ನವದೆಹಲಿ: ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿಗಳ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಪರಸ್ಪರ ಚರ್ಚಿಸುವ ಸಾಧ್ಯತೆಯಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
ಶನಿವಾರ ಸಂಜೆ ವೇಳೆಗೆ ಇಬ್ಬರೂ ಮಾತುಕತೆ ನಡೆಸಲಿದ್ದು, ಜಮ್ಮು ಕಾಶ್ಮೀರದ ಭದ್ರತೆ ಮತ್ತು ನಾಗರಿಕರ ಹತ್ಯೆ ಕುರಿತಂತೆ ಹಾಗೂ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಅಮಿತ್ ಶಾ ಅವರು ಮನೋಜ್ ಸಿನ್ಹಾ ಅವರೊಂದಿಗೆ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.
ಈಗ ಸದ್ಯಕ್ಕೆ ಅಮಿತ್ ಶಾ ಗುಜರಾತ್ನಲ್ಲಿದ್ದು, ಅಲ್ಲಿ ಕೆಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ದೆಹಲಿಗೆ ಆಗಮಿಸಲಿದ್ದಾರೆ. ಇದಾದ ನಂತರ ಮನೋಜ್ ಸಿನ್ಹಾ ಅವರು ದೆಹಲಿಗೆ ಆಗಮಿಸಲಿದ್ದು, ಅವರೊಂದಿಗೆ ಕಾಶ್ಮೀರದ ವಿಚಾರ ಚರ್ಚೆಯಾಗಲಿದೆ.
ಇದಕ್ಕೂ ಮೊದಲು ಕಾಶ್ಮೀರದಲ್ಲಿ ನಡೆದ ಹತ್ಯೆಗಳ ಕುರಿತು ಚರ್ಚಿಸಲು ಅಮಿತ್ ಶಾ ಸಭೆಯೊಂದನ್ನು ಕರೆದಿದ್ದು, ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು, ಇದಾದ ಎರಡು ದಿನಗಳ ನಂತರ ಮನೋಜ್ ಸಿನ್ಹಾ ಅವರೊಂದಿಗೆ ಸಭೆ ನಡೆಸಲಿದ್ದಾರೆ.
ಇದಕ್ಕೂ ಮೊದಲು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ, ಗುಪ್ತಚರ ವಿಭಾಗದ ನಿರ್ದೇಶಕ ಅರವಿಂದ ಕುಮಾರ್, ಗಡಿ ಭದ್ರತಾ ಮಹಾನಿರ್ದೇಶಕ ಪಂಕಜ್ ಸಿಂಗ್, ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಮುಖ್ಯಸ್ಥ ಕುಲದೀಪ್ ಸಿಂಗ್ ಮತ್ತು ಇತರ ಗೃಹ ಸಚಿವಾಲಯದ ಅಧಿಕಾರಿಗಳೊಂದಿಗೆ ಅಮಿತ್ ಶಾ ಚರ್ಚೆ ನಡೆಸಿದ್ದಾರೆ.
ಇದನ್ನೂ ಓದಿ: ಚಲಿಸುತ್ತಿದ್ದ ಪುಷ್ಪಕ್ ಎಕ್ಸ್ಪ್ರೆಸ್ ರೈಲಿನಲ್ಲಿ ದರೋಡೆ.. ಯುವತಿ ಮೇಲೆ ಗ್ಯಾಂಗ್ರೇಪ್ ಆರೋಪ