ನವದೆಹಲಿ: ಕೋವಿಡ್ ವೇಳೆಯಲ್ಲಿ ಶಾಲೆಗಳು ಮುಚ್ಚಿದ್ದಾಗ ವಿದ್ಯಾರ್ಥಿಗಳಿಗೆ ಪಾಠ ಮಾಡಲು ವಿನೂತನ ಮಾರ್ಗ ಕಂಡುಹಿಡಿದ ತಮಿಳುನಾಡು ಮೂಲದ ಶಿಕ್ಷಕಿಯನ್ನು ಪ್ರಧಾನಿ ಮೋದಿ ಮನ್ ಕಿ ಬಾತ್ನಲ್ಲಿ ಪ್ರಶಂಸಿಸಿದ್ದಾರೆ.
ಮನ್ ಕಿ ಬಾತ್ನ 72ನೇ ಆವೃತ್ತಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ ''ನಾನು ತಮಿಳುನಾಡಿನ ಶಿಕ್ಷಕಿಯೊಬ್ಬರ ಬಗ್ಗೆ ಓದಿದ್ದೆ. ಆಕೆಯ ಹೆಸರು ಹೇಮಲತಾ ಎನ್.ಕೆ. ಆಗಿದ್ದು, ಅವರು ಜಗತ್ತಿನ ಅತಿ ಹಳೆಯ ಭಾಷೆಗಳಲ್ಲಿ ಒಂದಾದ ತಮಿಳು ಭಾಷೆಯನ್ನು ಭೋದಿಸುತ್ತಿದ್ದು, ಕೋವಿಡ್ ವೇಳೆ ತಮ್ಮದೇ ಆದ ವಿನೂತನ ತಂತ್ರಗಳ ಮೂಲಕ ಮಕ್ಕಳಿಗೆ ಪಾಠ ಮಾಡಿದ್ದಾರೆ. ಪಾಠ ಮಾಡಲು ಕೊರೊನಾ ಸೋಂಕು ಅವರಿಗೆ ಯಾವುದೇ ಅಡ್ಡಿಯಾಗಿಲ್ಲ." ಎಂದು ಹೇಳಿದ್ದಾರೆ.
ಇದನ್ನೂ ಓದಿ: ಅಂತಾರಾಷ್ಟ್ರೀಯ ಗುಣಮಟ್ಟದ ವಸ್ತುಗಳನ್ನು ತಯಾರಿಸಿ; ಉದ್ಯಮಿಗಳಿಗೆ ಪ್ರಧಾನಿ ಕರೆ
'ತಮಿಳು ಪಠ್ಯದ ಎಲ್ಲಾ 53 ಅಧ್ಯಾಯಗಳನ್ನು ಅನಿಮೇಷನ್ ಮೂಲಕ ವಿಡಿಯೋ ಮಾಡಿ, ಅವುಗಳನ್ನು ಪೆನ್ ಡ್ರೈವ್ನಲ್ಲಿ ತುಂಬಿಸಿ, ತಮ್ಮ ವಿದ್ಯಾರ್ಥಿಗಳಿಗೆ ಅವರು ಹಂಚಿದ್ದಾರೆ. ಇದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಿದ್ದು, ದೃಶ್ಯಗಳ ಮೂಲಕ ವಿದ್ಯಾರ್ಥಿಗಳು ಪಾಠಗಳನ್ನು ಅರ್ಥ ಮಾಡಿಕೊಂಡಿದ್ದಾರೆ. ಇದರ ಜೊತೆಗೆ ಅವರು ವಿದ್ಯಾರ್ಥಿಗಳೊಂದಿಗೆ ದೂರವಾಣಿ ಮೂಲಕ ಸಂಪರ್ಕದಲ್ಲಿರುತ್ತಿದ್ದರು' ಎಂದು ಮೋದಿ ಹೇಳಿದ್ದಾರೆ.
ಇದು ಮಾತ್ರವಲ್ಲದೇ ಶಿಕ್ಷಕರು ತಮ್ಮ ಪಠ್ಯಪುಸ್ತಕದ ಸಾಮಗ್ರಿಗಳನ್ನು ಶಿಕ್ಷಣ ಇಲಾಖೆ ನಡೆಸುತ್ತಿರುವ ದೀಕ್ಷಾ ಪೋರ್ಟಲ್ನಲ್ಲಿ ಅಪ್ಲೋಡ್ ಮಾಡಿದರೆ ವಿದ್ಯಾರ್ಥಿಗಳಿಗೆ ಸಹಕಾರಿಯಾಗಲಿದೆ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ.