ಕೋಲ್ಕತ್ತಾ(ಪಶ್ಚಿಮ ಬಂಗಾಳ): 2020ಕ್ಕೆ ಹೋಲಿಸಿದ್ರೆ, ಈ ವರ್ಷ ಭಾರತದಿಂದ ವಿದೇಶಗಳಿಗೆ ರಫ್ತಾಗುತ್ತಿದ್ದ ಚಹಾ ಶೇಕಡಾ 14.4 ರಷ್ಟು ಇಳಿಕೆಯಾಗಿದೆ. 2021ರ ಜನವರಿಯಿಂದ ಜುಲೈವರೆಗೆ 100.78 ಮಿಲಿಯನ್ ಕಿಲೋ ಗ್ರಾಂ ಚಹಾ ವಿದೇಶಗಳಿಗೆ ರಫ್ತಾಗಿದೆ. 2020 ರ ಇದೇ ಅವಧಿಯಲ್ಲಿ 117.56 ಮಿಲಿಯನ್ ಕಿಲೋಗ್ರಾಂಗಳಷ್ಟು ಚಹಾ ರಫ್ತಾಗಿತ್ತು ಎಂದು ಟೀ ಬೋರ್ಡ್ ದತ್ತಾಂಶ ತಿಳಿಸಿದೆ.
ಸಿಐಎಸ್ ಬ್ಲಾಕ್ 24.14 ಮಿಲಿಯನ್ ಕಿಲೋಗ್ರಾಂಗಳಷ್ಟು ಚಹಾ ಆಮದು ಮಾಡಿಕೊಳ್ಳುತ್ತಿದೆ. ನಿರ್ಬಂಧಗಳಿಂದಾಗಿ ಇರಾನ್‌ಗೆ ಸಾಗಿಸುತ್ತಿದ್ದ ಚಹಾ ಗಣನೀಯವಾಗಿ ಕಡಿಮೆಯಾಗಿದ್ದರೂ, ಪರ್ಷಿಯನ್ ದೇಶವು ಈ ವರ್ಷದ ಮೊದಲ ಏಳು ತಿಂಗಳಲ್ಲಿ 12.63 ಮಿಲಿಯನ್ ಕಿಲೋಗ್ರಾಂ ಚಹಾ ಆಮದು ಮಾಡಿಕೊಂಡಿದೆ. 2020 ರಲ್ಲಿ ಈ ದೇಶವು 21 ಮಿಲಿಯನ್ ಕಿಲೋಗ್ರಾಂಗಳಷ್ಟು ಆಮದು ಮಾಡಿಕೊಳ್ಳುತ್ತಿತ್ತು.
2020 ರ ಮೊದಲ ಏಳು ತಿಂಗಳಲ್ಲಿ ಚೀನಾಕ್ಕೆ 5.74 ಮಿಲಿಯನ್ ಕಿಲೋಗ್ರಾಮ್‌ಗಳಷ್ಟು ಚಹಾ ರಫ್ತು ಮಾಡಲಾಗುತ್ತಿತ್ತು. ಈಗಿನ ಸ್ಥಿತಿಯಲ್ಲಿ 3.29 ಮಿಲಿಯನ್ ಕಿಲೋಗ್ರಾಂಗಳಷ್ಟು ಕಡಿಮೆಯಾಗಿದೆ. ಅಮೆರಿಕ ಮತ್ತು ಯುಎಇಗಳಿಗೆ ಮಾತ್ರ ಚಹಾ ಆಮದು ಹೆಚ್ಚಾಗಿದೆ ಎಂದು ಭಾರತದ ಟೀ ಬೋರ್ಡ್ ಹೇಳಿದೆ.
ಭಾರತದ ಟೀ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಅರಿಜಿತ್ ರಹಾ ಈ ಬಗ್ಗೆ ಮಾತನಾಡಿದ್ದು, ಒಂದು ಕಾಲದಲ್ಲಿ ಭಾರತೀಯ ಚಹಾದ ದೊಡ್ಡ ಖರೀದಿದಾರನಾಗಿದ್ದ ಇರಾನ್‌ಗೆ ರಫ್ತು ಕಡಿಮೆಯಾಗಿದೆ. ಹಾಗಾಗಿ ಚಹಾ ರಫ್ತಿನ ಮೇಲೆ ಭಾರಿ ಪರಿಣಾಮ ಬೀರಿದೆ ಎಂದಿದ್ದಾರೆ.
ಇದನ್ನೂ ಓದಿ: ಬಂಬಲ್, ಟಿಂಡರ್ ಆ್ಯಪ್ ಮೂಲಕ ಐಫೋನ್ ಹ್ಯಾಕಿಂಗ್‌ಗೆ ಕ್ರಿಪ್ಟೋ ಹ್ಯಾಕರ್ಸ್ ಯತ್ನ!
ಕೋವಿಡ್ ಸಮಯದಲ್ಲಿ ರಫ್ತು ಸಾಗಾಟಕ್ಕೆ ಹಡಗು ಇಲ್ಲದಿರುವುದು ಚಹಾ ರಫ್ತು ಕುಸಿತಕ್ಕೆ ಪ್ರಮುಖ ಕಾರಣವಾಗಿದೆ.