ನವದೆಹಲಿ: ಭಾರತ ಹಾಗೂ ವಿದೇಶದಲ್ಲಿರುವ ಭಯೋತ್ಪಾದಕರು, ದರೋಡೆಕೋರರು, ಡ್ರಗ್ ಮಾಫಿಯಾ ನಡುವಿರುವ ಸಂಪರ್ಕಜಾಲ ಮತ್ತು ಗ್ಯಾಂಗ್ಸ್ಟಾರ್ಗಳ ಜೊತೆ ಉಗ್ರರ ನಂಟು ಮಟ್ಟಹಾಕಲು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮಂಗಳವಾರದಂದು ಪಂಜಾಬ್, ಹರಿಯಾಣ, ರಾಜಸ್ಥಾನ ಮತ್ತು ದೆಹಲಿ-ಎನ್‌ಸಿಆರ್ ಪ್ರದೇಶ ಸೇರಿದಂತೆ ವಿವಿಧ ಸ್ಥಳಗಳಲ್ಲಿ ದಾಳಿ ನಡೆಸಿದೆ.
ಅಕ್ಟೋಬರ್ 14 ರಂದು ಡ್ರೋನ್ ಡೆಲಿವರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆ ಸೇರಿದಂತೆ ಹಲವು ಸ್ಥಳಗಳಲ್ಲಿ ಈ ಹಿಂದೆ ಎನ್‌ಐಎ ಶೋಧ ಕೈಗೊಂಡಿತು. ಎನ್ಐಎ ಮಾಹಿತಿ ಪ್ರಕಾರ, ಇಲ್ಲಿಯವರೆಗೆ ಯಾರನ್ನು ಬಂಧಿಸಿಲ್ಲ. ಹಿಂದಿನ ಒಂಭತ್ತು ತಿಂಗಳಲ್ಲಿ, ನೆರೆಯ ಪಾಕಿಸ್ತಾನದಿಂದ 191 ಡ್ರೋನ್‌ಗಳು ಭಾರತದ ಭೂಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶ ಮಾಡಿದ್ದು, ಇದನ್ನೆಲ್ಲ ಭದ್ರತಾ ಪಡೆಗಳು ಗಮನಿಸುತ್ತಿವೆ. ಇದು ಭಾರತ ಆಂತರಿಕ ಭದ್ರತೆಯ ವಿಷಯಕ್ಕೆ ಧಕ್ಕೆ ತರುವ ವಿಚಾರವನ್ನು ಹುಟ್ಟುಹಾಕಿದೆ ಎನ್ನುತ್ತಿದೆ.
ಪಾಕಿಸ್ತಾನದಿಂದ ಇಂಥ ಅಕ್ರಮ ಕೃತ್ಯಗಳನ್ನು ನಿರ್ವಹಿಸಲು ಭಾರತ-ಪಾಕಿಸ್ತಾನ ಗಡಿಯಲ್ಲಿ ನಿಯೋಜಿಸಲ್ಪಟ್ಟ ಭದ್ರತಾ ಪಡೆಗಳ ಮಾಹಿತಿಯನ್ನು ಕೇಂದ್ರ ಸರ್ಕಾರ ಇತ್ತೀಚೆಗೆ ಹಂಚಿಕೊಂಡಿದೆ. ಸೋಮವಾರ ಬೆಳಗ್ಗೆ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನದ ಕಡೆಯಿಂದ ಪಂಜಾಬ್‌ನ ಅಮೃತಸರ ಸೆಕ್ಟರ್‌ನಲ್ಲಿ ಅಕ್ರಮವಾಗಿ ಭಾರತವನ್ನು ಪ್ರವೇಶಿಸಿದ ಡ್ರೋನ್ ಗಡಿ ಭದ್ರತಾ ಪಡೆ ಹೊಡೆದುರುಳಿಸಿದೆ ಎಂದು ಎನ್ಐಎ ತಿಳಿಸಿದೆ. ಇನ್ನು ಪಿಎಫ್‌ಐ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರದ ಪಾಟ್ನಾದ ಫುಲ್ವಾರಿ ಷರೀಫ್‌ನ ಎರಡು ಸ್ಥಳಗಳಲ್ಲಿ ಎನ್‌ಐಎ ದಾಳಿ ನಡೆಸುತ್ತಿದೆ.
ಓದಿ: ಉಗ್ರ ಸಂಘಟನೆ ಜೊತೆ ಶಿಕ್ಷಣ ಸಂಸ್ಥೆ ನಂಟು ಶಂಕೆ.. ಕಾಶ್ಮೀರದಲ್ಲಿ ಎನ್ಐಎ ದಾಳಿ