ವಿಜಯವಾಡ, ಆಂಧ್ರಪ್ರದೇಶ: ಸಿಎಂ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್ಆರ್ಸಿಪಿ ಮತ್ತು ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಮಧ್ಯೆ ಆಂಧ್ರಪ್ರದೇಶದಲ್ಲಿ ಅಸಮಾಧಾನ ಹೊಗೆಯಾಡುತ್ತಿದೆ. ಬುಧವಾರ ಟಿಡಿಪಿ ನಾಯಕನನ್ನು ಪೊಲೀಸರು ಬಂಧಿಸಿದ್ದು, ಆಂಧ್ರ ರಾಜಕಾರಣ ಮತ್ತಷ್ಟು ಕೆರಳಿದೆ.
ಬುಧವಾರ ಮಧ್ಯಾಹ್ನದಿಂದ ಟಿಡಿಪಿ ನಾಯಕ ಕೊಮ್ಮರೆಡ್ಡಿ ಪಟ್ಟಾಭಿ ನಿವಾಸದ ಮುಂದೆ ಕಾದು ಕುಳಿತ ಪೊಲೀಸರು, ಸುಮಾರು 9 ಗಂಟೆ ವೇಳೆಗೆ ಮನೆಯ ಬೀಗ ಒಡೆದು, ಕೊಮ್ಮರೆಡ್ಡಿ ಪಟ್ಟಾಭಿ ಅವರನ್ನು ಬಂಧಿಸಿದ್ದಾರೆ.
ಸಿಎಂ ಜಗನ್ ಮೋಹನ್ ರೆಡ್ಡಿ ಅವರನ್ನು ಅವಾಚ್ಯವಾಗಿ ನಿಂದಿಸಿದ ಆರೋಪದಲ್ಲಿ ಅವರನ್ನು ಬಂಧಿಸಲಾಗಿದೆ. ಮನೆಯ ಕಾಲಿಂಗ್ ಬೆಲ್ ಒತ್ತಿದರೂ, ಬಾಗಿಲು ತೆರೆಯದ ಕಾರಣಕ್ಕೆ ಬೀಗವನ್ನ ಒಡೆದು ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
'ನನ್ನ ಪತಿಗೆ ಏನಾದರೂ ಆದರೆ..'
ಬಂಧನದ ನಂತರ ಪ್ರತಿಕ್ರಿಯೆ ನೀಡಿದ ಪಟ್ಟಾಭಿ ಅವರ ಪತ್ನಿ ನನ್ನ ಪತಿಗೆ ಏನಾದರೂ ಆದರೆ ಸರ್ಕಾರವೇ ನೇರ ಹೊಣೆ. ಪೊಲೀಸರು ಬೀಗ ಒಡೆದು ನನ್ನ ಪತಿಯನ್ನು ಬಂಧಿಸಿದ್ದಾರೆ. ಇದು ಸರಿಯಲ್ಲ ಎಫ್ಐಆರ್ ಕೇಳಿದರೆ, ನಂತರ ಕೊಡುತ್ತೇವೆ ಎಂದು ಹೇಳಿದ್ದಾರೆ. ನನ್ನ ಪತಿ ಆರೋಗ್ಯವಾಗಿದ್ದಾರೆ. ಆರೋಗ್ಯವಾಗಿಯೇ ಅವರು ವಾಪಸ್ ಬರಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಸಿಂಘು ಗಡಿಯಲ್ಲಿ ಹತ್ಯೆ ಪ್ರಕರಣ: ಕೊಲೆಯಾಗುವ ಮುನ್ನ ಲಖ್ಬೀರ್ ಮಾತಾನಾಡಿರುವ ವಿಡಿಯೋ ವೈರಲ್!