ಜೈಪುರ್/ಜಮ್ಮು: ಕಳೆದ ಭಾನುವಾರ ಐಸಿಸಿ ಟಿ-20 ವಿಶ್ವಕಪ್ನಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಗೆಲುವು ದಾಖಲು ಮಾಡಿದ್ದು, ಗೆಲುವಿಗೆ ಸಂಭ್ರಮ ವ್ಯಕ್ತಪಡಿಸಿದ್ದಕ್ಕಾಗಿ ದೇಶದ ವಿವಿಧ ರಾಜ್ಯಗಳಲ್ಲಿ ಕೆಲವರ ಬಂಧನ ಮಾಡಲಾಗಿದೆ.
ಕಾಶ್ಮೀರದ ಮೂವರು ಎಂಜಿನಿಯರಿಂಗ್ ವಿದ್ಯಾರ್ಥಿಗಳನ್ನ ಉತ್ತರ ಪ್ರದೇಶದ ಆಗ್ರಾದಲ್ಲಿ ಬಂಧನ ಮಾಡಲಾಗಿದ್ದು, ರಾಜಸ್ಥಾನದ ಉದಯಪುರದ ಖಾಸಗಿ ಶಾಲೆಯ ಶಿಕ್ಷಕಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಪಂದ್ಯದ ನಂತರ ಪಾಕ್ ಪರ ಘೋಷಣೆ ಕೂಗಿದ್ದಕ್ಕಾಗಿ ಜಮ್ಮು-ಕಾಶ್ಮೀರದಲ್ಲಿ ಕೆಲವರ ಬಂಧನ ಮಾಡಲಾಗಿದ್ದು, ಒಟ್ಟು ಬಂಧಿತರ ಸಂಖ್ಯೆ 10ಕ್ಕೇರಿಕೆಯಾಗಿದೆ.
ಭಾರತ ವಿರುದ್ಧದ ಪಂದ್ಯದಲ್ಲಿ ಪಾಕ್ ಗೆಲುವು ದಾಖಲು ಮಾಡುತ್ತಿದ್ದಂತೆ ದೇಶದ ಕೆಲವೊಂದು ಪ್ರದೇಶಗಳಲ್ಲಿ ಅದರ ಸಂಭ್ರಮಾಚರಣೆ ಮಾಡಿ, ಪಟಾಕಿ ಸಿಡಿಸಿರುವ ಪ್ರಕರಣ ಬೆಳಕಿಗೆ ಬಂದಿತ್ತು. ಹೀಗಾಗಿ ಉತ್ತರ ಪ್ರದೇಶದ ಐದು ಜಿಲ್ಲೆಗಳಿಂದ ಒಟ್ಟು ಏಳು ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, ನಾಲ್ವರ ಬಂಧನ ಮಾಡಲಾಗಿದೆ.
ಇದನ್ನೂ ಓದಿರಿ: ಗುಡ್ನ್ಯೂಸ್: ನೆಟ್ನಲ್ಲಿ ಬೌಲಿಂಗ್ ಅಭ್ಯಾಸ ಆರಂಭಿಸಿದ ಹಾರ್ದಿಕ್
ಪಾಕ್ ಪ್ಲೇಯರ್ಸ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಸ್ಟೇಟಸ್ ಹಾಕಿದ್ದ ಜಮ್ಮು-ಕಾಶ್ಮೀರದ ಮೂವರು ಎಂಜಿನಿಯರಿಂಗ್ ವಿದ್ಯಾರ್ಥಿಗಳನ್ನ ಈಗಾಗಲೇ ಡಿಸ್ಮಿಸ್ ಮಾಡಲಾಗಿದ್ದು, ಇವರ ವಿರುದ್ಧ ದೂರು ದಾಖಲಾಗಿದೆ. ರಾಜಸ್ಥಾನದ ಉದಯಪುರ ನೀರಜಾ ಮೋದಿ ಶಾಲೆಯ ಶಿಕ್ಷಕಿ ನಫೀಸಾ ಅಟ್ಟಾರಿ ಕೂಡ ತಮ್ಮ ವಾಟ್ಸಾಪ್ನಲ್ಲಿ ಪಾಕ್ ಕ್ರಿಕೆಟಿಗರ ಚಿತ್ರ ಹಾಕಿ ಜೀತ್ ಗಯಿ ಎಂಬ ಶೀರ್ಷಿಕೆ ಬರೆದುಕೊಂಡಿದ್ದರು. ಇದು ವೈರಲ್ ಆಗ್ತಿದ್ದಂತೆ ಅವರ ವಿರುದ್ಧ ಐಪಿಸಿ ಸೆಕ್ಷನ್ 153(ಬಿ) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಈಗಾಗಲೇ ಅವರನ್ನ ವಜಾಗೊಳಿಸಲಾಗಿದೆ.
ಇದರ ಬೆನ್ನಲ್ಲೇ ಪೋಸ್ಟ್ ಹಾಕಿರುವ ಬಗ್ಗೆ ಕ್ಷಮೆಯಾಚನೆ ಮಾಡಿರುವ ವಿಡಿಯೋ ಹರಿಬಿಟ್ಟಿದ್ದು, ಯಾವ ಭಾವನೆಗೂ ಧಕ್ಕೆ ತರುವ ಉದ್ದೇಶ ನನಗಿಲ್ಲ. ನೀವು ಪಾಕಿಸ್ತಾನವನ್ನ ಬೆಂಬಲಿಸುತ್ತೀರಾ? ಎಂದು ನನಗೆ ಯಾರೋ ಸಂದೇಶ ಕಳುಹಿಸಿದ್ದರು. ಅದು ತಮಾಷೆಯಾಗಿದ್ದರಿಂದ ನಾನು ಹೌದು ಎಂದು ಉತ್ತರಿಸಿದ್ದೆ. ಈ ಮಾತ್ರಕ್ಕೆ ನಾನು ಪಾಕಿಸ್ತಾನ ಬೆಂಬಲಿಸುತ್ತೇನೆಂದು ಅರ್ಥವಲ್ಲ. ನಾನು ಭಾರತೀಯ. ಭಾರತವನ್ನ ಪ್ರೀತಿಸುತ್ತೇನೆ ಎಂದಿದ್ದಾರೆ. ನಾನು ತಪ್ಪು ಮಾಡಿದ್ದೇನೆಂದು ಅರಿತುಕೊಂಡ ತಕ್ಷಣವೇ ಸ್ಟೇಟಸ್ ಡಿಲೀಟ್ ಮಾಡಿದ್ದೇನೆ. ಬೇರೆಯವರ ಭಾವನೆಗಳಿಗೆ ಧಕ್ಕೆ ಮಾಡಿದ್ದರೆ ಕ್ಷಮಿಸಿ ಎಂದು ವಿಡಿಯೋ ಸಂದೇಶ ರವಾನಿಸಿದ್ದಾರೆ.