ನವದೆಹಲಿ: ರಸ್ತೆ ಸುರಕ್ಷತೆಯು ಸರಕಾರದ ಮೊದಲ ಆದ್ಯತೆಯಾಗಿದ್ದು, 2030ರ ವೇಳೆಗೆ ರಸ್ತೆ ಅಪಘಾತಗಳನ್ನು ಶೇ 50ರಷ್ಟು ಕಡಿಮೆ ಮಾಡುವ ಗುರಿ ಹೊಂದಲಾಗಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮಂಗಳವಾರ ಹೇಳಿದ್ದಾರೆ.
'ರಸ್ತೆ ಸುರಕ್ಷತೆ - ಭಾರತೀಯ Roads@2030 - ಸುರಕ್ಷತೆಯ ಗಡಿ ಹೆಚ್ಚಿಸುವುದು' (Road Safety - Indian Roads@2030 - Raising the Bar of Safety) ಕುರಿತ ಸಿಐಐ ರಾಷ್ಟ್ರೀಯ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಗಡ್ಕರಿ, ರಸ್ತೆ ಅಪಘಾತಗಳಲ್ಲಿ ಶೇಕಡಾ 12 ರಷ್ಟು ಹೆಚ್ಚಳವಾಗಿದೆ ಮತ್ತು ಅಂತಹ ಅಪಘಾತಗಳಲ್ಲಿ ಸಾವುಗಳ ಸಂಖ್ಯೆ ಶೇಕಡಾ 10 ರಷ್ಟು ಹೆಚ್ಚಳವಾಗಿದೆ ಎಂದು 2022 ರ ಇತ್ತೀಚಿನ ವರದಿ ಹೇಳಿದೆ. ಇದರ ಪರಿಣಾಮವಾಗಿ ಜಿಡಿಪಿಗೆ ಶೇಕಡಾ 3.14 ರಷ್ಟು ಸಾಮಾಜಿಕ - ಆರ್ಥಿಕ ನಷ್ಟವಾಗಿದೆ ಎಂದು ಹೇಳಿದರು.
ಈ ಅಪಘಾತಗಳಲ್ಲಿ ಮೃತಪಟ್ಟವರ ಪೈಕಿ ಶೇಕಡಾ 60 ರಷ್ಟು ಜನ 18 ರಿಂದ 35 ವರ್ಷ ವಯಸ್ಸಿನವರಾಗಿದ್ದಾರೆ. ಅಪಘಾತದಿಂದಾಗುವ ಸಾವಿನಿಂದ ಕುಟುಂಬವೊಂದು ತನ್ನ ಮುಖ್ಯಸ್ಥನನ್ನು ಕಳೆದುಕೊಳ್ಳುತ್ತದೆ. ಉದ್ಯೋಗದಾತರಿಗೆ ವೃತ್ತಿಪರ ನಷ್ಟವಾಗುತ್ತದೆ ಮತ್ತು ಆರ್ಥಿಕತೆಗೆ ಒಟ್ಟಾರೆ ನಷ್ಟ ಸಂಭವಿಸುತ್ತದೆ ಎಂದು ಅವರು ಹೇಳಿದರು. ತಮ್ಮ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿಯ ಭಾಗವಾಗಿ ಚಾಲಕರಿಗೆ ನಿಯಮಿತ ಕಣ್ಣಿನ ತಪಾಸಣೆಗಾಗಿ ಉಚಿತ ಶಿಬಿರಗಳನ್ನು ಆಯೋಜಿಸುವಂತೆ ಕೇಂದ್ರ ಸಚಿವರು ಭಾರತದ ಉದ್ಯಮ ವಲಯಕ್ಕೆ ಸೂಚಿಸಿದರು.
ಶಾಲೆ ಕಾಲೇಜುಗಳಲ್ಲಿ ಶಿಕ್ಷಣ ಮತ್ತು ಜಾಗೃತಿ ಮೂಡಿಸುವುದು, ಎನ್ಜಿಒಗಳು, ನವೋದ್ಯಮಗಳು, ತಂತ್ರಜ್ಞಾನ ಪೂರೈಕೆದಾರರು, ಐಐಟಿಗಳು, ಸಂಚಾರ ಮತ್ತು ಹೆದ್ದಾರಿ ಪ್ರಾಧಿಕಾರಗಳ ಸಹಯೋಗದಲ್ಲಿ ರಸ್ತೆ ಸುರಕ್ಷತಾ ಅಭ್ಯಾಸಗಳ ಬಗ್ಗೆ ಜಾಗೃತಿ ಮೂಡಿಸುವುದೇ ಅಪಘಾತಗಳನ್ನು ತಡೆಗಟ್ಟುವ ಪ್ರಮುಖ ಮಾರ್ಗವಾಗಿದೆ ಎಂದು ಅವರು ಹೇಳಿದರು. 2022 ರಲ್ಲಿ 4.6 ಲಕ್ಷ ರಸ್ತೆ ಅಪಘಾತಗಳು ನಡೆದಿದ್ದು, ಇದರಿಂದ 1.68 ಲಕ್ಷ ಸಾವು ಸಂಭವಿಸಿವೆ ಮತ್ತು 4 ಲಕ್ಷ ಜನರಿಗೆ ಗಂಭೀರ ಗಾಯಗಳಾಗಿವೆ ಎಂದು ಗಡ್ಕರಿ ಮಾಹಿತಿ ಒದಗಿಸಿದರು.
ಭಾರತೀಯ ರಸ್ತೆಗಳಲ್ಲಿ ಪ್ರತಿ ಗಂಟೆಗೆ 53 ರಸ್ತೆ ಅಪಘಾತಗಳು ಮತ್ತು 19 ಸಾವುಗಳು ಸಂಭವಿಸುತ್ತಿವೆ. ನಾಗರಿಕರ ಉತ್ತಮ ಸಂಚಾರ ನಡವಳಿಕೆಗೆ ಬಹುಮಾನ ನೀಡುವ ವ್ಯವಸ್ಥೆಯು ನಾಗ್ಪುರದಲ್ಲಿ ಸಕಾರಾತ್ಮಕ ಫಲಿತಾಂಶಗಳನ್ನು ನೀಡಿದೆ. ರಸ್ತೆ ಸುರಕ್ಷತೆಯ 4E ಗಳಾದ - ಎಂಜಿನಿಯರಿಂಗ್ (ರಸ್ತೆ ಮತ್ತು ವಾಹನ ಎಂಜಿನಿಯರಿಂಗ್) - ಜಾರಿಗೊಳಿಸುವಿಕೆ (Enforcement) - ಶಿಕ್ಷಣ ಮತ್ತು ತುರ್ತು ವೈದ್ಯಕೀಯ ಸೇವೆ (Education and Emergency Medical Service) ಯನ್ನು ಬಲಪಡಿಸುವತ್ತ ಗಮನ ಹರಿಸುವುದರ ಜೊತೆಗೆ ಸಾಮಾಜಿಕ ನಡವಳಿಕೆಯಲ್ಲಿ ಬದಲಾವಣೆ ಬಹಳ ಮುಖ್ಯ ಎಂದು ಸಚಿವರು ಇದೇ ವೇಳೆ ಹೇಳಿದರು.
ಇದನ್ನೂ ಓದಿ : ಸ್ಯಾಮ್ಸಂಗ್ ಹಿಂದಿಕ್ಕಿ ವಿಶ್ವದ ನಂ.1 ಸ್ಮಾರ್ಟ್ಫೋನ್ ಕಂಪನಿಯಾದ ಆ್ಯಪಲ್