ಎರ್ನಾಕುಲಂ (ಕೇರಳ): ಮೆದುಳು ನಿಷ್ಕ್ರಿಯಗೊಂಡು ಸಾವಿಗೀಡಾದ ತಮಿಳುನಾಡಿನ ಶುಶ್ರೂಷಕರೊಬ್ಬರು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ತನ್ನ ಅಂಗಾಂಗಳನ್ನು ದಾನ ಮಾಡುವ ಮೂಲಕ 6 ಜನರ ಬಾಳಿಗೆ ಹೊಸ ಬೆಳಕು ನೀಡಲಿದ್ದಾರೆ. ಇದರಲ್ಲಿ ಕೊಚ್ಚಿಯ ವ್ಯಕ್ತಿಯೊಬ್ಬರಿಗೆ ಹೃದಯ ಕಸಿ ಮಾಡಲಾಗಿದೆ. ಇನ್ನೂ ಐವರಿಗೆ ವಿವಿಧ ಅಂಗಗಳನ್ನು ವೈದ್ಯರು ಜೋಡಿಸಲಿದ್ದಾರೆ.
ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ಶುಶ್ರೂಷಕ ಆಗಿದ್ದ ಸೆಲ್ವಿನ್ ಶೇಖರ್ (36) ಮೆದುಳು ನಿಷ್ಕ್ರಿಯದಿಂದ ಸಾವಿಗೀಡಾದವರು. ಪತ್ನಿಯೂ ನರ್ಸ್ ಆಗಿದ್ದು, ಪತಿಯ ಅಂಗಾಂಗ ದಾನ ಮಾಡಲು ಸ್ವಯಂ ಪ್ರೇರಿತರಾಗಿ ಮುಂದಾದರು.
ಸಾವು ತಂದ ಮೆದುಳಿನಲ್ಲಿ ರಕ್ತಸ್ರಾವ: ತೀವ್ರ ತಲೆನೋವಿನಿಂದ ಬಳಲುತ್ತಿದ್ದ ಶೇಖರ್ ಅವರು ಕನ್ಯಾಕುಮಾರಿ ಜಿಲ್ಲೆಯ ವಿಲವಂಕೋಡ್‌ನ ಆಸ್ಪತ್ರೆ, ತಿರುವನಂತಪುರಂನ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಪರೀಕ್ಷೆ ನಡೆಸಿದಾಗ ಮೆದುಳಿನಲ್ಲಿ ರಕ್ತಸ್ರಾವ ಆಗಿರುವುದು ಕಂಡು ಬಂದಿತ್ತು. ನವೆಂಬರ್ 24 ರಂದು ಚಿಕಿತ್ಸೆ ಪಡೆಯುತ್ತಿದ್ದಾಗ ಮೆದುಳು ನಿಷ್ಕ್ರಿಯವಾಗಿತ್ತು. ಬಳಿಕ ವೈದ್ಯರು ಶೇಖರ್ ನಿಧನ ಹೊಂದಿದ್ದಾಗಿ ತಿಳಿಸಿದ್ದರು. ಅಂಗಾಂಗ ದಾನದ ಮಹತ್ವ ತಿಳಿದಿದ್ದ ಪತ್ನಿ, ಶೇಖರ್ ಅವರ ಅಂಗಾಂಗ ದಾನಕ್ಕೆ ಮುಂದಾದರು.
ಅದರಂತೆ, ವೈದ್ಯರು ಅಂಗಾಂಗಗಳನ್ನು ಪಡೆದುಕೊಂಡಿದ್ದು, ಇಂದು (ನವೆಂಬರ್ 25) ಹೃದಯವನ್ನು ಹೆಲಿಕಾಪ್ಟರ್ ಮೂಲಕ ಕೇರಳದ ಕೊಚ್ಚಿಗೆ ತರಲಾಯಿತು. ಕಾಯಂಕುಲಂ ಮೂಲದ ಹರಿನಾರಾಯಣನ್ (16) ಎಂಬುವರಿಗೆ ಹೃದಯ ಕಸಿ ಮಾಡಲಾಯಿತು. ಬೆಳಗ್ಗೆ ಹತ್ತು ಗಂಟೆ ಸುಮಾರಿಗೆ ತಿರುವನಂತಪುರಂನಿಂದ ಕೊಚ್ಚಿಗೆ ಅಂಗಾಂಗಗಳನ್ನು ಸಾಗಿಸಲಾಯಿತು. ಹೃದಯವಿದ್ದ ಏರ್ ಆಂಬ್ಯುಲೆನ್ಸ್ ಎರ್ನಾಕುಲಂನ ಗ್ರ್ಯಾಂಡ್ ಹಯಾತ್ ಹೋಟೆಲ್‌ನ ಹೆಲಿಪ್ಯಾಡ್‌ನಲ್ಲಿ ಇಳಿಯಿತು. ನಂತರ, ರಸ್ತೆಯ ಮೂಲಕ ಲಿಸಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಅಲ್ಲಿ ಹೃದಯ ಶಸ್ತ್ರಚಿಕಿತ್ಸೆ ನಡೆಸಿದರು.
ಸೆಲ್ವಿನ್ ಶೇಖರ್ ಅವರ ಒಂದು ಕಿಡ್ನಿಯನ್ನು ತಿರುವನಂತಪುರದ ಕಿಮ್ಸ್ ಆಸ್ಪತ್ರೆಯ ರೋಗಿಗೆ ಮತ್ತು ಒಂದು ಕಿಡ್ನಿ ಮತ್ತು ಮೇದೋಜೀರಕ ಗ್ರಂಥಿಯನ್ನು ಕೊಚ್ಚಿಯ ಆಸ್ಟರ್ ಮೆಡ್ಸಿಟಿ ಆಸ್ಪತ್ರೆಯ ರೋಗಿಗೆ ಅಳವಡಿಸಲಾಗುತ್ತಿದೆ. ತಿರುವನಂತಪುರ ಕಣ್ಣಿನ ಆಸ್ಪತ್ರೆಯ ಇಬ್ಬರು ರೋಗಿಗಳಿಗೆ ತಲಾ ಒಂದು ಕಣ್ಣನ್ನು ವೈದ್ಯರು ನೀಡಲಿದ್ದಾರೆ. ಕೇರಳ ಸರ್ಕಾರದ ಮೃತಸಂಜೀವನಿ ಯೋಜನೆಯ ಮೂಲಕ ಅಂಗಾಂಗ ದಾನವನ್ನು ಪ್ರಚುರಪಡಿಸುತ್ತಿದೆ.
ಅಂಗಾಂಗ ದಾನ ನೀಡಿದ ವ್ಯಕ್ತಿಗೆ ಗೌರವ: ಆಂಧ್ರಪ್ರದೇಶದ ತಿರುಪತಿಯ ಚಿತ್ತೂರು ರಾಘವೇಂದ್ರ ನಗರದ ನಿವಾಸಿಯಾದ ಯುವರಾಜುಲು ನಾಯ್ಡು (61) ಎಂಬುವರು, ನವೆಂಬರ್ 3 ರಂದು ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ನಿಧನರಾಗಿದ್ದರು. ನಾಯ್ಡು ಅವರ ಕುಟುಂಬಸ್ಥರು ಎರಡು ಕಣ್ಣುಗಳು, ಎರಡು ಮೂತ್ರಪಿಂಡಗಳು, ಹೃದಯ, ಯಕೃತ್ತು, ಶ್ವಾಸಕೋಶ, ಕರುಳು ಮತ್ತು ಹೃದಯ ಕವಾಟಗಳನ್ನು ಚೆನ್ನೈನ ಆಸ್ಪತ್ರೆಗೆ ದಾನ ಮಾಡಿದ್ದರು. ಇದಕ್ಕೆ ಅಲ್ಲಿನ ಸರ್ಕಾರ ಸಕಲ ಗೌರವ ಸಲ್ಲಿಸಿತ್ತು.
ಇದನ್ನೂ ಓದಿ: ಅಂಗಾಂಗ ದಾನ ಮಾಡಿದ ವ್ಯಕ್ತಿಗೆ ಸರ್ಕಾರಿ ಗೌರವ ಸಲ್ಲಿಸಿದ ತಮಿಳುನಾಡು ಸರ್ಕಾರ