ್ದ ಶಾಲೆಯಲ್ಲೇ ಓದುತ್ತಿದ್ದ ವಿದ್ಯಾರ್ಥಿನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಎಂದು ಹೇಳಲಾಗಿದೆ. ಬಾಲಕಿಯ ಅಪಹರಣದ ಬಗ್ಗೆ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದರು. ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದರು. ಆದರೆ, ಅವರ ನಿರಂತರವಾಗಿ ಸ್ಥಳ ಬದಲಾಯಿಸುತ್ತಿದ್ದ ಕಾರಣ ಅವರನ್ನು ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ ಎಂದು ವಿಪಿನ್ ತಾಡಾ ಹೇಳಿದ್ದಾರೆ.
ಮಂಗಳವಾರ ತಡರಾತ್ರಿ ಅರಣ್ಯ ಪ್ರದೇಶದಲ್ಲಿ ದುರ್ವಾಸನೆ ಬರುತ್ತಿದೆ ಎಂಬ ಮಾಹಿತಿ ಮೇರೆಗೆ ಪೊಲೀಸರು ಅರಣ್ಯಕ್ಕೆ ತೆರಳಿ ಪರಿಶೀಲಿಸಿದಾಗ ಮೃತದೇಹಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿವೆ. 10 ದಿನಗಳ ಹಿಂದೆಯೇ ಶಿಕ್ಷಕ ಹಾಗೂ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಜೊತೆಗೆ ಸ್ಥಳದಲ್ಲಿ ಬೈಕ್ ಕೂಡ ಪತ್ತೆಯಾಗಿದೆ. ಸದ್ಯ ಎರಡು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ವಿದ್ಯಾರ್ಥಿಗಳಿಗೆ ಅಶ್ಲೀಲ ವಿಡಿಯೋ, ಫೋಟೋ ತೋರಿಸುತ್ತಿದ್ದ ಶಿಕ್ಷಕರು: ಶಾಲೆಯಲ್ಲೇ ಹಿಡಿದು ಥಳಿಸಿದ ಪೋಷಕರು