ಕಲ್ಲಕುರಿಚಿ(ತಮಿಳುನಾಡು): 12ನೇ ತರಗತಿಯ ವಿದ್ಯಾರ್ಥಿನಿ ನಿಗೂಢ ಸಾವಿನಿಂದ ಆಕ್ರೋಶಗೊಂಡ ಜನರು ನಡೆಸಿದ ಪ್ರತಿಭಟನೆ ತಮಿಳುನಾಡಿನಲ್ಲಿ ಭಾರಿ ಹಿಂಸಾಚಾರ ಮತ್ತು ವಿಧ್ವಂಸಕ ಕೃತ್ಯಕ್ಕೆ ಕಾರಣವಾಗಿತ್ತು. ಇದೀಗ ಘಟನೆ ನಡೆದ ಕಲ್ಲಕುರಿಚಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಶಾಲೆಯ ಮೂವರನ್ನು ಬಂಧಿಸಲಾಗಿದೆ.
ಕಲ್ಲಕುರಿಚಿಯ ಖಾಸಗಿ ಶಾಲೆಯ ಹಾಸ್ಟೆಲ್ ಮೇಲಿಂದ ಬಿದ್ದು ವಿದ್ಯಾರ್ಥಿನಿಯೊಬ್ಬಳು ಸಾವನ್ನಪ್ಪಿದ್ದಳು ಎನ್ನಲಾಗಿತ್ತು. ಮೊದಲು ಇದನ್ನು ಆತ್ಮಹತ್ಯೆ ಎಂದು ಪರಿಗಣಿಸಲಾಗಿದೆ. ಮರಣೋತ್ತರ ಪರೀಕ್ಷೆಯಲ್ಲಿ ಬಾಲಕಿಯ ದೇಹದ ಮೇಲೆ ಗಾಯದ ಗುರುತುಗಳಿರುವುದು ಪತ್ತೆಯಾಗಿದೆ.
ಇದರಿಂದ ರೊಚ್ಚಿಗೆದ್ದ ವಿದ್ಯಾರ್ಥಿನಿ ಕುಟುಂಬಸ್ಥರು ಮತ್ತು ಬೆಂಬಲಿಗರು ಶಾಲೆಯ ಆವರಣಕ್ಕೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಹಾಕಲಾಗಿದ್ದ ಬ್ಯಾರಿಕೇಡ್ಗಳನ್ನು ಕೆಡವಿ ಪೊಲೀಸರ ಜೊತೆಗೇ ವಾಗ್ವಾದ ನಡೆಸಿ, ಕಲ್ಲು ತೂರಾಟ ನಡೆಸಿದ್ದರು. ಈ ಸಂದರ್ಭ ಪೊಲೀಸರೂ ಗಾಯಗೊಂಡಿದ್ದರು.
ವಾಹನಗಳಿಗೆ ಬೆಂಕಿ: ಉದ್ರಿಕ್ತರ ಗುಂಪು ಶಾಲೆಗೆ ನುಗ್ಗಿ ಪೀಠೋಪಕರಣಗಳನ್ನು ಹೊರ ತಂದು ಸುಟ್ಟು ಹಾಕಿದೆ. ಬಳಿಕ ಶಾಲೆಗೆ ಸೇರಿದ ವಾಹನಗಳನ್ನು ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾರೆ. ಶಾಲೆಯ ಗೋಡೆಯನ್ನೂ ಒಡೆದು ಹಾಕಲಾಗಿದೆ. ಭುಗಿಲೆದ್ದ ಹಿಂಸಾಚಾರಕ್ಕೆ ಕಲ್ಲಕುರಿಚಿ-ಸೇಲಂ ಹೆದ್ದಾರಿಯ ಶಾಲಾ ಆವರಣದ ಹೊರಗೆ ಸುಟ್ಟು ಕರಕಲಾದ ಬಸ್‌ಗಳು ಮತ್ತು ಧ್ವಂಸಗೊಂಡ ಶಾಲಾವರಣದಲ್ಲಿನ ಅವಶೇಷಗಳೇ ಸಾಕ್ಷಿಯಾಗಿವೆ.
ಗುಂಡು ಹಾರಿಸಿ ಹಿಂಸೆ ನಿಯಂತ್ರಣ: ನಿನ್ನೆ ನಡೆದ ಪ್ರತಿಭಟನೆಯನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟಿದ್ದರು. ಉದ್ರಿಕ್ತರನ್ನು ಚದುರಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಬೇಕಾಗಿತ್ತು.
ತೀವ್ರ ಹಿಂಸಾಚಾರ ನಡೆದ ಬಳಿಕ ಕಲ್ಲಕುರಿಚಿ ಬೂದಿ ಮುಚ್ಚಿ ಕೆಂಡದಂತಾಗಿದೆ. ಇದರಿಂದ ಮತ್ತೆ ಉದ್ವಿಗ್ನತೆ ಉಂಟಾಗದಿರಲು ಪೊಲೀಸರು ಶಾಲೆ ಸೇರಿದಂತೆ ಕಲ್ಲಕುರಿಚಿಯಲ್ಲಿ ಬಿಗಿ ಬಂದೋಬಸ್ತ್ ಮಾಡಿದ್ದಾರೆ. ತಮಿಳುನಾಡು ಡಿಜಿಪಿ ಸಿ.ಸೈಲೇಂದ್ರ ಬಾಬು, ಗೃಹ ಕಾರ್ಯದರ್ಶಿ ಫಣೀಂದ್ರ ರೆಡ್ಡಿ ಮತ್ತು ಅಧಿಕಾರಿಗಳು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪೊಲೀಸ್ ಸಿಬ್ಬಂದಿಯನ್ನು ಭೇಟಿ ಮಾಡಿದರು.
ಶಾಲೆಯ ಮೂವರ ಬಂಧನ: ಘಟನೆಗೆ ಸಂಬಂಧಿಸಿದಂತೆ ಶಕ್ತಿ ಮೆಟ್ರಿಕ್ಯುಲೇಷನ್ ಶಾಲೆಯ ರವಿಕುಮಾರ್, ಕಾರ್ಯದರ್ಶಿ ಶಾಂತಿ ಮತ್ತು ಪ್ರಾಂಶುಪಾಲ ಶಿವ ಶಂಕರನ್ರನ್ನು ಬಂಧಿಸಲಾಗಿದೆ. ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಲಾಗಿದೆ ಎಂದು ಡಿಜಿಪಿ ಸಿ.ಸೈಲೇಂದ್ರ ಬಾಬು ತಿಳಿಸಿದರು. ಪ್ರಕರಣವನ್ನು ಎಲ್ಲಾ ಕೋನಗಳಿಂದಲೂ ತನಿಖೆ ನಡೆಸಲಾಗುವುದು. ಹಿಂಸಾಚಾರದಲ್ಲಿ ತೊಡಗಬೇಡಿ ಮತ್ತು ವದಂತಿಗಳಿಗೆ ಗಮನ ಕೊಡಬೇಡಿ ಎಂದು ಗೃಹ ಕಾರ್ಯದರ್ಶಿ ಫಣೀಂದ್ರ ರೆಡ್ಡಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.