ಫರೂಕಾಬಾದ್(ಉತ್ತರ ಪ್ರದೇಶ): ಹೆಂಡತಿ ಸಾವಿನಿಂದ ಬೇಸರಗೊಂಡ ಶಿಕ್ಷಕನೋರ್ವ ಇಬ್ಬರು ಅಮಾಯಕ ಹೆಣ್ಣು ಮಕ್ಕಳನ್ನು ಕೊಲೆಗೈದು, ತದನಂತರ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉತ್ತರ ಪ್ರದೇಶದ ಫಾರೂಕಾಬಾದ್ನಲ್ಲಿ ಗುರುವಾರ ರಾತ್ರಿ ಘಟನೆ ನಡೆದಿದೆ. ಇಂದು ಬೆಳಗ್ಗೆ ಸುನೀಲ್ ಜಾದವ್ (38) ಮೃತದೇಹ ಫ್ಯಾನ್‌ನಲ್ಲಿ ನೇತಾಡುತ್ತಿತ್ತು. ಉಳಿದಂತೆ ಹೆಣ್ಣು ಮಕ್ಕಳಾದ ಶಗುನ್ (7) ಮತ್ತು ಸೃಷ್ಟಿ (11) ಅವರ ಶವಗಳು ಹಾಸಿಗೆಯ ಮೇಲೆ ಪತ್ತೆಯಾಗಿವೆ.
ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲು ಮಾಡಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ. ಹೆಣ್ಣು ಮಕ್ಕಳ ಕತ್ತು ಹಿಸುಕಿ ಕೊಲೆ ಮಾಡಿರುವ ಸುನೀಲ್ ತದನಂತರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಮೂವರ ಮೃತದೇಹಗಳನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಇದನ್ನೂ ಓದಿ: ಮದ್ಯ ಸೇವಿಸಿ ಶಾಲೆಗೆ ಬಂದು ಪ್ಯಾಂಟ್ ಕಳಚಿ ನೆಲದ ಮೇಲೆ ಮಲಗಿದ ಶಿಕ್ಷಕ
ಸುನೀಲ್ ಆತ್ಮಹತ್ಯೆ ಮಾಡಿಕೊಂಡಿರುವ ಕೊಠಡಿಯಲ್ಲಿ ಸೊಸೈಡ್ ನೋಟ್ ಸಿಕ್ಕಿದ್ದು, ಅದರಲ್ಲಿ ಪತ್ನಿ ಇಲ್ಲದೇ ಬದುಕಲು ಸಾಧ್ಯವಿಲ್ಲ ಎಂದು ಬರೆಯಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಕುಟುಂಬದ ಸದಸ್ಯರು ಹಾಗೂ ಸುತ್ತಮುತ್ತಲಿನ ಜನರ ವಿಚಾರಣೆ ನಡೆಸುತ್ತಿದ್ದಾರೆ.
ಸುನೀಲ್ ಅವರ ಪತ್ನಿ ಎರಡು ತಿಂಗಳ ಹಿಂದೆ ಸಾವನ್ನಪ್ಪಿದ್ದಾಗಿ ತಿಳಿದು ಬಂದಿದೆ. ಆತ್ಮಹತ್ಯೆಗೆ ಶರಣಾಗುವ ಹಿಂದಿನ ದಿನ ಮಗಳು ಶಗುನ್ ಅವರ ಜನ್ಮದಿನ ಆಚರಣೆ ಮಾಡಲಾಗಿತ್ತು. ಮಗಳ ಹುಟ್ಟುಹಬ್ಬ ಆಚರಿಸಿ, ಹೆಣ್ಣು ಮಕ್ಕಳನ್ನೂ ಮಾರುಕಟ್ಟೆಗೆ ಕರೆದುಕೊಂಡು ಹೋಗಿದ್ದರು. ಸುನೀಲ್ ಅರ್ರಾಹಪಹರಪುರ ಗ್ರಾಮದಲ್ಲಿರುವ ಬಾಬು ಸಿಂಗ್ ಇಂಟರ್ ಕಾಲೇಜಿನಲ್ಲಿ ಶಿಕ್ಷಕರು.