ವಿಶಾಖಪಟ್ಟಣಂ (ಆಂಧ್ರ ಪ್ರದೇಶ): ಟಿಡಿಪಿ ನಾಯಕ, ಮಾಜಿ ಸಿಎಂ ಚಂದ್ರಬಾಬು ನಾಯ್ಡು ಬಂಧನ ಖಂಡಿಸಿ ತೆಲುಗು ದೇಶಂ ಪಕ್ಷ ಇಂದು ಆಂಧ್ರಪ್ರದೇಶ ಬಂದ್‌ಗೆ ಕರೆ ನೀಡಿದೆ. 40 ವರ್ಷಗಳ ಸುದೀರ್ಘ ರಾಜಕೀಯ ಇತಿಹಾಸ ಹೊಂದಿರುವ ನಾಯ್ಡು ಬಂಧನ ಹಾಗೂ ಸಿಎಂ ಜಗನ್ ಅವರ ಬಣ ರಾಜಕೀಯ ವಿರೋಧಿಸಿ ಸೋಮವಾರ ಬಂದ್‌ಗೆ ಕರೆ ಕೊಡಲಾಗಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಅಚ್ಚೆನ್ನಾಯಡು ತಿಳಿಸಿದ್ದಾರೆ. ಪ್ರಜಾಪ್ರಭುತ್ವದ ರಕ್ಷಣೆಗಾಗಿ ನಡೆಯುವ ಬಂದ್‌ನಲ್ಲಿ ಜನತೆ, ಸಾರ್ವಜನಿಕ ಸಂಘಗಳು ಮತ್ತು ಎಲ್ಲಾ ಜನನಾಯಕರು ಸ್ವಯಂಪ್ರೇರಿತರಾಗಿ ಭಾಗವಹಿಸಬೇಕೆಂದು ಅವರು ಮನವಿ ಮಾಡಿದ್ದಾರೆ.
ಜನಸೇನಾ ಪಕ್ಷ ಬೆಂಬಲ: ಆಂಧ್ರಪ್ರದೇಶ ಬಂದ್‌ಗೆ ಜನಸೇನಾ ಪಕ್ಷ ಬೆಂಬಲ ಘೋಷಿಸಿದೆ. ಚಂದ್ರಬಾಬು ನಾಯ್ಡು ಅವರ ಬಂಧನವನ್ನು ಈಗಾಗಲೇ ಪಕ್ಷ ಖಂಡಿಸಿದೆ. ಆಡಳಿತ ಪಕ್ಷವು ರಾಜ್ಯದಲ್ಲಿನ ವ್ಯವಸ್ಥೆಗಳನ್ನು ದುರ್ಬಲಗೊಳಿಸುತ್ತಿದೆ, ಸಾರ್ವಜನಿಕ ವಿರೋಧಿ ಕ್ರಮಗಳನ್ನು ಅನುಸರಿಸುತ್ತಿದೆ ಎಂದು ಆರೋಪಿಸಿದೆ. ಜನಪರವಾಗಿ ಮಾತನಾಡುವ ಪ್ರತಿಪಕ್ಷಗಳ ವಿರುದ್ಧ ಪ್ರಕರಣಗಳು ಮತ್ತು ಬಂಧನಗಳು ನಡೆಯುತ್ತಿದ್ದು, ವೈಎಸ್‌ಪಿ ಸರ್ಕಾರ ಕಿರುಕುಳ ನೀಡುತ್ತಿದೆ ಎಂದು ಜನಸೇನಾ ಆಕ್ರೋಶ ವ್ಯಕ್ತಪಡಿಸಿದೆ. ಬಂದ್‌ನಲ್ಲಿ ಪಕ್ಷದ ಕಾರ್ಯಕರ್ತರು ಶಾಂತಿಯುತವಾಗಿ ಪಾಲ್ಗೊಳ್ಳುವಂತೆ ಜನಸೇನೆ ಮನವಿ ಮಾಡಿದೆ.
ಪವನ್ ಕಲ್ಯಾಣ್ ಹೇಳಿದ್ದೇನು?: ಚಂದ್ರಬಾಬು ಅವರಿಗೆ ನಮ್ಮ ಸಂಪೂರ್ಣ ಬೆಂಬಲ ಸದಾ ಇರುತ್ತದೆ ಎಂದು ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಹೇಳಿದ್ದಾರೆ. ವಿಧಾನಸಭೆಯ ನಿರ್ಣಯ ಉಲ್ಲಂಘಿಸಿ ಚಂದ್ರಬಾಬುರನ್ನು ಜೈಲಿಗೆ ಕಳುಹಿಸಲಾಗಿದೆ ಎಂದು ಆರೋಪಿಸಿದ್ದಾರೆ. ಅಧಿಕಾರಕ್ಕೆ ಬಂದ ನಂತರ ಮರಳು ಕಳ್ಳರನ್ನು ಬಿಡುವ ಉದ್ದೇಶವಿಲ್ಲ. ಕೊನೆಯುಸಿರು ಇರುವವರೆಗೂ ಜಗನ್ ವಿರುದ್ಧ ಹೋರಾಡುತ್ತೇನೆ. ಯುದ್ಧಕ್ಕೂ ಸಿದ್ಧ. ಜಗನ್ ನೀವು ಜೈಲಿಗೆ ಹೋದರೆ ಎಲ್ಲರೂ ಜೈಲಿಗೆ ಹೋಗಬೇಕಾ ಎಂದು ಪವನ್ ಕಲ್ಯಾಣ್ ಪ್ರಶ್ನಿಸಿದ್ದಾರೆ.
ಸಿಪಿಐ ಬೆಂಬಲ: ತೆಲುಗು ದೇಶಂ ಪಕ್ಷ ಕೈಗೊಂಡಿರುವ ಬಂದ್‌ಗೆ ಸಿಪಿಐ ರಾಜ್ಯ ಕಾರ್ಯದರ್ಶಿ ಕೆ.ರಾಮಕೃಷ್ಣ ಬೆಂಬಲ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ವಿಜಯವಾಡದಲ್ಲಿ ನಡೆಯಬೇಕಿದ್ದ ಸಿಪಿಐ ದುಂಡು ಮೇಜಿನ ಸಭೆಯನ್ನು ಸೆ.12ಕ್ಕೆ ಮುಂದೂಡಲಾಗಿದೆ. ಮತ್ತೊಂದೆಡೆ, ರಾಜ್ಯಾದ್ಯಂತ ಎಲ್ಲಾ ತಾಲೂಕುಗಳಲ್ಲಿ ಸೆಕ್ಷನ್ 144 (ನಿಷೇದಾಜ್ಞೆ) ಜಾರಿಗೊಳಿಸಲು ಡಿಜಿಪಿ ಎಲ್ಲಾ ಜಿಲ್ಲೆಗಳ ಎಸ್ಪಿಗಳಿಗೆ ಆದೇಶಿಸಿದ್ದಾರೆ. ಅನುಮತಿ ಇಲ್ಲದೆ ಸಭೆ, ಪ್ರಚಾರ ನಡೆಸಬಾರದು ಎಂದು ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ: Chandrababu Naidu: ಮಾಜಿ ಸಿಎಂ ಚಂದ್ರಬಾಬು ನಾಯ್ಡುಗೆ 14 ದಿನ ನ್ಯಾಯಾಂಗ ಬಂಧನ, ಆಂಧ್ರದಲ್ಲಿ ನಿಷೇಧಾಜ್ಞೆ ಜಾರಿ